;Resize=(412,232))
ಬೆಂಗಳೂರು : ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಕ್ರಮವಾಗಿ ಶೇ.15ರಿಂದ ಶೇ.17 ಹಾಗೂ ಶೇ.3ರಿಂದ ಶೇ.7ಕ್ಕೆ ಹೆಚ್ಚಳ ಮಾಡಿ ಜಾರಿಗೆ ತರಲಾಗಿದ್ದ ಕಾಯ್ದೆಯನ್ನು ರದ್ದುಪಡಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಈ ಕಾಯ್ದೆಯಿಂದ ರಾಜ್ಯದಲ್ಲಿದ್ದ ಒಟ್ಟು ಮೀಸಲಾತಿ ಪ್ರಮಾಣ ಶೇ.50ರಿಂದ 56ಕ್ಕೆ ಹೆಚ್ಚಳವಾಗಿತ್ತು. ಇದು ಸಂವಿಧಾನದ ಪರಿಚ್ಛೇದ 14 ಮತ್ತು 15ರ ಉಲ್ಲಂಘನೆಯಾಗಿರುವ ಕಾರಣ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ- 2022’ರ ಸೆಕ್ಷನ್ 3 ಮತ್ತು 4 ಅನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಈ ಕಾಯ್ದೆಯ ಸೆಕ್ಷನ್ 3ರಡಿ ಪ.ಜಾತಿ ಮತ್ತು ಪ. ಪಂಗಡಗಳ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ 2023ರ ಜ.13ರಂದು ಜಾರಿಗೆ ತಂದು ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.
ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ರಾಯಚೂರಿನ ಡಾ.ಅಂಬೇಡ್ಕರ್ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಮಹೇಂದ್ರ ಕುಮಾರ್ ಮಿತ್ರಾ, ತುಮಕೂರು ಜಿಲ್ಲೆ ತಿಪಟೂರಿನ ಎಚ್.ಆರ್.ಸಾಗರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ಪ್ರಕಟಿಸಿದೆ.
ಕಾಯ್ದೆಯ ಸೆಕ್ಷನ್ 3ರಡಿ ಎಸ್‌ಸಿ ವರ್ಗಗಳ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹೆಚ್ಚಿಸಿರುವುದು ಹಾಗೂ ಎಸ್‌ಟಿ ವರ್ಗಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸುವ ಮೂಲಕ ಒಟ್ಟು ಮೀಸಲಾತಿಯನ್ನು ಶೇ.50ರ ಮಿತಿಗಿಂತ ಶೇ.56ಕ್ಕೆ ಹೆಚ್ಚಿಸಿರುವುದು ಸಂವಿಧಾನದ ಪರಿಚ್ಛೇದ 14 ಮತ್ತು 15ರ ಉಲ್ಲಂಘನೆ. ಆದ ಕಾರಣ ಕಾಯ್ದೆಯ ಸೆಕ್ಷನ್ 3 ಮತ್ತು 4ನ್ನು ರದ್ದುಪಡಿಸಲಾಗುತ್ತಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಈ ಆದೇಶದಿಂದ ರಾಜ್ಯ ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳ ನೇಮಕಾತಿಗಳ ಮೇಲೆ ಪರಿಣಾಮ ಬೀರಲಿದೆ.
ಈ ಹಿಂದೆ ಕೆಎಎಸ್ ಅಧಿಕಾರಿಗಳ ಹುದ್ದೆಗಳು ಸೇರಿ ಬೇರೆ ಬೇರೆ ಹುದ್ದೆಗಳ ನೇಮಕಾತಿ ಇದೇ ಶೇ.56ರ ಮೀಸಲಾತಿ ಪ್ರಮಾಣ ಆಧರಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಮೀಸಲು ಹೆಚ್ಚಳ ಪ್ರಶ್ನಿಸಿ ಕೆಲವರು ಕೋರ್ಟ್‌ಗೆ ಬಂದಿದ್ದರು. ಈ ವೇಳೆ ಕೋರ್ಟ್ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಿ, ಅಂತಿಮ ಆಯ್ಕೆಯು ಕೋರ್ಟ್ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿತ್ತು.
ಇದೀಗ ಹೈಕೋರ್ಟ್ ಮೀಸಲು ಹೆಚ್ಚಳ ರದ್ದುಗೊಳಿಸಿರುವುದರಿಂದ ಸಹಜವಾಗಿ ನೇಮಕಾತಿ ಮೇಲೆ ಪರಿಣಾಮ ಬೀರುತ್ತದೆ. ಹೊಸ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡದ ವರ್ಗದ ಅಭ್ಯರ್ಥಿಗಳಿಗೆ ಶೇ.50ರಷ್ಟು ಮೀಸಲಾತಿ ಮಾತ್ರ ನೀಡಬೇಕಿರುತ್ತದೆ. ಒಂದೊಮ್ಮೆ ಹಳೆಯ ಮೀಸಲು ಪ್ರಮಾಣ ಶೇ.56ರಷ್ಟು ಉಳಿಸಿಕೊಳ್ಳಬೇಕಾದರೆ, ಸುಪ್ರೀಂ ಕೋರ್ಟ್ ಮೊರೆ ಹೋಗಿ ಈ ತೀರ್ಪಿಗೆ ತಡೆಯಾಜ್ಞೆ ತರಬೇಕಾಗುತ್ತದೆ.
ಮೀಸಲಾತಿ ಪ್ರಮಾಣ ಶೇ.50ರ ಗರಿಷ್ಠ ಮಿತಿಯ ವಿಷಯಕ್ಕೆ ಬಂದರೆ, ಸಂವಿಧಾನದ 16ನೇ ವಿಧಿಯ ಉಪ ವಿಧಿ (4)ರ ಅಡಿಯಲ್ಲಿನ ಮೀಸಲಾತಿಗೆ ಅನ್ವಯವಾಗುವಂತೆಯೇ, ಸಂವಿಧಾನದ 15ನೇ ವಿಧಿಯ ಉಪ ವಿಧಿ (4)ರ ಅಡಿಯಲ್ಲಿನ ಮೀಸಲಾತಿಗೂ ಇದು ಸಮಾನವಾಗಿ ಅನ್ವಯಿಸುತ್ತದೆ. ಆದ್ದರಿಂದ, ಅಸಾಧಾರಣ ಸಂದರ್ಭಗಳಲ್ಲಿ ವಿನಾಯ್ತಿಗೆ ಅರ್ಹ ಹಾಗೂ ಬಲವಾದ ಕಾರಣ ಸಾಬೀತುಪಡಿಸದ ಹೊರತು ರಾಜ್ಯ ಈ ಮಿತಿ ಮೀರುವುದನ್ನು ಅನುಮತಿಸುವುದು ಅರ್ಹವಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.
ಸಂವಿಧಾನದ ವಿಧಿ 338ರ ಉಪ ವಿಧಿ (9) ಮತ್ತು ವಿಧಿ 338ಎರ ಉಪ ವಿಧಿ (9)ರ ಪ್ರಕಾರ, ಪರಿಶಿಷ್ಟ ಜಾತಿಗಳು ಅಥವಾ ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರುವ ಎಲ್ಲ ಪ್ರಮುಖ ನೀತಿ ವಿಷಯಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸುವಂತೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಈ ಕಾಯ್ದೆಯನ್ನು ಜಾರಿಗೆ ತರುವ ಮೊದಲು ರಾಜ್ಯ ಸರ್ಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆಯೇ ನಡೆಸಿಲ್ಲ ಎಂದು ಪೀಠ ತೀರ್ಪಿನಲ್ಲಿ ಆಕ್ಷೇಪಿಸಿದೆ.
ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿ ಈ ಕಾಯ್ದೆ ರೂಪಿಸಲು ರಾಜ್ಯ ಶಾಸಕಾಂಗಕ್ಕೆ ಶಾಸನಬದ್ಧ ಅಧಿಕಾರವಿದೆ ಎಂಬುದರಲ್ಲಿ ಯಾವುದೇ ವಿವಾದವಿಲ್ಲ. ಆದಾಗ್ಯೂ, ಸಂವಿಧಾನದ 245 ಮತ್ತು 246ನೇ ವಿಧಿಗಳ ಅಡಿಯಲ್ಲಿನ ಅಧಿಕಾರ ಸಂವಿಧಾನದ ಇತರ ನಿಬಂಧನೆಗಳಿಂದ ನಿಯಂತ್ರಿಸಲ್ಪಡುವುದಿಲ್ಲ ಅಥವಾ ಮಿತಿಗೊಳಿಸಲ್ಪಡುವುದಿಲ್ಲ ಎಂದು ಸರ್ಕಾರ ಪ್ರತಿಪಾದಿಸುವುದು ತಪ್ಪಾಗುತ್ತದೆ. ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲೆ ಪರಿಣಾಮ ಬೀರುವ ಎಲ್ಲ ಪ್ರಮುಖ ನೀತಿ ವಿಷಯಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸುವಂತೆ 338 ಮತ್ತು 338ಎ ವಿಧಿಗಳ ಉಪ ವಿಧಿ (9) ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುತ್ತದೆ. ಇದು ಒಂದು ಸಾಂವಿಧಾನಿಕ ಅವಶ್ಯಕತೆಯಾಗಿದೆ. ಅದನ್ನು ನಿರ್ಲಕ್ಷಿಸುವಂತಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.
ಸಂವಿಧಾನದ ವಿಧಿ 338ರ ಉಪ ವಿಧಿ (9) ಮತ್ತು ವಿಧಿ 338ಎರ ಉಪ ವಿಧಿ (9)ರ ಅಡಿಯಲ್ಲಿ ಅಗತ್ಯವಿರುವ ‘ಸಮಾಲೋಚನೆ’ಯನ್ನು, ಕೇವಲ ಕಾಯ್ದೆ ಜಾರಿಗೆ ತಂದ ನಂತರ ಪತ್ರ ಬರೆಯುವ ಮೂಲಕ ಪೂರೈಸಲಾಗಿದೆ ಎಂದು ಸರ್ಕಾರ ಮಂಡಿಸಿರುವ ವಾದ ಪರಿಗಣಿಸಲಾಗುವುದಿಲ್ಲ. ಕಾಯ್ದೆ ಜಾರಿಗೆ ಬಂದ ಸುಮಾರು ಮೂರು ವರ್ಷಗಳ ನಂತರ ಮತ್ತು ಕಾಯ್ದೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ ತರುವಾಯ ರಾಜ್ಯ ಸರ್ಕಾರ 2025ರ ಡಿ.10 ಮತ್ತು 2026ರ ಜ.20ರಂದು ಪತ್ರಗಳನ್ನು ಬರೆದಿದೆ. ಅದನ್ನು ಒಪ್ಪಲಾಗದು. ಸಮಾಲೋಚನೆಯು ಅರ್ಥಪೂರ್ಣ ಮತ್ತು ಪರಿಣಾಮಕಾರಿಯಾಗಿರಬೇಕಾದರೆ, ಅದು ನಿರ್ಧಾರ ಕೈಗೊಳ್ಳುವ ಮೊದಲೇ ನಡೆಯಬೇಕು ಎಂದು ಪೀಠ ಹೇಳಿದೆ.
ಕೋರ್ಟ್ ಹೇಳಿದ್ದೇನು?
- ಕಾಯ್ದೆಯ ಸೆಕ್ಷನ್ 3ರಡಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಿಸುವ ಮೂಲಕ ಒಟ್ಟು ಮೀಸಲಾತಿಯನ್ನು ಶೇ.50ರ ಮಿತಿಗಿಂತ ಶೇ.56ಕ್ಕೆ ಹೆಚ್ಚಿಸಿರುವುದು ಸಂವಿಧಾನದ ಪರಿಚ್ಛೇದ 14, 15ರ ಉಲ್ಲಂಘನೆ
- ಅಸಾಧಾರಣ ಸಂದರ್ಭಗಳಲ್ಲಿ ವಿನಾಯ್ತಿಗೆ ಅರ್ಹ, ಬಲವಾದ ಕಾರಣ ಸಾಬೀತುಪಡಿಸದ ಹೊರತು ಶೇ.50ರ ಮೀಸಲಾತಿ ಮಿತಿಯನ್ನು ರಾಜ್ಯ ಮೀರುವುದು ಅರ್ಹವಲ್ಲ
- ಎಸ್ಸಿ, ಎಸ್ಟಿ ಮೇಲೆ ಪರಿಣಾಮ ಬೀರುವ ಪ್ರಮುಖ ನೀತಿ ವಿಷಯಗಳ ಕುರಿತು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆ ನಡೆಸಬೇಕು
- ಈ ಪ್ರಕರಣದಲ್ಲಿ ಕಾಯ್ದೆ ಜಾರಿಗೆ ತರುವ ಮೊದಲು ರಾಜ್ಯ ಸರ್ಕಾರ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ ಹಾಗೂ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗದೊಂದಿಗೆ ಸಮಾಲೋಚನೆಯೇ ನಡೆಸಿಲ್ಲ