ಕಮಲಹಾಸನ್‌ ಚಿತ್ರ ಪ್ರದರ್ಶಿಸಿದರೆ ಥಿಯೇಟರಿಗೇ ಬೆಂಕಿ ಹಚ್ತೀವಿ: ಕರವೇ

Published : May 31, 2025, 05:59 AM IST
Karave

ಸಾರಾಂಶ

ಕನ್ನಡಿಗರ ಸ್ವಾಭಿಮಾನ ಕೆಣಕಿರುವ ನಟ ಕಮಲ್‌ಹಾಸನ್‌ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ‘ಥಗ್‌ಲೈಫ್‌’ ಸಿನಿಮಾ ಬಿಡುಗಡೆ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇವೆ ಎಂದ ಕರ್ನಾಟಕ ರಕ್ಷಣಾ ವೇದಿಕೆ

  ಬೆಂಗಳೂರು : ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ ಎಂದು ಕುಚೇಷ್ಟೆಯ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನ ಕೆಣಕಿರುವ ನಟ ಕಮಲ್‌ಹಾಸನ್‌ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ‘ಥಗ್‌ಲೈಫ್‌’ ಸಿನಿಮಾ ಬಿಡುಗಡೆ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಚ್ಚರಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಲ್‌ಹಾಸನ್‌ ತಮ್ಮ ಹೊಸ ಸಿನಿಮಾ ‘ಥಗ್‌ಲೈಫ್‌’ ಪ್ರಚಾರದ ವೇಳೆ ಕನ್ನಡವು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ನೀಡಿರುವ ಹೇಳಿಕೆ ಸರಿಯಲ್ಲ. ತಮಿಳಿಗರನ್ನು ಓಲೈಸಲು ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ. ಜತೆಗೆ ಕ್ಷಮೆ ಕೇಳುವುದಿಲ್ಲ ಎಂದು ಉದ್ಧಟತನದ ಹೇಳಿಕೆ ನೀಡಿ ಕನ್ನಡಿಗರನ್ನು ಮತ್ತಷ್ಟು ಕೆಣಕಿದ್ದಾರೆ. ಹೀಗಾಗಿ ಅವರ ಥಗ್‌ ಲೈಫ್‌ ಸಿನಿಮಾವನ್ನು ರಾಜ್ಯದಲ್ಲಿ ಬ್ಯಾನ್ ಮಾಡಬೇಕು. ಇಲ್ಲದಿದ್ದರೆ ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳಿಗೆ ಬೆಂಕಿ ಹಾಕುತ್ತೇವೆ ಎಂದರು.

ಕನ್ನಡ ಮತ್ತು ಕನ್ನಡಿಗರ ಬಗ್ಗೆ ಅವಹೇಳನವಾಗಿ ಮಾತನಾಡಿದರೆ ಯಾರನ್ನೂ ಬಿಡುವುದಿಲ್ಲ. ನಟ ಶಿವರಾಜ್‌ಕುಮಾರ್‌ಗೆ ಅಭಿಮಾನ ಇದ್ದರೆ ಈಗಲೂ ಕಾಲ ಮಿಂಚಿಲ್ಲ. ಕಮಲ್‌ಹಾಸನ್‌ ಅವರಿಂದ ಕ್ಷಮೆ ಕೇಳಿಸಲಿ. ಕಮಲ್‌ ಹಾಸನ್‌ ಬಗ್ಗೆ ನಮಗೂ ಗೌರವವಿದೆ. ಆದರೆ, ಕನ್ನಡಕ್ಕಿಂತಲೂ ದೊಡ್ಡದು ಯಾವುದೂ ಇಲ್ಲ. ಬೇರೆ ಭಾಷೆ ಬಗ್ಗೆ ಮಾತನಾಡುವಾಗ ಅರಿವು ಇರಬೇಕು. ತಮಿಳಿನ ಬಗ್ಗೆ ಏನು ಬೇಕಾದರೂ ಮಾತನಾಡಲಿ. ಕನ್ನಡದ ಕುರಿತು ಮಾತನಾಡುವಾಗ ಸರಿಯಾಗಿ ತಿಳಿದುಕೊಂಡಿರಬೇಕು. ಕಮಲ್‌ ಹೇಳಿಕೆಯನ್ನು ಕನ್ನಡದ ನಟ-ನಟಿಯರು ಖಂಡಿಸಬೇಕು ಎಂದು ಹೇಳಿದರು.

ಕಮಲ್‌ ಹಾಸನ್‌ ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿದ್ದ ನಟ ಶಿವರಾಜ್‌ಕುಮಾರ್‌ ಅವರು ಕನ್ನಡವು ತಮಿಳಿನಿಂದ ಹುಟ್ಟಿದ ಭಾಷೆ ಎಂಬ ಹೇಳಿಕೆ ಬಂದ ಕೂಡಲೇ ಅಲ್ಲೇ ಖಂಡಿಸಬಹುದಿತ್ತು. ತಕ್ಷಣ ಅಲ್ಲೇ ಖಂಡಿಸಲು ಸಾಧ್ಯವಾಗದಿರಬಹುದು ಎಂದು ಈವರೆಗೆ ಸುಮ್ಮನಿದ್ದೆವು. ಆದರೆ, ಶಿವರಾಜ್‌ಕುಮಾರ್‌ ಅವರು ನಂತರವೂ ಕಮಲ್‌ ಹಾಸನ್‌ ಅವರನ್ನು ಸಮರ್ಥಿಸುವಂತೆಯೇ ಮಾತನಾಡಿರುವುದು ಆಘಾತ ತಂದಿದೆ. ಕಮಲ್‌ ತಮ್ಮ ಮಾತಿಗೆ ಕನ್ನಡಿಗರ ಕ್ಷಮೆ ಯಾಚಿಸಬೇಕು ಎಂಬ ಒಂದು ಸಾಲೂ ಶಿವಣ್ಣ ಅವರಿಂದ ಬಂದಿಲ್ಲ. ಒಬ್ಬ ನಟನ ಮೇಲಿನ ಅಭಿಮಾನಕ್ಕಾಗಿ ಶಿವರಾಜ್‌ಕುಮಾರ್‌ ಅವರು ಕನ್ನಡದ ಮೇಲಿನ ಅಭಿಮಾನ ಅಡವಿಟ್ಟುಬಿಟ್ಟರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿವಣ್ಣ ಮೇಲೆ ಸಾಕಷ್ಟು ನಿರೀಕ್ಷೆ ಇದೆ:

ಕನ್ನಡ ಚಳವಳಿಯ ಜ್ಞಾಲೆಯನ್ನು ಇಡೀ ಕರ್ನಾಟಕದಲ್ಲಿ ಹೊತ್ತಿಸಿ ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಡಾ.ರಾಜ್‌ಕುಮಾರ್‌ ನಮ್ಮ ಆದರ್ಶ. ಅವರ ಮಕ್ಕಳಿಂದಲೂ, ಕುಟುಂಬಸ್ಥರಿಂದಲೂ ನಾವು ಅದೇ ಬಯಸುತ್ತೇವೆ. ಅಣ್ಣಾವ್ರು ಕನ್ನಡದ ಮಹಾನ್‌ ಸಂಕೇತ. ಅಂತಹವರ ಹಿರಿಯ ಮಗ ಶಿವರಾಜಕುಮಾರ್‌ ಅವರಿಂದ ನಮ್ಮನಿರೀಕ್ಷೆ ಬಹಳ ಇದೆ. ಕನ್ನಡದಿಂದ ನಾವೇ ಹೊರತು ನಮ್ಮಿಂದ ಕನ್ನಡವಲ್ಲ. ಇದು ಶಿವರಾಜಕುಮಾರ್‌ ಅವರಿಗೆ ಅರ್ಥವಾಗಲಿ ಎಂದು ಹೇಳಿದರು.

ಯದುವೀರ್‌ ಕ್ಷಮೆಯಾಚಿಸಲಿ

ಕನ್ನಡ ಹುಟ್ಟಿದ್ದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಯಿಂದ ಎಂದಿರುವ ಮೈಸೂರು-ಕೊಡಗು ಸಂಸದ ಯದುವೀರ ಒಡೆಯರ್‌ ಅತ್ಯಂತ ಬೇಜವಾಬ್ದಾರಿಯ ಸುಳ್ಳು ಹೇಳಿಕೆ ನೀಡಿದ್ದಾರೆ. ಯದುವೀರ್ ಒಡೆಯರ್‌ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಅವರಿಗೆ ಭಾಷೆಗಳ ಉಗಮಗಳ ಚರಿತ್ರೆಯ ಜ್ಞಾನದ ಕೊರತೆ ಇದೆ. ಬೇಕಿದ್ದರೆ ಅವರಿಗೆ ಭಾಷಾ ಶಾಸ್ತ್ರಜ್ಞರಿಂದ ಪಾಠ ಹೇಳಿಸಲು ಕರವೇ ತಯಾರಿದೆ. ಕನ್ನಡದ ಸ್ವಾಭಿಮಾನಕ್ಕೆ ಯಾರೇ ಕುತ್ತು ತರಲು ಪ್ರಯತ್ನಿಸಿದರೂ ನಾವು ಸುಮ್ಮನಿರುವುದಿಲ್ಲ. ಇದೇ ರೀತಿಯ ಹೇಳಿಕೆ ನೀಡಿದರೆ ಪ್ರತಿಭಟನೆಯ ರುಚಿ ಅನುಭವಿಸಬೇಕಾಗುತ್ತದೆ ಎಂದು ಟಿ.ಎ.ನಾರಾಯಣಗೌಡ ಎಚ್ಚರಿಸಿದರು.

ಕಮಲ್‌ ಹಾಸನ್‌ ಪ್ರತಿಕೃತಿ ದಹನ

ಕನ್ನಡವು ತಮಿಳಿನಿಂದ ಹುಟ್ಟಿದೆ ಎಂಬ ಹೇಳಿಕೆ ನೀಡಿ ಕನ್ನಡಿಗರ ಸ್ವಾಭಿಮಾನ ಕೆಣಕಿದ ನಟ ಕಮಲ್‌ ಹಾಸನ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕಮಲ್‌ ಹಾಸನ್‌ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ಶುಕ್ರವಾರ ಗಾಂಧಿನಗರದಲ್ಲಿರುವ ಕರವೇ ಕೇಂದ್ರ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಕರವೇ ಬೆಂಗಳೂರು ಘಟಕದ ಅಧ್ಯಕ್ಷ ಧರ್ಮರಾಜ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನಕ್ಕೆ ಆಗಮಿಸಿದ ಪ್ರತಿಭಟನಾಕಾರರು ರಸ್ತೆಯುದ್ದಕ್ಕೂ ಕಮಲ್‌ಹಾಸನ್‌ಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಮ್ಯಾ ವಿರುದ್ಧ ಕಿಡಿ

ಕಮಲ್‌ ಬಹಿಷ್ಕಾರ ಸ್ವಲ್ಪ ಅತಿಯಾಯಿತಲ್ಲವೇ? ತಪ್ಪು ಕ್ಷಮಿಸಬಹುದಾದದ್ದು..! ಎಂಬಿತ್ಯಾದಿಯಾಗಿ ಕಮಲ್‌ ಹಾಸನ್‌ ಪರವಾಗಿ ‘ಎಕ್ಸ್‌’ ನಲ್ಲಿ ಪೋಸ್ಟ್‌ ಮಾಡಿದ್ದ ನಟಿ, ರಾಜಕಾರಣಿ ರಮ್ಯಾ ವಿರುದ್ಧ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್‌.ತಂಗಡಗಿ ಕಿಡಿಕಾರಿದ್ದರು. ಈ ಬೆನ್ನಲ್ಲೇ ‘ರಮ್ಯಾ ಬಿಡಿ ಆಕೆ , ಮಂಡ್ಯದಲ್ಲಿ ಗೆಲ್ಲಲಾಗದೆ ಓಡಿ ಹೋದವರು. ರಮ್ಯಾ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು.. ಊರು ಬಿಟ್ಟ ತಲೆತಿರುಕರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ’ ಎಂದು ಕರವೇ ವ್ಯಂಗ್ಯವಾಡಿದೆ.

ನಟ ಶಿವರಾಜ್‌ಕುಮಾರ್‌ಗೆ ಅಭಿಮಾನ ಇದ್ದರೆ ಈಗಲೂ ಕಾಲ ಮಿಂಚಿಲ್ಲ. ಕಮಲ್‌ಹಾಸನ್‌ ಅವರಿಂದ ಕ್ಷಮೆ ಕೇಳಿಸಲಿ. ಕಮಲ್‌ ಹಾಸನ್‌ ಬಗ್ಗೆ ನಮಗೂ ಗೌರವವಿದೆ. ಆದರೆ, ಕನ್ನಡಕ್ಕಿಂತಲೂ ದೊಡ್ಡದು ಯಾವುದೂ ಇಲ್ಲ. ಬೇರೆ ಭಾಷೆ ಬಗ್ಗೆ ಮಾತನಾಡುವಾಗ ಅರಿವು ಇರಬೇಕು. ತಮಿಳಿನ ಬಗ್ಗೆ ಏನು ಬೇಕಾದರೂ ಮಾತನಾಡಲಿ. ಕನ್ನಡದ ಕುರಿತು ಮಾತನಾಡುವಾಗ ಸರಿಯಾಗಿ ತಿಳಿದುಕೊಂಡಿರಬೇಕು. ಕಮಲ್‌ ಹೇಳಿಕೆ ಬಗ್ಗೆ ಕನ್ನಡದ ನಟ-ನಟಿಯರು ಖಂಡಿಸಬೇಕು.

-ಟಿ.ಎ.ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

ಡಾ। ರಾಜ್‌ ಕನ್ನಡದ

ಆದರ್ಶ, ಅವರ ಪುತ್ರ

ಶಿವಣ್ಣಗಿದು ಗೊತ್ತಿರಲಿ

ಕನ್ನಡ ಚಳವಳಿಯ ಜ್ಞಾಲೆಯನ್ನು ಇಡೀ ಕರ್ನಾಟಕದಲ್ಲಿ ಹೊತ್ತಿಸಿ ಕನ್ನಡಿಗರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಡಾ.ರಾಜ್‌ಕುಮಾರ್‌ ನಮ್ಮ ಆದರ್ಶ. ಅವರ ಮಕ್ಕಳಿಂದಲೂ, ಕುಟುಂಬಸ್ಥರಿಂದಲೂ ನಾವು ಅದೇ ಬಯಸುತ್ತೇವೆ. ಇದು ಶಿವರಾಜಕುಮಾರ್‌ ಅವರಿಗೆ ಅರ್ಥವಾಗಲಿ.

- ಟಿ.ಎ. ನಾರಾಯಣಗೌಡ, ಕರವೇ ರಾಜ್ಯಾಧ್ಯಕ್ಷ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಹಿಂಸೆ, ಶಾಂತಿಧೂತ ಗಾಂಧೀಜಿ ಸ್ಮರಣೆ ನಿರಂತರವಾಗಿರಲಿ
ವಿಕಲಚೇತನರ ಸವಲತ್ತುಗಳ ಸಮರ್ಪಕ ನಿರ್ವಹಣೆಗೆ ಒತ್ತು