ಉತ್ತರಾದಿ ಮಠದಲ್ಲಿ ಅಕ್ರಮವಾಗಿದ್ರೆ ತನಿಖೆ ಆಗಲಿ: ಗುಹಾ

ಸಾರಾಂಶ

ಉತ್ತರಾದಿ ಮಠದ ಸ್ವಾಮೀಜಿಗಳು ಗೌರವಾನ್ವಿತರು. ಆದರೆ, ಕೆಲವರಿಂದ ಮಠದ ಹಣದ ವಿಚಾರದಲ್ಲಿ ಅವ್ಯವಹಾರ ನಡೆದಿರುವುದಾಗಿ ವರದಿಯಾಗಿದೆ.

ಬೆಂಗಳೂರು : ಉತ್ತರಾದಿ ಮಠದ ಸ್ವಾಮೀಜಿಗಳು ಗೌರವಾನ್ವಿತರು. ಆದರೆ, ಕೆಲವರಿಂದ ಮಠದ ಹಣದ ವಿಚಾರದಲ್ಲಿ ಅವ್ಯವಹಾರ ನಡೆದಿರುವುದಾಗಿ ವರದಿಯಾಗಿದೆ. ಇದರಲ್ಲಿ ಎಳ್ಳಷ್ಟು ಸತ್ಯಾಂಶವಿದ್ದರೂ ಅವ್ಯವಹಾರದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷ ಡಾ.ಶಂಕರ್‌ ಗುಹಾ ದ್ವಾರಕಾನಾಥ್‌ ಆಗ್ರಹಿಸಿದ್ದಾರೆ.

ಉತ್ತರಾದಿ ಮಠ ಮಾಧ್ವ ಸಂಪ್ರದಾಯದ ಪೈಕಿ ಅತಿ ದೊಡ್ಡ ಮಠ. ಈಗ ಇರುವ ಮಠದ ಗುರುಗಳು ಅತ್ಯಂತ ಶ್ರೇಷ್ಠರು. ಹಿಂದಿನ ಗುರುಗಳು ನಡೆಸಿಕೊಂಡು ಬಂದ ಸಂಪ್ರದಾಯ ಮುಂದುವರೆಸಿಕೊಂಡು ಬಹಳಷ್ಟು ಸುಧಾರಣೆ ತಂದಿದ್ದಾರೆ. ಆದರೆ, ಕೆಲ ಪಟ್ಟಭದ್ರ ಶಕ್ತಿಗಳು ಹಣಕಾಸು ಅವ್ಯವಹಾರದಲ್ಲಿ ತೊಡಗಿರುವುದಾಗಿ ಮಾಧ್ಯಮದಲ್ಲಿ ವರದಿಯಾಗಿದೆ. ಈ ಬಗ್ಗೆ ಯಾವುದೇ ದಾಖಲೆ ಇದ್ದರೂ ನನ್ನ ಬಳಿ ಬಂದರೆ ಸರ್ಕಾರದ ಹಂತದಲ್ಲಿ ಚರ್ಚಿಸಿ ನ್ಯಾಯ ಒದಗಿಸಲು ಸಿದ್ಧನಿದ್ದೇನೆ ಎಂದು ಭರವಸೆ ನೀಡಿದ್ದಾರೆ.

ಬ್ರಾಹ್ಮಣ ಸಂಸ್ಥೆಗಳು ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಹಾಗೂ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ರೀತಿ ಆಗಲು ಬಿಡಬಾರದು. ಈ ವಿಚಾರದಲ್ಲಿ ಮೊದಲು ಬ್ರಾಹ್ಮಣರು ಹಾಗೂ ಮಠಗಳು ಒಗ್ಗಟ್ಟಾಗಿ ನಿಲ್ಲಬೇಕು. ದೂರುದಾರರ ಬಳಿ ಯಾವುದೇ ಸಾಕ್ಷ್ಯಾಧಾರ ಇದ್ದರೂ ದೂರು ದಾಖಲಿಸಿ ಸೂಕ್ತ ರೀತಿಯಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಉತ್ತರಾದಿ ಮಠದಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಜನರ ದೇಣಿಗೆ ಹಣ ದುರುಪಯೋಗ ಮಾಡಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಅಕ್ರಮ ನಡೆದಿದ್ದರೆ ಅದಕ್ಕೆ ಕಾರಣವಾಗಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಧ್ವನಿ ಎತ್ತಲು ಸಿದ್ಧವಾಗಿದ್ದೇವೆ. ಮಠಕ್ಕೆ ಬರುವ ಭಕ್ತಾದಿಗಳು, ಗುರುಗಳು ಹಾಗೂ ಈ ಸಂಸ್ಥೆ ಮೂರು ಕೂಡ ಪ್ರಮುಖ ವಿಚಾರ. ಈ ಮಠ ಉಳಿಸಿ ಬೆಳೆಸಿದವರನ್ನು ದೂರ ತಳ್ಳಿ ವೈಯಕ್ತಿಕ ಉಪಯೋಗಕ್ಕೆ ಜನರ ದೇಣಿಗೆ ಹಣ ಉಪಯೋಗಿಸುವುದು ಶಿಕ್ಷಾರ್ಹ ಅಪರಾಧ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತನಿಖೆ ಮೂಲಕ ಸತ್ಯ ತಿಳಿಯಲಿದೆ:

ಮೇಲ್ನೋಟಕ್ಕೆ ಅಶಿಸ್ತು ಅಥವಾ ಅಕ್ರಮ ಕಂಡು ಬಂದಿದ್ದರೆ ಅದರಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತನಿಖೆ ಮೂಲಕವೇ ತಿಳಿಯಬೇಕು. ಒಟ್ಟಾರೆ ಮಠ ಹಾಗೂ ಗುರುಗಳಿಂದ ಸಾಕಷ್ಟು ಜನರಿಗೆ ಸಹಾಯವಾಗಿದೆ. ಮಠ ಹಾಗೂ ಪೀಠ ಉಳಿಯಬೇಕು. ಭಕ್ತಾದಿಗಳ ಹಣ ಮಠ ಹಾಗೂ ಮಠದ ಅಭಿವೃದ್ಧಿಗೆ ಸೇರಬೇಕೇ ಹೊರತು ದುರುಪಯೋಗ ಆಗಬಾರದು ಎಂದು ಡಾ.ಶಂಕರ್‌ ಗುಹಾ ಅಭಿಪ್ರಾಯಪಟ್ಟಿದ್ದಾರೆ.

ಮಠ ಹಾಗೂ ಸ್ವಾಮೀಜಿ ಎಂದರೆ ಸರ್ವಸಂಗ ಪರಿತ್ಯಾಗಿ. ಪರಮ ಶ್ರೇಷ್ಠ ಕಾವಿ ಬಟ್ಟೆ ಉಟ್ಟು ಜನರಿಗೆ ಧರ್ಮಬೋಧನೆ, ಮಾರ್ಗದರ್ಶನ ತೋರುವ ಮಹತ್ವದ ಕಾರ್ಯ ಸನ್ಯಾಸಿಗಳದ್ದಾಗಿದೆ. ನಮ್ಮ ಧರ್ಮದಲ್ಲಿ ಗುರುವಿಲ್ಲದೆ ಏನೂ ನಡೆಯುವುದಿಲ್ಲ. ಗೋವಿಂದನಿಗೆ ಕೋಪ ಬಂದರೆ ಗುರು ಸಮಾಧಾನ ಮಾಡುತ್ತಾನೆ ಎಂಬ ಮಾತಿದೆ. ಉತ್ತರಾದಿ ಮಠದ ಗುರುಗಳೂ ಸಾಮಾನ್ಯ ಜನರಿಗೆ ದಾರಿ ತೋರಿಸಿ ದೇಶ ಕಾಪಾಡಿ ಲೋಕಕಲ್ಯಾಣ ಮಾಡಬೇಕಾಗಿದೆ. ಹೀಗಿರುವಾಗ ಇಂಥ ವಿಷಯಗಳು ಕೇಳಿ ಬಂದಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

Share this article