ಇಸ್ರೋಗಾಗಿ 81 ಎಕರೆ ಜಮೀನು ಸ್ವಾಧೀನ ಅಧಿಸೂಚನೆ ರದ್ದುಪಡಿಸಿದ ಹೈಕೋರ್ಟ್‌

Published : Jul 08, 2025, 10:09 AM IST
Karnataka High Court (Photo/ANI)

ಸಾರಾಂಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಾಗಿ (ಇಸ್ರೋ) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಬ್ಬಚಿಕ್ಕನಹಳ್ಳಿ ಮತ್ತು ಲಾಲಗೊಂಡನಹಳ್ಳಿ ಗ್ರಾಮಗಳಲ್ಲಿ 81 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

 ಬೆಂಗಳೂರು :  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಾಗಿ (ಇಸ್ರೋ) ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಬ್ಬಚಿಕ್ಕನಹಳ್ಳಿ ಮತ್ತು ಲಾಲಗೊಂಡನಹಳ್ಳಿ ಗ್ರಾಮಗಳಲ್ಲಿ 81 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಭೂ ಸ್ವಾಧೀನ ಪ್ರಕ್ರಿಯೆ ಸಂಬಂಧ ಹೊರಡಿಸಿದ್ದ ಅಧಿಸೂಚನೆ ರದ್ದು ಕೋರಿ ದೇವನಹಳ್ಳಿ, ಬೆಂಗಳೂರು ಮತ್ತು ಹೈದ್ರಾಬಾದ್‌ ಮೂಲದ ಭೂಮಾಲಿಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣಕುಮಾರ್ ಅವರ ನ್ಯಾಯಪೀಠ ಈ ಆದೇಶ ನೀಡಿದೆ.

ಈ ಜಮೀನುಗಳ ಸ್ವಾಧೀನಕ್ಕೆ 2010ರ ಜ.28ರಂದು ಪ್ರಾಥಮಿಕ ಅಧಿಸೂಚನೆ ಹಾಗೂ 2011ರ ಮೇ 30ರಂದು ಅಂದರೆ ಒಂದು ವರ್ಷದ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. ಜೊತೆಗೆ, 2013ರ ಜು.19ರಂದು ಭೂ ಮಾಲೀಕರಿಗೆ ಪರಿಹಾರವನ್ನೂ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಭೂ ಮಾಲೀಕರು, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದ ಅಂತ್ಯದ ವೇಳೆಗೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಭೂ ಸ್ವಾಧೀನ ಕಾಯ್ದೆ ಸೆಕ್ಷನ್‌ 6(2)ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಹೀಗಾಗಿ, ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡಬೇಕು ಎಂದು ಕೋರಿದ್ದರು.

ಈ ವಾದ ಪುರಸ್ಕರಿಸಿದ ನ್ಯಾಯಪೀಠ, ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಒಂದು ವರ್ಷದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿಲ್ಲ. ಈ ವಿಳಂಬದ ಕುರಿತು ವಿಚಾರಣೆ ನಡೆಸಿಲ್ಲ. ನಿಯಮಗಳನ್ನು ಉಲ್ಲಂಘಿಸಿ ಸ್ವಾಧೀನ ಪ್ರಕ್ರಿಯೆ ನಡೆಸಿದ್ದು, ಅಂತಿಮ ಅಧಿಸೂಚನೆ ಅಂಗೀಕರಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಇಸ್ರೋ 2013ರ ಜು.19ರಂದು ಪರಿಹಾರ ಘೋಷಣೆ ಮಾಡಲಾಗಿದೆ ಎಂದು ಹೇಳಿವೆ. ಆದರೆ, ಅದನ್ನು ಸ್ಪಷ್ಟಪಡಿಸಲು ಯಾವುದೇ ದಾಖಲೆಗಳನ್ನು ಒದಗಿಸಿಲ್ಲ. ಒಂದು ವರ್ಷದ ಬಳಿಕ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ನೋಟಿಸ್‌ ನೀಡಲಾಗಿದೆ. ಈ ಎಲ್ಲ ಕಾರಣಗಳಿಂದ ಅಧಿಸೂಚನೆ ರದ್ದುಪಡಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

PREV
Read more Articles on