;Resize=(412,232))
ಬೆಂಗಳೂರು : ವಿಶ್ವಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಿರುವ ತಮ್ಮ ‘ಬಸವ ಮಂಟಪ’ ಕೃತಿ ಹಾಗೂ ತಮ್ಮ ಹೇಳಿಕೆ ವಿರುದ್ಧ ಜನಾಕ್ರೋಶ ತೀವ್ರ ಸ್ವರೂಪಕ್ಕೆ ತಿರುಗಿದ ಬೆನ್ನಲ್ಲೇ ವಿವಾದಿತ ಕೃತಿಯ ಕರ್ತೃ ರವಿ ಹಂಜ್ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.
ವಿವಾದ ತೀವ್ರ ಸ್ವರೂಪ ಪಡೆದ ಬಳಿಕ ಎಚ್ಚೆತ್ತ ಸರ್ಕಾರ ಲೇಖಕನ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೇ ತಲೆಮರೆಸಿಕೊಂಡಿರುವ ರವಿ ಹಂಜ್ ಅಜ್ಞಾತ ಸ್ಥಳದಿಂದ ಕ್ಷಮಾಪಣೆ ಕೋರಿ ಬಿಡುಗಡೆ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದು ಎಫ್‌ಐಆರ್ ದಾಖಲಿಸುವ ಮೊದಲು ಬಿಡುಗಡೆಯಾದ ವಿಡಿಯೋ ಎನ್ನಲಾಗಿದೆ.
ಕೆಲ ದಿನಗಳ ಹಿಂದೆ ನಾನು ಖಾಸಗಿ ಟಿವಿ ಸಂದರ್ಶನದಲ್ಲಿ ಜಗಜ್ಯೋತಿ ಬಸವೇಶ್ವರರ ಕುರಿತು ಮಾತನಾಡಿದ್ದನ್ನು ಕೆಲವರು ತಪ್ಪಾಗಿ ಗ್ರಹಿಸಿದ್ದಾರೆ. ಇದರಿಂದ ವೀರಶೈವ ಲಿಂಗಾಯತ ಬಂಧುಗಳಿಗೆ ನೋವುಂಟಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಅಷ್ಟೇ ಅಲ್ಲದೆ ಕ್ಷಮೆಯನ್ನೂ ಯಾಚಿಸುತ್ತೇನೆ ಎಂದು ರವಿಹಂಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಅಲ್ಲದೆ, ಇದೇ ವಿಡಿಯೋದಲ್ಲಿ ಬಸವಮಂಟಪ ಕೃತಿಯನ್ನು ಪ್ರತಿ ಜಿಲ್ಲೆಯಲ್ಲೂ ಮರು ಬಿಡುಗಡೆ ಮಾಡುವಂತೆ ನೀವೆಲ್ಲರೂ ಬಯಸಿದ್ದೀರಿ. ಅದರಂತೆ ಮರುಬಿಡುಗಡೆ ಕಾರ್ಯಕ್ರಮವನ್ನು ಸದ್ಯದಲ್ಲೇ ಆಯೋಜಿಸಲಿದ್ದೇವೆ. ಇದಕ್ಕೆ ಎಲ್ಲರ ಸಹಕಾರವಿರಲಿ ಎಂದೂ ಹೇಳಿದ್ದಾರೆ. ಇದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಬಸವಣ್ಣನವರ ಬಗ್ಗೆ ‘ಕಳ್ಳ, ಕೊಲೆಗಾರ, ದರೋಡೆಕೋರ’ ಎಂಬೆಲ್ಲ ಅವಹೇಳನಕಾರಿ ಅಂಶಗಳಿರುವ ವಿವಾದಿತ ಕೃತಿ ಮತ್ತು ಅದರ ಲೇಖಕನ ವಿರುದ್ಧ ವೀರಶೈವ ಲಿಂಗಾಯತ ಸೇರಿ ಅನೇಕ ಸಮುದಾಯಗಳ ಜನ ತೀವ್ರ ಆಕ್ರೋಶ, ಖಂಡನೆ ವ್ಯಕ್ತಪಡಿಸಿ ರಾಜ್ಯದ ವಿವಿಧೆಡೆ ಪ್ರತಿಭಟನೆ ನಡೆಸಿದ್ದಾರೆ. ಕೂಡಲೇ ಕೃತಿ ಮುಟ್ಟುಗೋಲು ಹಾಕಿಕೊಂಡು ಲೇಖಕ ರವಿ ಹಂಜ್‌ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹ ವ್ಯಕ್ತವಾಗಿತ್ತು.
ಆಕ್ರೋಶ ತೀವ್ರ ಸ್ವರೂಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಸವ ಮಂಟಪ ಕೃತಿ ಮುಟ್ಟುಗೋಲು ಹಾಕಿಕೊಂಡು ಅದರ ಲೇಖಕ ರವಿ ಹಂಜ್ ಹಾಗೂ ಕೃತಿಯ ಪ್ರಕಾಶಕರ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಿತ್ತು. ಅದರಂತೆ ಎಫ್‌ಐಆರ್ ಕೂಡ ದಾಖಲಿಸಿ ತನಿಖೆ ನಡೆಸಲಾಗಿದೆ.