;Resize=(412,232))
ಬೆಂಗಳೂರು : ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯನ್ನಾಗಿ ಡಾ.ಬಿ.ಕೆ.ಮೀರಾ ಅವರನ್ನು ನೇಮಿಸಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ಮೀರಾ ಅವರ ನೇಮಕವನ್ನು ಪ್ರಶ್ನಿಸಿ ಕುಲಪತಿ ಹುದ್ದೆ ಆಕಾಂಕ್ಷಿಯೂ ಆಗಿರುವ ವಿಶ್ವವಿದ್ಯಾಲಯದ ಹ್ಯೂಮ್ಯಾನಿಟಿಸ್ ಮತ್ತು ಲಿಬರಲ್ ಆರ್ಟ್ಸ್ ಶಾಲೆಯ ನಿರ್ದೇಶಕ ಡಾ.ಟಿ.ಎಂ.ಮಂಜುನಾಥ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಆರ್.ನಟರಾಜ್ ಅವರ ಪೀಠ ಈ ಆದೇಶ ಮಾಡಿದೆ. ಕುಲಪತಿಯನ್ನು ನೇಮಕ ಮಾಡುವ ಅಧಿಕಾರ ಕುಲಾಧಿಪತಿಗೆ ಇದ್ದು, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕಾಯ್ದೆ ಸೆಕ್ಷನ್ 16(2)ರ ಪ್ರಕಾರ ಕುಲಪತಿ ಹುದ್ದೆಗೆ ಡೀನ್/ನಿರ್ದೇಶಕರು ಹೊರತುಪಡಿಸಿದಂತೆ ಇತರರನ್ನು ನೇಮಿಸಲಾಗದು ಎಂದು ನ್ಯಾಯಪೀಠ ಹೇಳಿದೆ.
ಮಹಾರಾಣಿ ಕ್ಲಸ್ಟರ್ ವಿವಿ ಕುಲಪತಿಯಾಗಿದ್ದ ಡಾ.ಸಿ.ಉಷಾದೇವಿ 2025ರ ಮಾ.31ರಂದು ಸೇವೆಯಿಂದ ನಿವೃತ್ತರಾದ ನಂತರ ಪ್ರಭಾರ ಕುಲಪತಿಯನ್ನಾಗಿ ಡಾ.ಬಿ.ಕೆ.ಮೀರಾ ಅವರನ್ನು ನೇಮಕ ಮಾಡಿ 2025ರ ಮಾ.28ರಂದು ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿದ್ದ ಅರ್ಜಿದಾರರು, ಮೀರಾ ಅವರು ಪ್ರಾಣಿಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿದ್ದಾರೆ. ಅವರ ನೇಮಕಾತಿ ಕಾನೂನು ಬಾಹಿರವಾಗಿದೆ. ಸೇವಾ ಹಿರಿತನದಲ್ಲಿ ಹಿರಿಯ ನಿರ್ದೇಶಕರಾದ ತಾವು ಪ್ರಭಾರ ವಿಸಿ ಹುದ್ದೆಗೆ ಅರ್ಹರಾಗಿದ್ದು, ಕಡಣಿಸಲಾಗಿದೆ ಎಂದು ಆಕ್ಷೇಪಿಸಿದ್ದರು.
ಮೀರಾ ಅವರ ನೇಮಕಾತಿಯನ್ನು ಸಮರ್ಥಿಸಿಕೊಂಡಿದ್ದ ಕುಲಾಧಿಪತಿಗಳ ಕಚೇರಿ (ರಾಜ್ಯಪಾಲರು)/ಸರ್ಕಾರ, ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯುವ ಮಹಿಳಾ ವಿವಿ ಆಗಿದೆ. ಹೀಗಾಗಿ, ಮಹಿಳೆಯನ್ನೇ ವಿಸಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಹೇಳಿತ್ತು.
ಈ ವಾದ ಒಪ್ಪದ ಹೈಕೋರ್ಟ್, ಮಹಾರಾಣಿ ಕ್ಲಸ್ಟರ್ ವಿವಿ ಮಹಿಳಾ ವಿವಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಹಿಳೆಯರನ್ನು ಮಾತ್ರ ಕುಲಪತಿಯನ್ನಾಗಿ ನೇಮಕ ಮಾಡಬೇಕೆಂಬುದಕ್ಕೆ ಯಾವುದೇ ದಾಖಲೆಗಳನ್ನು ಸರ್ಕಾರ ಸಲ್ಲಿಸಿಲ್ಲ. ಜತೆಗೆ ಅರ್ಜಿದಾರರನ್ನು ಕುಲಪತಿ ಹುದ್ದೆಗೆ ಪರಿಗಣಿಸದಿರುವುದಕ್ಕೆ ಅದುವೇ ಕಾರಣ ಎಂದು ಅಧಿಸೂಚನೆಯಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಇನ್ನೂ ಅರ್ಜಿದಾರರು ತಮ್ಮನ್ನೇ ಕುಲಪತಿಯಾಗಿ ನೇಮಕ ಮಾಡಿ ಆದೇಶಿಸುವಂತೆ ಕೋರಿದ್ದಾರೆ. ನ್ಯಾಯಾಲಯ ಆ ಆದೇಶವನ್ನು ಮಾಡಲಾಗದು, ಕಾನೂನು ಪ್ರಕಾರ ಅವರನ್ನು ಕುಲಪತಿಯಾಗಿ ನೇಮಕ ಮಾಡುವ ಬಗ್ಗೆ ಸರ್ಕಾರ/ರಾಜ್ಯಪಾಲರ ಕಚೇರಿ ಪರಿಶೀಲಿಸಬಹುದು ಎಂದು ಆದೇಶಿಸಿದೆ.