ತಾಂತ್ರಿಕ ಶಿಕ್ಷಣಕ್ಕೆ ₹2600 ಕೋಟಿ ಸಾಲದ ಬಲ: ಸಚಿವ ಸುಧಾಕರ್‌

Published : Jun 03, 2025, 11:34 AM IST
Dr MC Sudhakar

ಸಾರಾಂಶ

ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಬಲಗೊಳಿಸಲು ಏಷ್ಯಾ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ)ನಿಂದ 2,600 ಕೋಟಿ ರು. ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ

  ಬೆಂಗಳೂರು: ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣವನ್ನು ಬಲಗೊಳಿಸಲು ಏಷ್ಯಾ ಡೆವಲಪ್‌ಮೆಂಟ್‌ ಬ್ಯಾಂಕ್‌ (ಎಡಿಬಿ)ನಿಂದ 2,600 ಕೋಟಿ ರು. ಸಾಲ ಪಡೆಯಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ಉನ್ನತ ಶಿಕ್ಷಣ ಇಲಾಖೆಯ ಆದೇಶಗಳನ್ನು ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ತಲುಪಿಸುವ ಉದ್ದೇಶದೊಂದಿಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಹೊರತಂದಿರುವ ‘ಕರ್ನಾಟಕ ಉನ್ನತ ಶಿಕ್ಷಣ’ ತ್ರೈಮಾಸಿಕವನ್ನು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗಾರರೊಂದಿಗೆ ಸಚಿವರು ಮಾತನಾಡಿದರು.

ಸಾಲ ಪಡೆಯಲು ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ನಿರ್ವಹಣೆಯ ಇಲಾಖೆ ಒಪ್ಪಿಗೆ ನೀಡಿದೆ. ಈ ಸಂಬಂಧ ಎಡಿಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಈಗಾಗಲೇ ಎಡಿಬಿ ಅಧಿಕಾರಿಗಳು ನಮ್ಮ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಸದ್ಯದಲ್ಲೇ ಸಾಲ ಬಿಡುಗಡೆಯಾಗಲಿದೆ. ಈ ಹಣದಿಂದ ನಮ್ಮ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜುಗಳನ್ನು ಸುಧಾರಿಸಿ ಕೌಶಲ್ಯಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಇಲಾಖೆಯ ಕಾರ್ಯದರ್ಶಿ ಕೆ.ಜಿ. ಜಗದೀಶ್, ಕೆಇಎ ಕಾರ್ಯಕಾರಿ ನಿರ್ವಾಹಕ ಹೆಚ್. ಪ್ರಸನ್ನ, ಉನ್ನತ ಶಿಕ್ಷಣ ಪರಿಷತ್‌ ಉಪಾಧ್ಯಕ್ಷ ಎಸ್.ಆರ್. ನಿರಂಜನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ವಾರ ನೂತನ ಶಿಕ್ಷಣ ನೀತಿ ವರದಿ:

ರಾಜ್ಯಕ್ಕೆ ಹೊಸ ಶಿಕ್ಷಣ ನೀತಿ ಜಾರಿಗೊಳಿಸಲು ರಚಿಸಿರುವ ಸುಖದೇವ್ ಥೋರಟ್ ಸಮಿತಿಯು ತನ್ನ ಕಾರ್ಯವನ್ನು ಮುಗಿಸಿದ್ದು, ಜೂನ್ ಎರಡನೇ ವಾರದಲ್ಲಿ ಮುಖ್ಯಮಂತ್ರಿಯವರಿಗೆ ವರದಿ ಸಲ್ಲಿಸುವ ಉದ್ದೇಶ ಹೊಂದಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದರು.

PREV
Read more Articles on

Recommended Stories

ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ
ಡಿಕೆ ಮಹದಾಯಿ ಹೇಳಿಕೆಗೆ ಗೋವಾ ಸಿಎಂ ಆಕ್ರೋಶ