ಬ್ರಾಹ್ಮಣರ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ : ವಿರೋಧ ಪಕ್ಷದ ನಾಯಕ ಆರ್. ಅಶೋಕ್

Published : Jan 20, 2025, 10:11 AM IST
R Ashok

ಸಾರಾಂಶ

ಬ್ರಾಹ್ಮಣರ ಆಶೀರ್ವಾದದಿಂದ ನಾನು ಪದ್ಮನಾಭನಗರದಿಂದ ಗೆದ್ದು ಬಂದಿದ್ದೇನೆ. ಹಿಂದೂ ಸಮಾಜ ಉಳಿಯಲು ಬ್ರಾಹ್ಮಣರ ಕೊಡುಗೆ ಬಹಳ ದೊಡ್ಡದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ಬೆಂಗಳೂರು : ಬ್ರಾಹ್ಮಣರ ಆಶೀರ್ವಾದದಿಂದ ನಾನು ಪದ್ಮನಾಭನಗರದಿಂದ ಗೆದ್ದು ಬಂದಿದ್ದೇನೆ. ಹಿಂದೂ ಸಮಾಜ ಉಳಿಯಲು ಬ್ರಾಹ್ಮಣರ ಕೊಡುಗೆ ಬಹಳ ದೊಡ್ಡದು ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು.

ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬ್ರಾಹ್ಮಣ ಮಹಾಸಮ್ಮೇಳನದ 2ನೇ ದಿನವಾದ ಭಾನುವಾರದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ, ನೆರೆಯ ಬಾಂಗ್ಲಾದೇಶ ಸೇರಿ ವಿವಿಧೆಡೆ ನಡೆಯುತ್ತಿರುವ ಘಟನೆಗಳನ್ನು ಗಮನಿಸಿದಾಗ ಹಿಂದೂಗಳು ಎಚ್ಚರದಿಂದ ಇರುವುದು ಅತ್ಯಂತ ಅವಶ್ಯಕ ಮತ್ತು ಅನಿವಾರ್ಯ ಎಂದರು.

ಸಚಿವ ಬೈರತಿ ಸುರೇಶ್‌ ಮಾತನಾಡಿ, ಬ್ರಾಹ್ಮಣ ಸಮಾಜದಿಂದ ₹50 ಕೋಟಿ ಅನುದಾನ ಕೋರಲಾಗಿದೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ರಾಮಾನುಜಾಚಾರ್ಯರಿಂದ ಒಗ್ಗಟ್ಟು ಸಾಧ್ಯ:

ವಿದ್ವಾಂಸ ಶೆಲ್ವಪಿಳ್ಳೆ ಅಯ್ಯಂಗಾರ್ ಅವರು ಮಾತನಾಡಿ, ರಾಮಾನುಜಾಚಾರ್ಯರು ಭಾರತದಲ್ಲಿ ಅವತರಿಸಿದ ಮಹಾನ್ ಧ್ರುವತಾರೆ. ಒಂದು ವೇಳೆ ಅವರು ಅವತಾರ ಮಾಡಿಲ್ಲದಿದ್ದರೆ ಭಾರತದಲ್ಲಿ ಈ ಮಟ್ಟಿನ ಒಗ್ಗಟ್ಟು ಸಾಧ್ಯವಾಗುತ್ತಿರಲಿಲ್ಲ. ಭಕ್ತಿ ಸಿದ್ಧಾಂತ ಇಲ್ಲದೇ ಹೋಗಿದ್ದರೆ ಭಾರತ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿತ್ತು. ಇಡೀ ದೇಶವನ್ನು ಒಗ್ಗೂಡಿಸಿರುವುದು ಭಕ್ತಿ ಆಧಾರದ ಮೇಲೆ. ಆಕ್ರಮಣಕಾರರ ದಾಳಿಗಳಿಂದ ಅನೇಕ ದೇಶಗಳ ನಾಗರಿಕತೆ ನಾಶವಾಗಿವೆ. ಆದರೆ, ಭಾರತದ ಮೇಲೆ ಅನೇಕ ಬಾರಿ ದಾಳಿ ನಡೆದರೂ ನಾಗರಿಕತೆ ಉಳಿದಿದ್ದರೆ ಅದಕ್ಕೆ ಭಕ್ತಿ ಸಿದ್ಧಾಂತ ಕಾರಣ ಎಂದು ಹೇಳಿದರು.

ಯಾವುದೋ ಒಂದು ಚಿಕ್ಕ ಊರಿನಲ್ಲಿ ಅಸ್ಪೃಶ್ಯರನ್ನು ದೇಗುಲದೊಳಗೆ ಸವರ್ಣೀಯರು ಬಿಡಲಿಲ್ಲ ಎಂದು ಸುದ್ದಿ ಓದುತ್ತೇವೆ. ಆದರೆ, ತಿರುಪತಿ, ಮೇಲುಕೋಟೆ, ಬೇಲೂರು, ಶ್ರೀರಂಗದಂಥ ದೊಡ್ಡ ದೇಗುಲಗಳಲ್ಲಿ ಯಾರನ್ನೂ ತಡೆದಿಲ್ಲ. ಇಂದಿನ ಸಂವಿಧಾನ ಇಲ್ಲದ 1 ಸಾವಿರ ವರ್ಷಗಳ ಹಿಂದೆಯೇ ರಾಮಾನುಜರು ಜಾತಿ, ಮತ, ಬೇಧವಿಲ್ಲದೆ ಎಲ್ಲಾ ಜನಾಂಗದವರಿಗೆ ದೇಗುಲಕ್ಕೆ ಪ್ರವೇಶ ನೀಡಿದ್ದರು ಎಂದು ಅಯ್ಯಂಗಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದರಾದ ಡಾ। ಸಿ.ಎನ್.ಮಂಜುನಾಥ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ಆರ್.ವಿ.ದೇಶಪಾಂಡೆ, ರಾಮಮೂರ್ತಿ, ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಇದ್ದರು. ವಿಚಾರಗೋಷ್ಠಿಯಲ್ಲಿ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಮತ್ತು ಮಹಾಸಭಾ ಅಧ್ಯಕ್ಷ ಹಾರನಹಳ್ಳಿ ಅಶೋಕ್ ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ