ಸ್ಪರ್ಧಾತ್ಮಕ ಪರೀಕ್ಷೆ ಮಾದರಿ ತಿಳಿದು ಅಧ್ಯಯನ ಮಾಡಿ । ಅವಕಾಶ ಇರುವರೆಗೂ ಪ್ರಯತ್ನ ನಿರಂತರವಾಗಿರಲಿಎಲ್.ವೈ.ರಾಜೇಶ್
ಸಹಾಯಕ ಪೊಲೀಸ್ ಆಯುಕ್ತರುಸಿಸಿಬಿ ಬೆಂಗಳೂರುಸಂದರ್ಶನ
ನಿಂಗರಾಜ ಕೆ. ಯತ್ನಾಳಇವರು ಮೂಲತಃ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನವರು. ತಂದೆ ಲಕ್ಷ್ಮಯ್ಯ, ತಾಯಿ ಯಲ್ಲಮ್ಮ. ಇವರು ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹೊಸಕೋಟೆ, ಮುಳಬಾಗಿಲು, ಕೋಲಾರ ಹಾಗೂ ಮುದ್ದೇನಹಳ್ಳಿಯಲ್ಲಿ ಪಡೆದ ಇವರು, ಬೆಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಹಾಗೂ ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ನಂತರ ಲಾಯರ್ ಕನಸಿನೊಂದಿಗೆ ಎಸ್‌ಜೆಆರ್ ಲಾ ಕಾಲೇಜು ಸೇರಿ ಕಾನೂನು ಪದವಿ ಕೂಡ ಪೂರ್ಣಗೊಳಿಸಿ, ಜಯರಾಜ್ ಧನರಾಜ್ ಅಸೋಸಿಯೇಟ್ಸ್ ನಲ್ಲಿ ನಾಲ್ಕುವರ್ಷಗಳ ಕಾಲ ಅಡ್ವೊಕೇಟ್ ಪ್ರಾಕ್ಟೀಸ್ ಮಾಡಿದ್ದಾರೆ. ಪ್ರಾಕ್ಟೀಸ್ ಮಾಡುವ ಸಂದರ್ಭದಲ್ಲಿ ಸ್ನೇಹಿತರ ಸಹಕಾರದಿಂದ ಪಿಎಸ್‌ಐ ಹುದ್ದೆಗೆ ಅರ್ಜಿ ಹಾಕಿ ಪರೀಕ್ಷೆ ಬರೆದು 2002ರಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕಗೊಂಡ ಇವರು ಮೈಸೂರಿನಲ್ಲಿ ಪಿಎಸ್ಐ ತರಬೇತಿ ಮುಗಿಯುತ್ತಿದ್ದಂತೆ ಕುಖ್ಯಾತ ದಂತಚೋರ ಮತ್ತು ನರಹಂತಕ ವೀರಪ್ಪನ್ ಮಟ್ಟಹಾಕುವ ವಿಶೇಷ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ಇವರದು. ತದನಂತರ ಸೇವೆಗೆ ಸೇರಿ ಕೊಡಗಿನ ಸೋಮವಾರಪೇಟೆ ಮತ್ತು ನಾಪೋಕ್ಲು, ಕೋಲಾರ ಜಿಲ್ಲೆ, ಆನೇಕಲ್ ತಾಲೂಕು, ಅತ್ತಿಬೆಲೆ, ಬೆಂಗಳೂರು ನಗರದ ಹಲವು ಠಾಣೆಗಳಲ್ಲಿ ಸೇವೆ ಸಲ್ಲಿಸಿದ ಎಲ್.ವೈ.ರಾಜೇಶ್ ಅವರು ಪ್ರಸ್ತುತ ಬೆಂಗಳೂರಿನಲ್ಲಿರುವ ಕೇಂದ್ರ ಅಪರಾಧ ವಿಭಾಗದ (CCB) ಮಾದಕ ದ್ರವ್ಯ ನಿಗ್ರಹ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಯುವ ಸ್ಪರ್ಧಾರ್ಥಿಗಳಿಗೆ ಕೆಲವು ಸಲಹೆ ನೀಡುವುದರ ಮೂಲಕ ಕನ್ನಡಪ್ರಭ ಯುವ ಆವೃತ್ತಿಯೊಂದಿಗೆ ‘ಮುಖಾಮುಖಿ’ ಯಾಗಿದ್ದಾರೆ.
*ಎಲ್‌ಎಲ್‌ಬಿ ಮುಗಿಸಿದ ನೀವು ಪೊಲೀಸ್ ಇಲಾಖೆಗೆ ಸೇರಿಕೊಳ್ಳಲು ಕಾರಣವೇನು?
- ಪೊಲೀಸ್ ಅಧಿಕಾರಿ ಆಗಬೇಕೆಂದು ನಾನು ಅಂದುಕೊಂಡಿರಲಿಲ್ಲ. ನನ್ನ ಗುರಿ ಲಾಯರ್ ಆಗಬೇಕೆಂಬುದು, ಅದರಂತೆ ಎಸ್‌ಜೆಆರ್ ಲಾ ಕಾಲೇಜಿನಲ್ಲಿ ಎಲ್‌ಎಲ್‌ಬಿ ಮುಗಿಸಿ ಜಯರಾಜ್ ಧನರಾಜ್ ಅಸೋಸಿಯೇಟ್ಸ್ ನಲ್ಲಿ ಅಡ್ವೊಕೇಟ್ ಪ್ರಾಕ್ಟೀಸ್ ಮಾಡುತ್ತಿದ್ದೆ. ಈ ಸಂದರ್ಭದಲ್ಲಿ ನನ್ನ ಸ್ನೇಹಿತರೊಬ್ಬರು ತಮಗಾಗಿ ತೆಗೆದುಕೊಂಡು ಬಂದ ಪಿಎಸ್‌ಐ ಅರ್ಜಿಯನ್ನು ನನಗೆ ನೀಡಿ ಅರ್ಜಿ ಸಲ್ಲಿಸುವಂತೆ ಹೇಳಿದರು. ಆದ್ದರಿಂದ ನಾನು ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿ ಪರೀಕ್ಷೆ ಬರೆದೆ, ಆದರೆ ಗ್ರಾಮೀಣ ಕೃಪಾಂಕ ನೀಡಿದ್ದರಿಂದ ಆ ಸಂದರ್ಭದಲ್ಲಿ ಹುದ್ದೆ ಕೈತಪ್ಪಿತು, ಆದ ಕಾರಣ ನಾನೆ ಲಾಯರ್ ಆಗಿದ್ದರಿಂದ ಚಾಲೆಂಜ್ ಮಾಡಿ 12 ಜನ ಸ್ನೇಹಿತರೊಂದಿಗೆ ಸೇರಿ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದೇವು. ನಂತರ ಸುಪ್ರೀಂ ಕೋರ್ಟ್‌ನಲ್ಲಿ ನಮ್ಮ ಪರ ಜಯವಾಯಿತು. ನನ್ನನ್ನು ಸೇರಿ 13 ಜನಕ್ಕೆ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಹುದ್ದೆ ಸಿಕ್ಕಿದ್ದರಿಂದ ಸೇವೆಗೆ ಸೇರಿಕೊಂಡೆ. ಇದರ ಜೊತೆಗೆ ಇನ್ನೊಂದು ಖುಷಿಯ ವಿವಾರವೆಂದರೆ ಸುಪ್ರೀಂ ಕೋರ್ಟ್‌ನಲ್ಲಿ ನಾವು ಪೈಪೋಟಿ ಮಾಡಿದ್ದರಿಂದ 12 ಸಾವಿರಕ್ಕೂ ಹೆಚ್ಚು ಜನರಿಗೆ ಸರ್ಕಾರಿ ಹುದ್ದೆ ಸಿಕ್ಕಿದೆ ಎಂದು ಹೇಳಬಹುದು.*ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ತಯಾರಿ ಹೇಗಿತ್ತು?- ಸ್ಪರ್ಧಾತ್ಮಕ ಪರೀಕ್ಷೆಗೆ ನಿರ್ದಿಷ್ಟವಾಗಿ ತಯಾರಿ ಮಾಡಿದ್ದು ಬಹಳ ಕಡಿಮೆ. ಜಯನಗರ ನ್ಯಾಷನಲ್ ಕಾಲೇಜಿನಲ್ಲಿ ಪಿಯುಸಿ ಅಧ್ಯಯನ ಮಾಡುವ ವೇಳೆ ನಮ್ಮ ತಂದೆಯವರು ರಾವ್ಸ್ ಟ್ಯುಟೋರಿಯಲ್ ಇನ್‌ಸ್ಟಿಟ್ಯೂಟ್‌ಗೆ ಸ್ಪರ್ಧಾತ್ಮಕ ಪರೀಕ್ಷೆ ಕುರಿತು ಕೋಚಿಂಗ್ ಪಡೆಯಲು ಕಳುಹಿಸಿಕೊಟ್ಟಿದ್ದರು. ನನಗೆ ಪುಸ್ತಕ ಓದುವ ಹವ್ಯಾಸ ಇದ್ದ ಕಾರಣ ಆ ಸಂದರ್ಭದಲ್ಲಿ ಸಂವಿಧಾನ ಹಾಗೂ ಇತರೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಓದಿ ತಿಳಿದುಕೊಳ್ಳುತ್ತಿದ್ದೆ. ಓದಿರುವುದನ್ನು ಮತ್ತೆ ನೆನಪಿಸಿಕೊಂಡು ನೋಟ್ಸ್ ಮಾಡುತ್ತಿದ್ದೆ. ಅದು ನನಗೆ ಪಿಎಸ್‌ಐ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕಾರಣವಾಯಿತು.
* ಸ್ಪರ್ಧಾರ್ಥಿಗಳು ಅತಿ ಹೆಚ್ಚು ಪೊಲೀಸ್ ಇಲಾಖೆಗೆ ಸೇರಿಕೊಳ್ಳಲು ಬಯಸುತ್ತಾರೆ ಅದಕ್ಕೆ ಕಾರಣವೇನು?- ಇತ್ತೀಚಿನ ಯವಕ/ಯುವತಿಯರು ಪೊಲೀಸ್ ಇಲಾಖೆಗೆ ಸೇರಿಕೊಳ್ಳಲು ಬಯಸುವುದು ನಿಜ, ಏಕೆಂದರೆ ಪೊಲೀಸ್ ಹುದ್ದೆ ಎಂಬುದು ಫವರ್‌ಫುಲ್ ಹುದ್ದೆ ಮತ್ತು ಸಮಾಜದಲ್ಲಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವದರಿಂದ ಸಮಾಜಕ್ಕೆ ಹಾಗೂ ಸಾರ್ವಜನಕರಿಗೆ ಹೆಚ್ಚಿನ ಮಟ್ಟದಲ್ಲಿ ಸೇವೆ ಸಲ್ಲಿಸುವುದಕ್ಕೆ ಅವಕಾಶವಿರುವುದರಿಂದ ಹೆಚ್ಚು ಜನ ಪೊಲೀಸ್ ಇಲಾಖೆಗೆ ಸೇರಿಕೊಳ್ಳು ಬಯಸುತ್ತಾರೆ.* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ಮಾಡಿಕೊಳ್ಳಬೇಕು?
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ಮಾಡುವುದು ತುಂಬಾ ಅವಶ್ಯ. ಆರಂಭದಿಂದಲೇ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದಬೇಕು. ಐಚ್ಛಿಕ ವಿಷಯದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಮುಖ್ಯವಾಗಿ ಸಂಪಾದಕೀಯ ತಪ್ಪದೆ ಓದಬೇಕು. ಅಧ್ಯಯನ ಮಾಡಿರುವುದು ನೆನಪಿನಲ್ಲಿಟ್ಟುಕೊಳ್ಳುವುದಕ್ಕೆ ಏನು ಸಾಧ್ಯವೋ ಅದನ್ನು ಪಡೆದುಕೊಳ್ಳಲು ಪ್ರಯತ್ನಪಡಿ. ಸಮಯ ನಿರ್ವಹಣೆ ಮಾಡುವುದು ಕಲಿಯಬೇಕು. ಸ್ಪರ್ಧಾತ್ಮಕ ಪರೀಕ್ಷೆಗೆ ಏನು ಓದಬೇಕು ಎಂಬುದಕ್ಕಿಂತ ಯಾವುದನ್ನು ಓದಬಾರದು ಎಂದು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಅದರಿಂದ ಸ್ಪರ್ಧಾತ್ಮಕ ಪರೀಕ್ಷೆ ಮಾದರಿಯನ್ನು ತಿಳಿದುಕೊಂಡು ಅಧ್ಯಯನ ಮಾಡುವುದು ಸೂಕ್ತ.* ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಾದರೆ ಹೇಗೆ ಸ್ವೀಕಾರ ಮಾಡಬೇಕು?- ಸ್ಪರ್ಧಾತ್ಮಕ ಜಗತ್ತು ತುಂಬಾ ದೊಡ್ಡದು. ಸ್ಪರ್ಧಾರ್ಥಿಗಳು ಹುದ್ದೆ ಪಡೆದುಕೊಳ್ಳಲೇಬೇಕು ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸುತ್ತಾರೆ. ಬ್ಯಾಟ್ ಹಿಡಿದವರೆಲ್ಲ ಸಚಿನ್ ತೆಂಡೂಲ್ಕರ್ ಆಗುವುದಕ್ಕೆ ಸಾಧ್ಯವಿಲ್ಲ. ಪರೀಕ್ಷೆ ಬರೆದ ಎಲ್ಲರಿಗೂ ಸರ್ಕಾರಿ ಹುದ್ದೆ ಸಿಗುವುದಿಲ್ಲ. ಹಾಗಂತ ಭರವಸೆ ಕಳೆದುಕೊಳ್ಳಬಾರದು. ನಿರಂತರ ಪ್ರಯತ್ನ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಒಂದು ಪರೀಕ್ಷೆಯಲ್ಲಿ ಫೇಲಾದರೆ ಇನ್ನೊಂದು ಪರೀಕ್ಷೆ ಬರೆಯುವುದಕ್ಕೆ ಅವಕಾಶವಿದೆ. ಅದರಲ್ಲಿ ಪ್ರಯತ್ನ ಮಾಡಿ ಹುದ್ದೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಬೇಕು. ಒಂದು ವೇಳೆ ಕಠಿಣ ಪರಿಶ್ರಮಪಟ್ಟರೂ ಸಹಿತ ಹುದ್ದೆ ಸಿಗಲಿಲ್ಲ ಎಂದರೆ ಬೇರೆ ಕ್ಷೇತ್ರದಲ್ಲಿ ಅವಕಾಶಗಳು ಇರುತ್ತವೆ. ಸ್ಪರ್ಧಾರ್ಥಿಗಳಿಗೆ ಹೇಳುವುದೆನೆಂದರೆ ಜೀವನದಲ್ಲಿ ಯಾವ ಹುದ್ದೆ/ಕೆಲಸವಾದರೂ ಮಾಡಿ ಆದರೆ ಮಾಡುವಂತ ಕೆಲಸದ ಮೇಲೆ ಪ್ರೀತಿ ಇರಬೇಕು. ಅದೇ ಕೆಲಸ ಉತ್ತಮವಾಗಿ ಮಾಡಬೇಕು. ಯಶಸ್ಸಿಗೆ ಅಲ್ಪವಿರಾಮ ಇರಬೇಕೆ ವಿನಹ ಫುಲ್‌ಸ್ಟಾಪ್ (Full stop) ಇಡಬಾರದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎಲ್ಲಿವರೆಗೆ ನಿಮಗೆ ವಯಸ್ಸು ಮತ್ತು ಅವಕಾಶವಿದೆಯೋ ಅಲ್ಲಿವರೆಗೂ ಪ್ರಯತ್ನ ನಿರಂತರವಾಗಿರಲಿ. ಒಂದು ಪರೀಕ್ಷೆಯಲ್ಲಿ ಸೋತೆ ಎಂದು ಯಾರು ಧೃತಿಗೆಡುವುದು ಬೇಡ.
*ಇಂದಿನ ಯುವ ಜನತೆ ಸೈಬರ್ ಕ್ರೈಂಗಳಿಗೆ ಬಲಿಯಾಗುತ್ತಿದ್ದಾರೆ. ಅದಕ್ಕೆ ಪರಿಹಾರವೇನು?
-ಇತ್ತೀಚಿನ ದಿನಮಾನಗಳಲ್ಲಿ ಸೈಬರ್ ಕ್ರೈಂಗಳ ಸಂಖ್ಯೆ ಹೆಚ್ಚಳವಾಗುತ್ತಿವೆ. ಯುವಜನತೆ ಸೇರಿ ವಯಸ್ಸಾದವರು ಕೂಡ ಸೈಬರ್ ಕ್ರೈಂಗೆ ಬಲಿಯಾಗುತ್ತಿದ್ದಾರೆ. ಏಕೆಂದರೆ ಎಲ್ಲರಿಗೂ ಸಾಮಾಜಿಕ ಮಾಧ್ಯಮಗಳ ಮೇಲೆ ಇರುವ ವ್ಯಾಮೋಹ. ಒಂದು ಪೋಸ್ಟ್‌ಗೆ ಎಷ್ಟು ಜನ ಲೈಕ್ ಮಾಡಿದ್ದಾರೆ. ಎಷ್ಟು ಶೇರ್ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಜನರಲ್ಲಿ ಕುತೂಹಲ ಜಾಸ್ತಿ. ಇಂತಹ ಕ್ರೇಜ್‌ನಿಂದಲೇ ಹಲವರು ತೊಂದರೆಗೆ ಒಳಗಾಗುತ್ತಿದ್ದಾರೆ. ಆದ್ದರಿಂದ ಯುವಜನತೆಗೆ ಹೇಳುವುದೇನೆಂದರೆ ಇನಸ್ಟಾಗ್ರಾಮ್, ಸ್ನಾಪ್‌ಚಾಟ್‌ನಲ್ಲಿ ಪಾಲೋ ಮೆಸೆಜ್‌ಗಳು ಬರುತ್ತವೆ. ಅವುಗಳಿಗೆ ಮೊಬೈಲ್ ನಂಬರ್‌ಗಳನ್ನು ಶೇರ್ ಮಾಡಬೇಡಿ. ಅನೇಕ ಫೇಕ್ ಅಕೌಂಟ್‌ಗಳನ್ನು ರಚನೆ ಮಾಡಿ ಟ್ರ್ಯಾಪ್ ಮಾಡುತ್ತಾರೆ. ಕೆಲವರು ಆರ್ಥಿಕವಾಗಿ ಚೆನ್ನಾಗಿದ್ದಾರೆ ಎಂದು ತಿಳಿದು ಅವರನ್ನು ಟಾರ್ಗೆಟ್ ಮಾಡಲು ಶುರು ಮಾಡುತ್ತಾರೆ. ಯಾವುದೇ ಕಾರಣಕ್ಕೂ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಸಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಬೇಡಿ. ಕನಕದಾಸರು ಒಂದು ಮಾತು ಹೇಳಿದ್ದಾರೆ ‘ರೂಪುಳ್ಳ ವಸ್ತುಗಳನ್ನು ಪಾಪಿಗಳ ಮುಂದೆ ತೋರಬೇಡಿ’ ಅವರ ಮಾತು ಇಂದಿಗೂ ಪ್ರಸ್ತುತವಾಗಿವೆ. ಆದರಿಂದ ನಿಮ್ಮ ಬಳಿ ಎಷ್ಟೇ ಹಣ ಇರಲಿ, ಐಷಾರಾಮಿ ವಸ್ತುಗಳು ಇರಲಿ ಯಾವುದನ್ನು ತೋರಿಸಿಕೊಳ್ಳುವುದಕ್ಕೆ ಹೋಗಬೇಡಿ. ವಿಪರ್ಯಾಸವೇನೆಂದರೆ ಶಿಕ್ಷಣವಂತರೆ ಹೆಚ್ಚಿನ ಸಂಖ್ಯೆಯಲ್ಲಿ ಸೈಬರ್ ಕ್ರೈಮ್‌ಗಳಿಗೆ ಬಲಿಯಾಗುತ್ತಿದ್ದಾರೆ, ದುರದೃಷ್ಟಕರ ಎಂದು ಹೇಳಬಹುದು. ಆದರಿಂದ ಪ್ರತಿಯೊಬ್ಬರು ಕೂಡ ಇದರಿಂದ ಎಚ್ಚರಿಕೆಯಿಂದ ಇರುವುದು ತುಂಬಾ ಅವಶ್ಯವಿದೆ. ಸರ್ಕಾರ ಕೂಡ ಪ್ರಸ್ತುತ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಹೊಸ ಹೊಸ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ.* ಪೊಲೀಸ್ ಇಲಾಖೆಯಲ್ಲಿ ಹಲವು ಚಾಲೆಂಜ್‌ಗಳು ಎದುರಾಗುತ್ತವೆ, ಅವುಗಳನ್ನು ಹೇಗೆ ಸ್ವೀಕಾರ ಮಾಡುತ್ತೀರಿ?-ಅಧಿಕಾರಿಯಾದ ಮೇಲೆ ಹಲವಾರು ಚಾಲೆಂಜ್‌ಗಳು ಎದುರಾಗುವುದು ಸರ್ವೇ ಸಾಮಾನ್ಯ. ಆದರಿಂದ ಅವುಗಳನ್ನು ಸರಿದೂಗಿಸಿಕೊಂಡು ಹೋಗುವಂತಹ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು. ಒತ್ತಡ ನಿರ್ವಹಣೆ ಸಲುವಾಗಿ ತರಬೇತಿ ಸಮಯದಲ್ಲಿ ಕುದುರೆ ಸವಾರಿ, ಈಜು, ಫೈರಿಂಗ್ ಸೇರಿದಂತೆ ಹಲವು ಕೌಶಲ್ಯಗಳನ್ನು ಹೇಳಿಕೊಡಲಾಗುತ್ತದೆ. ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುವುದು ಕಾಮನ್ ಸೆನ್ಸ್‌ನಿಂದ ಅದನ್ನು ನಾವು ಬಳಕೆ ಮಾಡಿಕೊಳ್ಳಬೇಕು. ಚಾಲೆಂಜ್ ಇಲ್ಲದೇನೆ ಯಾವುದೇ ಕೆಲಸಗಳು ಇರುವುದಿಲ್ಲ. ಅವರವರ ಹುದ್ದೆಗೆ ತಕ್ಕಂತೆ ಸಮಸ್ಯೆಗಳು ಇರುತ್ತವೆ. ಆ ಸಮಸ್ಯೆಗಳನ್ನು ಪರಿಹರಿಸಿ ಮುಂದುವರಿಯಬೇಕು.
* ಇಲಾಖೆಯಲ್ಲಿ ಇಲ್ಲಿವರೆಗೂ ಅಂದುಕೊಂಡ ಕೆಲಸವನ್ನು ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂಬ ಭಾವನೆ ನಿಮಗೆ ಕಾಡಿದೇಯಾ?
- ಅಂತಹ ಭಾವನೆಗಳು ನನಗೆ ಇಲ್ಲಿಯವರೆಗೂ ಕಾಡಿಲ್ಲ. ಪೊಲೀಸ್ ಇಲಾಖೆಯಲ್ಲಿ ಏನೆಲ್ಲ ವಿನೂತನವಾಗಿ ಮಾಡಬೇಕಾದ ಎಲ್ಲ ಕೆಲಸಗಳನ್ನು ಮಾಡಿದ್ದೇನೆ. ನಾನು ಮಾಡಿದ ಮೊದಲ ಪ್ರಯತ್ನವೆಂದರೆ ಸಹದ್ಯೋಗಿಗಳನ್ನು ಬಹುವಚನದಲ್ಲಿ ಮಾತನಾಡಿಸುವುದು. ಅಪರಾಧಗಳನ್ನು ಮಾಡುತ್ತಿದ್ದ ಹುಡುಗರನ್ನು ಕರೆದು ತಂದು ಅವರನ್ನು ಸುಧಾರಣೆಗೆ ತರುವಂತ ಕೆಲಸ ಮಾಡಿದ್ದೇನೆ. ಕೆಲಸವಿಲ್ಲದ ರೌಡಿಗಳಿಗೆ ಕೆಲಸ ನೀಡಲಾಗಿದೆ. ಪೊಲೀಸ್ ಠಾಣೆಗಳಲ್ಲಿ ಮೊದಲ ಬಾರಿಗೆ ಸಿಸಿ ಕ್ಯಾಮೆರಾ ಅಳವಡಿಸಿದ್ದು ನಾವೇ, 2010ರಲ್ಲಿ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ, ಐದು ವರ್ಷಗಳ ನಂತರ ಸುಪ್ರೀಂ ಕೋರ್ಟ್‌ನಿಂದ ಆದೇಶವಾಯಿತು ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ, ಈ ಆದೇಶಕ್ಕಿಂತ ಮೊದಲೇ ಆ ಕೆಲಸ ನಾನು ಮಾಡಿದ್ದೆ. ಪೊಲೀಸರ ಕೆಲಸದ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಸಲುವಾಗಿ ‘ದರ್ಪಣ’ ಎಂಬ ವಿಶೇಷ ಕಾರ್ಯಕ್ರಮ ಜಾರಿಗೆ ತಂದಿದ್ದೇನೆ. ಬಂಡೇಪಾಳ್ಯ ಪೊಲೀಸ್ ಠಾಣೆ ಕರ್ತವ್ಯ ನಿರ್ವಹಿಸುವಾಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ಮಕ್ಕಳಿಗೆ ಉಚಿತ ತರಗತಿ ಹಾಗೂ ಪುಸ್ತಕಗಳನ್ನು ನೀಡುವ ಮೂಲಕ 21ದಿನಗಳಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ ಮಾಡಲಾಯಿತು. ಆ ಮಕ್ಕಳು ಪ್ರಸ್ತುತ ಮುಂದಿನ ವಿದ್ಯಾಭ್ಯಾಸದಲ್ಲಿ ತೊಡಗಿದ್ದು ಕೆಲವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದಾರೆ, ಹೀಗೆ ಇಲಾಖೆಯಲ್ಲಿ ಹಲವು ವಿನೂತನ ಕಾರ್ಯಗಳನ್ನು ಮಾಡಿದ್ದೇನೆ. ನಮ್ಮದೆಯಾದ ರಾಜಲಾಂಚನ ಎನ್‌ಜಿಒ ಮೂಲಕ ಸರ್ಕಾರಿ ಶಾಲೆಗಳನ್ನು ದತ್ತುಪಡೆದು ಸುಧಾರಣೆಗೆ ತರುವ ಕೆಲಸ ನಡೆಯುತ್ತಿದೆ, ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ಅಪಾರ ಪ್ರೀತಿ ಸಿಕ್ಕಿದೆ. ಮೈಮೇಲೆ ಪೊಲೀಸ್ ಸಮವಸ್ತ್ರ ಧರಿಸಿದಾಗ ನಮಗೆ ಹೆಮ್ಮೆ ಎನಿಸುತ್ತದೆ. ಪ್ರಸ್ತುತ ಬೆಂಗಳೂರು ಸಿಸಿಬಿಯಲ್ಲಿ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿದ್ದು ಸುಮಾರು 55 ರಿಂದ 60 ಕೋಟಿ ರು. ಬೆಲೆಯ ಡ್ರಗ್ಸ್ ಪತ್ತೆ ಮಾಡಿ ಆರೋಪಗಳನ್ನು ಬಂಧಿಸಲಾಗಿದೆ. ಇಷ್ಟು ವರ್ಷದ ಪೊಲೀಸ್ ಇಲಾಖೆಯಲ್ಲಿ ಪಯಣ ನನಗೆ ತೃಪ್ತಿ ತಂದಿದೆ.