ರಾಜ್ಯ ಸರ್ಕಾರದ ಕೆಲ ಪ್ರಮುಖ ಇಲಾಖೆಗಳಲ್ಲಿ ಸಚಿವರು ಕಾಮಗಾರಿ ಬಿಲ್ ಪಾವತಿಗೆ ಸಂಬಂಧಿಸಿ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳ ಟೆಂಡರ್‌ನಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳದಂತೆ ಬೆದರಿಕೆ ಹಾಕಿ ತಡೆ ಒಡ್ಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಬೆಂಗಳೂರು : ರಾಜ್ಯ ಸರ್ಕಾರದ ಕೆಲ ಪ್ರಮುಖ ಇಲಾಖೆಗಳಲ್ಲಿ ಸಚಿವರು ಕಾಮಗಾರಿ ಬಿಲ್ ಪಾವತಿಗೆ ಸಂಬಂಧಿಸಿ ಪಕ್ಷಪಾತ ಮಾಡುತ್ತಿದ್ದಾರೆ ಎಂಬ ಆರೋಪದ ಬೆನ್ನಲ್ಲೇ, ಲೋಕೋಪಯೋಗಿ ಇಲಾಖೆಯಲ್ಲಿ ಕಾಮಗಾರಿಗಳ ಟೆಂಡರ್‌ನಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳದಂತೆ ಬೆದರಿಕೆ ಹಾಕಿ ತಡೆ ಒಡ್ಡುತ್ತಿರುವ ಗಂಭೀರ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಸರ್ಕಾರದಲ್ಲೂ ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳಲಾಗುತ್ತಿದೆ ಎಂಬ ಆರೋಪ ಗುತ್ತಿಗೆದಾರರು ಮಾಡಿದ್ದರು. ಜತೆಗೆ ಸಣ್ಣ ನೀರಾವರಿ ಇಲಾಖೆ ಸೇರಿ ಕೆಲ ಇಲಾಖೆಗಳಲ್ಲಿ ಬಿಲ್ ಪಾವತಿಯಲ್ಲಿ ಪಕ್ಷಪಾತ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿತ್ತು.
ಇದೀಗ ಲೋಕೋಪಯೋಗಿ ಇಲಾಖೆ ಅಡಿ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ (ಕೆಶಿಪ್) ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಪಾಲ್ಗೊಳ್ಳುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಗುತ್ತಿಗೆದಾರರು ದೂರು ಕೂಡ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹೊಸಕೋಟೆ-ಮಾಲೂರು ರಸ್ತೆಯಲ್ಲಿ ಅಕ್ರಮ:
ರಾಷ್ಟ್ರೀಯ ಹೆದ್ದಾರಿ ಮಾದರಿಯಲ್ಲಿ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆಗಳ ಅಭಿವೃದ್ಧಿ ಜತೆಗೆ ರಸ್ತೆ ಬದಿಯಲ್ಲಿ ಹೈಬ್ರಿಡ್ ಅಮ್ಯುನಿಟಿ ಅಳವಡಿಕೆಗೆ ಕೆಶಿಪ್ ಯೋಜನೆ ರೂಪಿಸಿದೆ. ಅದರಂತೆ ವೇಮಗಲ್‌ನಿಂದ ತಮಿಳುನಾಡು ಗಡಿವರೆಗಿನ ರಸ್ತೆ ಹಾಗೂ ಹೊಸಕೋಟೆಯಿಂದ ಮಾಲೂರುವರೆಗೆ ಮತ್ತು ಮಾಲೂರು ಎಲಿವೇಟೆಡ್ ಕಾರಿಡಾರ್‌ನ ಮಾಲೂರು ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಯೋಜಿಸಲಾಗಿದೆ. ಅದಕ್ಕೆ ಸಂಬಂಧಿಸಿ ಹಿಂದೆಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗಿದ್ದು, ಏ.16 ಬಿಡ್ ಸಲ್ಲಿಕೆಗೆ ಕೊನೆಯ ದಿನ ಆಗಿತ್ತು.
ಇದರ ನಡುವೆಯೇ ಹೊಸಕೋಟೆಯಿಂದ ಮಾಲೂರುವರೆಗೆ ಮತ್ತು ಮಾಲೂರು ಎಲಿವೇಟೆಡ್ ಕಾರಿಡಾರ್ ನ ಮಾಲೂರು ಕೈಗಾರಿಕಾ ಪ್ರದೇಶದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಕೆಲ ಗುತ್ತಿಗೆ ಸಂಸ್ಥೆಗಳಿಗೆ ಪ್ರಭಾವಿಗಳಿಂದ ಬೆದರಿಕೆಯೊಡ್ಡಲಾಗುತ್ತಿದೆ. ತಮ್ಮ ಪರವಾದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಬೇಕು ಎಂಬ ಉದ್ದೇಶದಿಂದ ಈ ರೀತಿ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಖಾಸಗಿ ಗುತ್ತಿಗೆ ಸಂಸ್ಥೆ ಪ್ರತಿನಿಧಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಲಿಖಿತ ದೂರು ನೀಡಿದ್ದು, ಟೆಂಡರ್‌ನಲ್ಲಿ ಬಿಡ್ ಸಲ್ಲಿಕೆಗೆ ಅವಕಾಶ ನೀಡದೆ ಬೆದರಿಕೆ ಹಾಕುತ್ತಿರುವ ಬಗ್ಗೆ ಉಲ್ಲೇಖಿಸಿದ್ದಾರೆ.
ಟೆಂಡರ್ ಪ್ರಕ್ರಿಯೆಯೇ ಮುಂದಕ್ಕೆ:
ಹೀಗೆ ಟೆಂಡರ್ ಪ್ರಕ್ರಿಯೆಗೆ ಸಂಬಂಧಿಸಿ ಏ.19ರಂದು ಸಲ್ಲಿಕೆಯಾದ ಬಿಡ್ ತೆರೆದು ಮುಂದಿನ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಕೇಶಿಪ್ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ತಾಂತ್ರಿಕ ಕಾರಣ ಎದುರಾಗಿದ್ದು. ಸದ್ಯಕ್ಕೆ ಪ್ರಕ್ರಿಯೆಗಳನ್ನೆಲ್ಲ ಸ್ಥಗಿತಕ್ಕೆ ಅನುಮತಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.