ಕಮಲ್‌ ವಿರುದ್ಧ ಮುಂದುವರಿದ ಹೋರಾಟ : ಬೆಳಗಾವಿ, ಮೈಸೂರಲ್ಲಿ ಪ್ರತಿಭಟನೆ

Published : Jun 03, 2025, 11:07 AM IST
kamal hassan, vikram, indian2

ಸಾರಾಂಶ

ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲಹಾಸನ್ ಹೇಳಿಕೆ ಖಂಡಿಸಿ ಸೋಮವಾರವೂ ಪ್ರತಿಭಟನೆ ಮುಂದುವರೆದಿದೆ. ಮೈಸೂರು, ಬೆಳಗಾವಿ ಸೇರಿದಂತೆ ವಿವಿಧಡೆ ಪ್ರತಿಭಟನೆ ನಡೆಸಲಾಗಿದೆ.

 ಮೈಸೂರು/ಬೆಳಗಾವಿ : ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದೆ ಎಂಬ ನಟ ಕಮಲಹಾಸನ್ ಹೇಳಿಕೆ ಖಂಡಿಸಿ ಸೋಮವಾರವೂ ಪ್ರತಿಭಟನೆ ಮುಂದುವರೆದಿದೆ. ಮೈಸೂರು, ಬೆಳಗಾವಿ ಸೇರಿದಂತೆ ವಿವಿಧಡೆ ಪ್ರತಿಭಟನೆ ನಡೆಸಲಾಗಿದೆ.

ಮೈಸೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಗರದ ಹಾರ್ಡಿಂಜ್ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಲಾಯಿತು. ಈ ವೇಳೆ ವಾಟಾಳ್ ನಾಗರಾಜ್ ಮಾತನಾಡಿ, ನಟ ಕಮಲ್ ಹಾಸನ್ ಕನ್ನಡ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಾರೆ. ಕರ್ನಾಟಕದಿಂದ ಕಮಲಹಾಸನ್ ಬಹಿಷ್ಕರಿಸಬೇಕು. ಅವರ ಸಿನಿಮಾ ರಾಜ್ಯದಲ್ಲಿ ಬಿಡುಗಡೆಯಾಗಬಾರದು ಎಂದು ಆಗ್ರಹಿಸಿದರು.

ಪದ್ಮಾ ಚಿತ್ರಮಂದಿರದ ಮುಂಭಾಗದಲ್ಲಿ ಪಾತಿ ಫೌಂಡೇಶನ್ ಹಾಗೂ ಕರ್ನಾಟಕ ಹಿತರಕ್ಷಣಾ ವೇದಿಕೆಯವರು ಕಮಲ್ ಹಾಸನ್ ಭಾವಚಿತ್ರ ಸುಟ್ಟು ಪ್ರತಿಭಟಿಸಿದರು.

ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟಿಸಿ, ಕಮಲ್‌ ಹಾಸನ್‌ ಕೂಡಲೇ ಕನ್ನಡಿಗರ ಬಳಿ ಕ್ಷಮೆ ಕೇಳಬೇಕೆಂದು ಕರವೇ ಕಾರ್ಯಕರ್ತರ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಡ್ಡಗೋಡೆ ಮೇಲೆ ನಟ ಶಿವಣ್ಣ ದೀಪ ಇಡಬಾರದು: ಅಶೋಕ್‌ 

ಕನ್ನಡ ಭಾಷೆ ಕುರಿತ ನಟ ಕಮಲ್‌ ಹಾಸನ್ ಅವರ ಹೇಳಿಕೆ ಸಂಬಂಧ ನಟ ಶಿವರಾಜ್‌ ಕುಮಾರ್ ಅವರು ಅಡ್ಡಗೋಡೆ ಮೇಲೆ ದೀಪ ಇಡಬಾರದು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ತೀಕ್ಷ್ಣವಾಗಿ ಹೇಳಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳು ಅಥವಾ ಮಲಯಾಳಂ ಬಗ್ಗೆ ಯಾರಾದರೂ ಹೀಗೆ ಹೇಳಿದ್ದರೆ ಏನಾಗುತ್ತಿತ್ತು? ನಮ್ಮ ಕನ್ನಡ ಅಷ್ಟು ಕೇವಲವೇ. ಸಿನಿಮಾ ನಟರು ನಮಗಿಂತ ದೊಡ್ಡವರು. ಅವರಿಗೆ ಕೈ ಮುಗಿದು ಕೇಳುತ್ತೇನೆ. ಶಿವರಾಜ್ ಕುಮಾರ್ ಅವರು ಈ ಸಮಯದಲ್ಲಿ ತಮ್ಮ ನಿಲುವು ಸ್ಪಷ್ಟವಾಗಿ ಹೇಳಬೇಕು ಎಂದು ಆಗ್ರಹಿಸಿದರು.

ನಟ ಕಮಲ್‌ ಹಾಸನ್ ದುರಹಂಕಾರಿ. ತಮ್ಮ ಹೇಳಿಕೆ ಬಗ್ಗೆ ಕ್ಷಮಾಪಣೆ ಕೇಳುವುದಿಲ್ಲ ಎಂದಿದ್ದಾರೆ. ಕರ್ನಾಟಕದಲ್ಲಿ ಕಮಲ್ ಹಾಸನ್ ಯಾವುದೇ ಚಿತ್ರ ಪ್ರದರ್ಶನಕ್ಕೆ ಅವಕಾಶ ಕೊಡಬಾರದು. ಕನ್ನಡ ವಿಚಾರ ಬಂದಾಗ ಪರಭಾಷಿಕರನ್ನು ಸುಮ್ಮನೆ ಬಿಡಬಾರದು ಎಂದರು.

ಕಮಲ್‌ ಹೇಳಿಕೆ ವಿಷಯದಲ್ಲಿ ರಾಜಕೀಯ ಮಾಡಲ್ಲ: ಡಿಕೆಶಿ

ನಟ ಕಮಲ್‌ ಹಾಸನ್‌ ಅವರು ನೀಡಿರುವ ಹೇಳಿಕೆಯನ್ನು ರಾಜಕೀಯ ವಿಷಯ ಮಾಡಲು ಇಷ್ಟವಿಲ್ಲ. ನಾವು ಹಾಗೂ ತಮಿಳರು ಶತ್ರುಗಳಲ್ಲ ಬದಲಿಗೆ ಮಿತ್ರರು. ಹೀಗಾಗಿ ಎಲ್ಲರೂ ಶಾಂತಿಯಿಂದ ವರ್ತಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಮಲ್‌ ಹಾಸನ್‌ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಏಕೆಂದರೆ ನನಗೆ ಇತಿಹಾಸ ಗೊತ್ತಿಲ್ಲ. ವಾಸ್ತವಾಂಶ ಅರಿತು ಆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ಹೇಳಿದರು.

ಇನ್ನು ವಿವಾದದ ಬಗ್ಗೆ ಮಾತನಾಡಿದ ಅವರು, ಕಾವೇರಿ ನೀರನ್ನು ನಾವು ತಮಿಳುನಾಡಿಗೆ ನೀಡುತ್ತೇವೆ. ಅಲ್ಲಿನ ಸಾಕಷ್ಟು ಜನ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನಮ್ಮ ಜೀವನದಲ್ಲಿ ಯಾವುದೂ ಶಾಶ್ವತ ಅಲ್ಲ. ನಾವು ಹಾಗೂ ತಮಿಳುನಾಡಿನವರು ಶತ್ರುಗಳಲ್ಲ. ಮಿತ್ರರು ಹಾಗೂ ನೆರೆ ಹೊರೆಯವರು. ಹೀಗಾಗಿ ಎಲ್ಲರೂ ಶಾಂತಿಯುತವಾಗಿ ಹಾಗೂ ಸಂಯಮವಾಗಿ ವರ್ತಿಸಬೇಕು ಎಂದು ಹೇಳಿದರು.

ಕಮಲ್‌ ಕ್ಷಮೆಯಾಚನೆಗೆ ಇಂದು ಮಧ್ಯಾಹ್ನದವರೆಗೆ ಡೆಡ್‌ಲೈನ್‌ 

ಕನ್ನಡಿಗರನ್ನು ಕೆಣಕಿರುವ ನಟ ಕಮಲ್‌ ಹಾಸನ್‌ ಅವರಿಂದ ಕ್ಷಮೆ ಕೇಳಿಸುವುದಕ್ಕೆ ಮಂಗಳವಾರ ಮಧ್ಯಾಹ್ನದವರೆಗೂ ಕಾಯುವ ನಿರ್ಧಾರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬಂದಿದೆ ಎಂದು ತಿಳಿದು ಬಂದಿದೆ.

ಸೋಮವಾರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಮೊದಲು ಸೋಮವಾರದವರೆಗೂ ಡೆಡ್‌ಲೈನ್‌ ನೀಡಿದ್ದ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ಪ್ರಮುಖ ಅಂಗಸಂಸ್ಥೆಗಳು, ಈಗ ಮತ್ತೊಂದು ದಿನಕ್ಕೆ ಡೆಡ್‌ಲೈನ್‌ ಅನ್ನು ವಿಸ್ತರಣೆ ಮಾಡಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಈ ಕುರಿತು ಮಾತನಾಡಿ, ‘ಕಮಲ್‌ ಹಾಸನ್‌ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು ಯಾವುದೇ ಹೋರಾಟ ಮಾಡಿದರೂ ನಾವು ಅವರ ಜತೆಗೆ ಇರುತ್ತೇವೆ. ಸರ್ಕಾರ ಕೂಡ ಈ ವಿಚಾರವನ್ನು ಗಮನಿಸಿದ್ದು, ಸರ್ಕಾರದ ನಿರ್ಧಾರಕ್ಕೆ ವಾಣಿಜ್ಯ ಮಂಡಳಿ ಬದ್ಧವಾಗಿದೆ. ಕಾನೂನು ಬಾಹಿರವಾಗಿ ನಾವು ಯಾವುದೇ ರೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಕೋರ್ಟ್‌ಗೆ ಹೋದರೂ ಕೂಡ ಕಮಹಲ್‌ ಹಾಸನ್‌ ‘ಥಗ್‌ ಲೈಫ್‌’ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಬಿಡಲ್ಲ ಎಂದು ನಾನು ಎಲ್ಲೂ ಹೇಳಿಲ್ಲ. ವಿತರಕರು ಹಾಗೂ ಪ್ರದರ್ಶಕರೇ ಈ ಚಿತ್ರವನ್ನು ಪ್ರದರ್ಶಿಸಲು ರೆಡಿ ಇಲ್ಲ. ಅವರ ಜತೆಗೆ ನಾವು ನಿಲ್ಲುತ್ತೇವೆ ಎಂದು ಹೇಳಿದ್ದೇನೆ’ ಎಂದು ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ 12 ಗಂಟೆಗೆ ದುಬೈನಿಂದ ಕಮಲ್‌ ಹಾಸನ್‌ ಚೆನ್ನೈಗೆ ಬರಲಿದ್ದಾರೆ. ಚೆನ್ನೈನಲ್ಲಿ ‘ಥಗ್‌ ಲೈಫ್‌’ ಚಿತ್ರಕ್ಕೆ ಸಂಬಂಧಪಟ್ಟ ವಿತರಕರ ಜತೆಗೆ ಸಭೆ ನಡೆಯಲಿದೆ. ಹೀಗಾಗಿ ಮಂಗಳವಾರ ಮಧ್ಯಾಹ್ನದ ನಂತರ ಕಮಲ್‌ ಹಾಸನ್‌ ನಿರ್ಧಾರ ಗೊತ್ತಾಗಲಿದೆ.

- ಉಮೇಶ್‌ ಬಣಕಾರ್‌, ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!