ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 11 ಮಂದಿ ಬಲಿ

Published : Jun 05, 2025, 04:21 AM IST
Crowd mismanagement at Chinnaswamy stadium

ಸಾರಾಂಶ

ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ.

ಬೆಂಗಳೂರು :  ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳ ನೂಕುನುಗ್ಗಲಿನಲ್ಲಿ ಕಾಲ್ತುಳಿತ ಸಂಭವಿಸಿದ್ದು, 11 ಅಭಿಮಾನಿಗಳು ಸಾವನ್ನಪ್ಪಿದ್ದಾರೆ. ಒಬ್ಬರಿಗೆ ಹೃದಯಾಘಾತವಾದರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ರವಾನಿಸುವ ವೇಳೆ ಸಾವಿಗೀಡಾಗಿದ್ದಾರೆ. ಉಳಿದಂತೆ ಇನ್ನೂ 20ಕ್ಕೂ ಅಧಿಕ ಜನರ ಸ್ಥಿತಿ ಗಂಭೀರವಾಗಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವೊಜಯೋತ್ಸವ ಕಾರ್ಯಕ್ರಮವನ್ನು 5 ಗಂಟೆಗೆ ಆಯೋಜನೆ ಮಾಡಲಾಗಿತ್ತು. ಇದಕ್ಕೂ ಮುನ್ನ ಕ್ರೀಡಾಂಗಣಕ್ಕೆ ಅಭಿಮಾನಿಗಳ ಪ್ರವೇಶಕ್ಕೆ ಎರಡು ಗೇಟ್‌ಗಳನ್ನು ಮಾತ್ರ ನಿಗದಿ ಮಾಡಲಾಯಿತು. ಈ ವೇಳೆ ಮುಂಬದಿಯಲ್ಲಿದ್ದ ಎಲ್ಲ ಅಭಿಮಾನಿಗಳನ್ನು 17ನೇ ಗೇಟ್‌ಗೆ ಕಳಿಸಿ ಅಲ್ಲಿಂದ ಪ್ರವೇಶ ಪಡೆಯುವಂತೆ ಸೂಚಿಸಲಾಯಿತು. ಆಗ ಸುಮಾರು 20 ಸಾವಿರಕ್ಕೂ ಅಧಿಕ ಅಭಿಮಾನಿಗಳು ಏಕಾಏಕಿ ಹಿಂಬದಿಯ ಗೇಟ್‌ ಬಳಿ ಹೋಗಿ ನಿಂತುಕೊಂಡಿದ್ದರು. ಈ ವೇಳೆ ಗೇಟ್‌ನಿಂದ ಒಬ್ಬೊಬ್ಬರನ್ನೇ ಪರಿಶೀಲನೆ ಮಾಡಿ ಬಿಡುವುದನ್ನು ತಡೆದುಕೊಳ್ಳಲಾರದ ಅಭಿಮಾನಿಗಳ ನೂಕು ನುಗ್ಗಲು ಹೆಚ್ಚಾಗಿ ಗೇಟ್ ಅನ್ನು ಮುರಿದು ಒಳಗೆ ನುಗ್ಗಿದ್ದಾರೆ. ಈ ವೇಳೆ ಗೇಟ್ ಮುಂದೆಯೇ ನಿಂತಿದ್ದ 20ಕ್ಕೂ ಅಧಿಕ ಜನರು ಕಾಲ್ತುಳಿತಕ್ಕೆ ಸಿಲುಕಿದ್ದಾರೆ.

ಕಾಲ್ತುಳಿತ ಸಂಭವಿಸುತ್ತಿದ್ದಂತೆ ನಿಯಂತ್ರಣ ಸಿಗದ ಅಭಿಮಾನಿಗಳು ಕಾಲಡಿ ಸಿಕ್ಕವರ ಮೇಲೆಯೇ ಹತ್ತಿಕೊಂಡು ಹೋಗಿದ್ದು, ಇದರಿಂದ ಗಂಭೀರ ಗಾಯಗೊಂಡವರನ್ನು ಎಳೆದುಕೊಂಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ 11 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ನಾಲ್ಕು ಜನರ ಸ್ಥಿತಿ ಗಂಭೀರವಾಗಿದೆ.

 ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗಿವ ಸಾಧ್ಯತೆ:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದ ಗಂಭೀರತೆ ಇನ್ನೂ ನಿರೀಕ್ಷೆಗೂ ಹೆಚ್ಚಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗಲಿದೆ ಎಂದು ತಿಳಿದುಬಂದಿದೆ. ಆಸ್ಪತ್ರೆ ಮೂಲಗಳ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 11 ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರ್ಕಾರ ಅಥವಾ ಪೊಲೀಸ್ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದಿಲ್ಲ. ಆರ್‌ಸಿಬಿ ಆಟಗಾರರು ವಿಧಾನಸೌಧದ ಬಳಿ ಸರ್ಕಾರದಿಂದ ಸನ್ಮಾನ ಸ್ವೀಕರಿಸುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.

ಸರ್ಕಾರದಿಂದ ಗೌರವ ಸ್ವೀಕರಿಸಿದ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ವಿಜಯೋತ್ಸವ ಆಚರಣೆ ಮಾಡಬೇಕಿತ್ತು. ಆದರೆ, ಅಭಿಮಾನಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರವೇಶ ಅವಕಾಶವನ್ನು ನೀಡುವಲ್ಲಿ ಮೀನಾಮೇಷ ಎಣಿಸಿ ಗಂಟೆಗೊಂದು ಹೇಳಿಕೆ ನೀಡುತ್ತಾ ಅಭಿಮಾನಿಗಳು ಗುಂಪು ಸೇರಿ ಪರದಾಡುವಂತೆ ಮಾಡಿತ್ತು. ಇದರ ಪರಿಣಾಮವಾಗಿ ಅಲ್ಲಿಂದಿಲ್ಲಿಗೆ ಗುಂಪಾಗಿ ಓಡಾಡಿದ ಅಭಿಮಾನಿಗಳು ಕ್ರೀಡಾಂಗಣದ ಹಿಂಬದಿ ಬಂದು ನಿಂತುಕೊಂಡಾಗ ನಿಯಂತ್ರಣ ಸಿಗದೇ ಕಾಲ್ತುಳಿತ ಸಂಭವಿಸಿದೆ.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ