22 ವರ್ಷದ ಲಿವ್‌ ಇನ್‌ ಬಳಿಕ ರೇಪ್‌ ಕೇಸ್‌ - ಮಹಿಳೆ ಕೇಸ್‌ ರದ್ದುಪಡಿಸಿದ ಹೈಕೋರ್ಟ್‌ ಜಡ್ಜ್‌ ನಾಗಪ್ರಸನ್ನ

Published : Nov 19, 2024, 10:03 AM IST
Karnataka highcourt

ಸಾರಾಂಶ

ಬರೋಬ್ಬರಿ 22 ವರ್ಷ ಸಹಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಬೆಂಗಳೂರು : ಬರೋಬ್ಬರಿ 22 ವರ್ಷ ಸಹಜೀವನ ನಡೆಸಿದ ನಂತರ ಪ್ರಿಯತಮನ ವಿರುದ್ಧ ಮಹಿಳೆಯೊಬ್ಬಳು ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ರದ್ದುಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿದಂತೆ ಇನ್ನಿತರ ಆರೋಪಗಳ ಸಂಬಂಧ ತನ್ನ ವಿರುದ್ಧ ಮಾಜಿ ಗೆಳತಿಯು ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ನೆಲಮಂಗಲದ ನಿವಾಸಿ ಸತೀಶ್‌ ಎಂಬಾತ ಸಲ್ಲಿಸಿರುವ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ. ಆದೇಶ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ನಗರದ ಅಂದ್ರಹಳ್ಳಿಯಲ್ಲಿ ನೆಲೆಸಿರುವ ಗಂಗಾವತಿ ಎಂಬಾಕೆ ಮೊದಲಿಗೆ ಮಲ್ಲಯ್ಯ ಎಂಬುವವರನ್ನು ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಜನಿಸಿದ್ದರು. ಮಾರಣಾಂತಿಕ ರೋಗದಿಂದ ಪತಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ 2004ರಲ್ಲಿ ಬೆಂಗಳೂರಿಗೆ ಬಂದಿದ್ದ ಗಂಗಾವತಿ ಹೋಟೆಲ್‌ ಕೆಲಸಕ್ಕೆ ಸೇರಿದ್ದರು.

ಈ ವೇಳೆ ಪರಿಚಯವಾದ ಸತೀಶ್‌ ಜೊತೆಗೆ ಸಲುಗೆ ಬೆಳೆದಿತ್ತು. ಗಂಗಾವತಿಯನ್ನು ಮದುವೆಯಾಗಿ ಉತ್ತಮ ಜೀವನ ನೀಡುವುದಾಗಿ ಸತೀಶ್‌ ಸಹ ಭರವಸೆ ಸಹ ನೀಡಿದ್ದ. ಇದರಿಂದ ಸತೀಶ್‌ ಮನೆಯಲ್ಲಿಯೇ ಆಕೆ ವಾಸ ಮಾಡತೊಡಗಿದ್ದು, ಇಬ್ಬರ ನಡುವೆ ದೈಹಿಕ ಸಂಬಂಧ ಬೆಳೆದಿತ್ತು.

ನಂತರ ಸತೀಶ್‌ ತನ್ನ ಹುಟ್ಟೂರಿಗೆ ಹೋಗಿ ಹಿರಿಯರು ನಿಶ್ವಯಿಸಿದ್ದ ಹುಡುಗಿಯನ್ನು ವಿವಾಹವಾಗಿದ್ದರು. ಈ ವಿಚಾರ ತಿಳಿದ ಗಂಗಾವತಿ ತನ್ನನ್ನು ಮದುವೆಯಾಗುವಂತೆ ಸತೀಶ್‌ ಅವರನ್ನು ಬಲವಂತ ಮಾಡಿದ್ದರು. ಅದಕ್ಕೆ ನಿರಾಕರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ ಆರೋಪ ಸತೀಶ್‌ ಮೇಲಿತ್ತು. ಪರಿಣಾಮ ಸತೀಶ್‌ ವಿರುದ್ಧ ಗಂಗಾವತಿಯು ಅತ್ಯಾಚಾರ, ವಂಚನೆ, ಜೀವ ಬೆದರಿಕೆ, ಉದ್ದೇಶಪೂರ್ವಕವಾಗಿ ಅವಮಾನ ಮಾಡಿರುವುದು ಸೇರಿದಂತೆ ಇನ್ನಿತರ ಆರೋಪ ಹೊರಿಸಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಬ್ಯಾಡರಹಳ್ಳಿ ಠಾಣಾ ಪೊಲೀಸರು, ಸತೀಶ್‌ ವಿರುದ್ಧ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದು ಕೋರಿ ಸತೀಶ್‌ ಹೈಕೋರ್ಟ್‌ ಮೊರೆ ಹೋಗಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ