ಬೆಂಗಳೂರು : ಎಚ್‌ಎಂಟಿ ಸ್ವಾಧೀನದಲ್ಲಿರುವ ಅರಣ್ಯ ಭೂಮಿಯನ್ನು ಡಿ-ನೋಟಿಫಿಕೇಷನ್‌ಗಾಗಿ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ (ಐಎ) ಸಲ್ಲಿಸಿದ ಇಬ್ಬರು ಮಾಜಿ ಮತ್ತು ಇಬ್ಬರು ಹಾಲಿ ಅಧಿಕಾರಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದ್ದು, ಇದೀಗ ಅವರ ವಿರುದ್ಧ ಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿ, ಎಚ್‌ಎಂಟಿ ಬಳಿ 14 ಸಾವಿರ ಕೋಟಿ ರು.ಗೂ ಹೆಚ್ಚಿನ ಮೌಲ್ಯದ ಅರಣ್ಯ ಭೂಮಿಯಿದೆ. ಆ ಅರಣ್ಯ ಭೂಮಿ ಉಳಿಸುವುದು ನಮ್ಮ ಗುರಿ. ಎಚ್ಎಂಟಿ ಭೂಮಿಯನ್ನು ಡಿ-ನೋಟಿಫೈ ಮಾಡಲು ಅವಕಾಶ ನೀಡುವುದಿಲ್ಲ. ಆದರೆ, ಆ ಭೂಮಿಯನ್ನು ಅರಣ್ಯೇತರ ಉದ್ದೇಶಕ್ಕೆ ಡಿ-ನೋಟಿಫಿಕೇಷನ್ ಅನುಮತಿ ಕೋರಿ ರಾಜ್ಯ ಸರ್ಕಾರದ ಗಮನಕ್ಕೆ ತಾರದೆಯೇ ಸುಪ್ರೀಂಕೋರ್ಟ್‌ಗೆ ಐಎ ಸಲ್ಲಿಸಿದ್ದ ಇಬ್ಬರು ನಿವೃತ್ತ ಐಎಎಸ್, ಐಎಫ್‌ಎಸ್ ಮತ್ತು ಇಬ್ಬರು ಹಾಲಿ ಐಎಫ್‌ಎಸ್ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಅದರ ಜತೆಗೆ ಅವರ ವಿರುದ್ಧ ನಿಯಮದಂತೆ ಕ್ರಮ ಕೈಗೊಳ್ಳುವುದಕ್ಕೂ ಶಿಫಾರಸು ಮಾಡಲಾಗಿದೆ ಎಂದರು.
ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಶಾಸಕರನ್ನು ರಕ್ಷಿಸಲು ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಆರ್.ಗೋಕುಲ್ ಸಿಬಿಐಗೆ ಪತ್ರ ಬರೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಇದು ಸರ್ಕಾರದ ವಿರುದ್ಧ ಮಾಡಿರುವ ಸುಳ್ಳು ಆರೋಪ ಎಂದರು.
ಎಚ್‌ಎಂಟಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿರುವ ಅಧಿಕಾರಿಗಳ ಪೈಕಿ ಗೋಕುಲ್ ಕೂಡ ಒಬ್ಬರು. 2024ರ ಸೆಪ್ಟೆಂಬರ್ 24ರಂದು ನಾನು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ಟಿಪ್ಪಣಿ ಕಳುಹಿಸಿ, ಸಚಿವ ಸಂಪುಟದ ಪೂರ್ವಾನುಮತಿ ಇಲ್ಲದೆ ಎಚ್‌ಎಂಟಿ ವಶದಲ್ಲಿರುವ ಅರಣ್ಯ ಭೂಮಿಗೆ ಸಂಬಂಧಿಸಿದ ಐಎ ಹಾಕಿರುವ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ ಕ್ರಮ ಜರುಗಿಸುವಂತೆ ಸೂಚಿಸಿದ್ದೇನೆ. ಸೂಚನೆ ನೀಡಿದ ಒಂದು ತಿಂಗಳ ನಂತರ ಅಕ್ಟೋಬರ್ 2024ರಲ್ಲಿ ಬೇಲಿಕೇರಿ ಪ್ರಕರಣದ ತೀರ್ಪು ಬಂದಿದೆ. ಆರ್.ಗೋಕುಲ್ ಅವರು ತಮ್ಮ ತಪ್ಪು ಮುಚ್ಚಿಕೊಳ್ಳಲು ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಿ ಸಿಬಿಐಗೆ ಪತ್ರ ಬರೆದಿದ್ದಾರೆ. ಇದು ಅಧಿಕಾರಿ ದುರ್ವರ್ತನೆ ಅಥವಾ ಬೆದರಿಕೆ ತಂತ್ರ ಎಂದು ಭಾವಿಸಬಹುದಾಗಿದೆ ಎಂದು ಹೇಳಿದರು.
ಎಚ್‌ಎಂಟಿ ಅರಣ್ಯ ಭೂಮಿಯನ್ನು ನಾನೇ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಈಗಲೂ 280 ಎಕರೆಯಷ್ಟು ನೆಡುತೋಪಿದೆ. ಆದರೂ, ಆ ಭೂಮಿ ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಸುಪ್ರೀಂಕೋರ್ಟ್‌ಗೆ ಐಎ ಸಲ್ಲಿಸಲಾಗಿದೆ. ತಮ್ಮ ರಕ್ಷಣೆಗಾಗಿ ಸಿಬಿಐಗೆ ಪತ್ರ ಬರೆಯುವ ಅಧಿಕಾರಿ, ಎಚ್‌ಎಂಟಿ ಭೂಮಿಯಲ್ಲಿ ಅರಣ್ಯವಿದೆ. ಅದು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಐಎ ಸಲ್ಲಿಸಲು ಬರುವುದಿಲ್ಲ ಎಂದು ಆಗಿನ ಮುಖ್ಯಮಂತ್ರಿ ಅವರಿಗೆ ಏಕೆ ಪತ್ರ ಬರೆಯಲಿಲ್ಲ ಎಂದು ಪ್ರಶ್ನಿಸಿದರು.