ಐ ಆ್ಯಮ್‌ ವೆರಿ ಸಾರಿ, ಈ ರೀತಿ ಆಗಬಾರದಿತ್ತು : ಶಿವಕುಮಾರ್‌

Published : Jun 05, 2025, 04:31 AM IST
Karnataka Deputy Chief Minister DK Shivakumar (Photo/ANI)

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದ ನಮಗೂ ಬಹಳ ನೋವಾಗಿದೆ. ಐ ಆ್ಯಮ್‌ ವೆರಿ ಸಾರಿ. ಈ ರೀತಿ ಆಗಬಾರದಿತ್ತು. ಅಚಾತುರ್ಯದ ಈ ಘಟನೆ ನಡೆದಿದೆ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದ ನಮಗೂ ಬಹಳ ನೋವಾಗಿದೆ. ಐ ಆ್ಯಮ್‌ ವೆರಿ ಸಾರಿ. ಈ ರೀತಿ ಆಗಬಾರದಿತ್ತು. ಅಚಾತುರ್ಯದ ಈ ಘಟನೆ ನಡೆದಿದೆ. ದೇಶಮಟ್ಟದಲ್ಲಿ ಅವಮಾನ ಆಗಿದೆ. ಕಪ್‌ ಗೆದ್ದ ಆರ್‌ಸಿಬಿ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲು ಅನುಮತಿ ನೀಡಿಲ್ಲ ಎಂದು ಬಿಜೆಪಿಯವರೇ ಟೀಕಿಸಿದ್ದರು. ಇದೀಗ ಅವರೇ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರು ಅಧಿಕೃತವಾಗಿ ಮಾಡಿರುವ ಟ್ವೀಟ್‌ ಒಮ್ಮೆ ಓದಿ. ‘ಹಲವಾರು ವರ್ಷಗಳಿಂದ ಆರ್‌ಸಿಬಿ ಅಭಿಮಾನಿಗಳು ಕಂಡ ಕನಸು ಈಗ ನನಸಾಗಿದೆ. ಅವರಿಗೆ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಬರಲು ಆಕಸ್ಮಿಕ ಗೃಹ ಸಚಿವ ಅನುಮತಿ ನೀಡದೆ ತಾವೊಬ್ಬ ಅಸಮರ್ಥ ಎಂದು ಸಾಬೀತು ಮಾಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬಾರದೇ?’ ಎಂದು ಒತ್ತಾಯಿಸಿದ್ದರು. ಆದರೆ ಈಗ ಅವರೇ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಕೇಳದೆ ಕಾರ್ಯಕ್ರಮ ಪಟ್ಟಿ ಬಿಡುಗಡೆ:

ಆರ್‌ಸಿಬಿಯವರು ನಮ್ಮನ್ನು ಕೇಳದೆ ಅವರ ಕಾರ್ಯಕ್ರಮ ಬಿಡುಗಡೆ ಮಾಡಿಬಿಟ್ಟರು. ಆ ಬಗ್ಗೆ ನಾನು ಯಾರನ್ನೂ ದೂರಲು ಹೋಗುವುದಿಲ್ಲ. ಅಚಾತುರ್ಯ ಆಗಬಾರದು ಎಂಬ ಕಾರಣಕ್ಕಾಗಿಯೇ ವಿಮಾನ ನಿಲ್ದಾಣದವರೆಗೆ ಹೋಗಿ ಕ್ಲೋಸ್ಡ್‌ ವಾಹನದಲ್ಲೇ ಕರೆದುಕೊಂಡು ಬಂದೆವು. ಜತೆಗೆ ಸನ್ಮಾನ ಕಾರ್ಯಕ್ರಮಕ್ಕೆ ಯಾರೂ ಬರಬಾರದು ಎಂದೂ ಹೇಳಿದ್ದೆವು. ಇಷ್ಟು ದೊಡ್ಡ ವ್ಯಾಮೋಹ, ಜನರ ಭಾವನೆ ತಡೆಯಲು ಆಗಿಲ್ಲ. ನಿಯಂತ್ರಿಸಲಾಗದಷ್ಟು ಜನದಟ್ಟಣೆ ಉಂಟಾಗಿ ದುರ್ಘಟನೆ ನಡೆದಿದೆ. ನಾನು ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳಿದರು.

ಗುಪ್ತಚರ ಇಲಾಖೆ ವೈಫಲ್ಯವೇ ಎಂಬ ಪ್ರಶ್ನೆಗೆ, ಮನೆ ಮನೆಯಿಂದಲೂ ಚಿಕ್ಕ ಮಕ್ಕಳು, ಮಹಿಳೆಯರನ್ನೆಲ್ಲ ಕರೆದುಕೊಂಡು ಬಂದರೆ ಯಾವ ಗುಪ್ತಚರ ಇಲಾಖೆಯಾದರೂ ಏನು ಮಾಡಬಹುದು. ಘಟನೆ ನಡೆದಿದ್ದರಿಂದ ಆರ್‌ಸಿಬಿಯವರಿಗೆ ಮನವಿ ಮಾಡಿ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಿದ್ದೇವೆ. ಅದನ್ನೂ ಟೀಕೆ ಮಾಡುತ್ತಿದ್ದಾರೆಂದು ಶಿವಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

PREV
Read more Articles on

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ