ವೃದ್ಧಾಪ್ಯದಲ್ಲಿ ತಾಯಿ ಆರೈಕೆ ಮಗಳ ಜವಾಬ್ದಾರಿ : ಹೈಕೋರ್ಟ್‌

Published : May 15, 2026, 09:01 AM IST
old age

ಸಾರಾಂಶ

ತಾಯಿಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮಗಳ ಹೆಸರಿಗೆ ನೋಂದಣಿಯಾದ ಆಸ್ತಿಯನ್ನು ಮತ್ತೆ ತಾಯಿಗೆ ಹಿಂದಿರುಗಿಸಲು ಮಗಳಿಗೆ ಸೂಚಿಸಿ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ ಮತ್ತು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

 ಬೆಂಗಳೂರು :  ತಾಯಿಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಪ್ರಕರಣವೊಂದರಲ್ಲಿ ಮಗಳ ಹೆಸರಿಗೆ ನೋಂದಣಿಯಾದ ಆಸ್ತಿಯನ್ನು ಮತ್ತೆ ತಾಯಿಗೆ ಹಿಂದಿರುಗಿಸಲು ಮಗಳಿಗೆ ಸೂಚಿಸಿ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ ಮತ್ತು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಎತ್ತಿಹಿಡಿದಿದೆ.

ಪೋಷಕರು, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ ಅಡಿ ತನಗೆ, ತಾಯಿ ಉಡುಗೊರೆಯಾಗಿ ನೀಡಿದ್ದ ಆಸ್ತಿ ನೋಂದಣಿ ರದ್ದುಪಡಿಸಿದ ನ್ಯಾಯಮಂಡಳಿ ಕ್ರಮ ಎತ್ತಿಹಿಡಿದ ಉಪವಿಭಾಗಾಧಿಕಾರಿಗಳ ಆದೇಶ ರದ್ದು ಕೋರಿ ಪವಿತ್ರಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರ ಪೀಠ ಈ ಆದೇಶ ಮಾಡಿದೆ.

ದಾನಪತ್ರದಲ್ಲಿ ತಾಯಿಯನ್ನು ನೋಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ಬರೆಯದಿದ್ದರೂ, ಆಸ್ತಿ ನೀಡುವ ಹಿಂದೆ ಅಂಥದ್ದೊಂದು ನಂಬಿಕೆ ಇರುತ್ತದೆ ಎಂಬುದು ಕಾನೂನಿನ ಆಶಯ. ಮಗಳು ಪವಿತ್ರಾಗೆ ಸ್ವಂತ ಮನೆಯಿದ್ದರೂ ವೃದ್ಧ ತಾಯಿ ಬಾಡಿಗೆ ಮನೆಯಲ್ಲಿರುವಂತೆ ಮಾಡಿರುವುದು ಅವರ ಬೇಜವಾಬ್ದಾರಿತನ ತೋರಿಸುತ್ತದೆ. ಹಿರಿಯ ನಾಗರಿಕರ ಪೋಷಣೆ ಮತ್ತು ಕಲ್ಯಾಣ ಕಾಯ್ದೆ-2007 ಉದ್ದೇಶವೇ ಅಸಹಾಯಕ ಪೋಷಕರನ್ನು ರಕ್ಷಿಸುವುದು. ತಾಂತ್ರಿಕ ಕಾರಣ ನೀಡಿ ಈ ಕಾಯ್ದೆಯ ಆಶಯವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ:

ಸುಮಾರು 62 ವರ್ಷದ ನಿವೃತ್ತ ಶಿಕ್ಷಕಿ ಜಿ.ಹೇಮಾ ಎಂಬುವರು ತಮ್ಮ ಹೆಸರಿನಲ್ಲಿದ್ದ ಸ್ವಯಾರ್ಜಿತ ಆಸ್ತಿಯನ್ನು ವೃದ್ಧಾಪ್ಯದ ಕಾಲದಲ್ಲಿ ಮಕ್ಕಳು ಆಸರೆಯಾಗುತ್ತಾರೆ ಮತ್ತು ಆಸ್ತಿಯ ಬಾಡಿಗೆಯಿಂದ ತಮ್ಮ ಜೀವನ ಸಾಗುತ್ತದೆ ಎಂಬ ನಂಬಿಕೆ ಆಧಾರದ ಮೇಲೆ ಮಗಳು ಆರ್.ಪವಿತ್ರಾ ಮತ್ತು ಮಗ ಆರ್.ವೇಣುಗೋಪಾಲ್ ಹೆಸರಿಗೆ ದಾನಪತ್ರ ಮೂಲಕ ವರ್ಗಾಯಿಸಿದ್ದರು.

ಇದಾದ ಬಳಿಕ ಮಕ್ಕಳಿಬ್ಬರು, ಮನೆ ಬಾಡಿಗೆ ವಸೂಲಿ ಮಾಡಲು ಮುಂದಾಗಿದ್ದರು. ಆದರೆ, ತಾಯಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿರಲಿಲ್ಲ. ತಾಯಿಗೆ ಮಾನಸಿಕ ಹಿಂಸೆ ನೀಡಲಾಗಿತ್ತು. ಇದರಿಂದ ಬೇಸತ್ತ ಹೇಮಾ ಅವರು, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯಡಿ, ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸಿದ್ದ ದಾನಪತ್ರ ರದ್ದುಮಾಡಬೇಕು ಎಂದು ಕೋರಿ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿ, ಆಸ್ತಿ ವರ್ಗಾವಣೆ ರದ್ದುಗೊಳಿಸಿ, ಮತ್ತೆ ತಾಯಿ ಹೇಮಾ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಟ್ಟಿತ್ತು. ಅದನ್ನು ಪ್ರಶ್ನಿಸಿ ಮಗಳು ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿಗಳು ನ್ಯಾಯಮಂಡಳಿ ಆದೇಶ ಎತ್ತಿಹಿಡಿದಿದ್ದರು. ಈ ಆದೇಶ ಪ್ರಶ್ನಿಸಿ ಮಗಳು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದಲ್ಲಿ‌ ಹಿರಿಯ ನಾಗರಿಕರಾದ ನಿವೃತ್ತ ಸರ್ಕಾರಿ ಶಾಲಾ ಶಿಕ್ಷಕಿ ಹೇಮಾ ಅವರು ತಮ್ಮ ಸ್ವಂತ ಗಳಿಕೆಯಿಂದ ಸಂಪಾದಿಸಿದ ಆಸ್ತಿಗಳನ್ನು ತಮ್ಮ ಮಗ ಮತ್ತು ಮಗಳ ಪರವಾಗಿ ವರ್ಗಾಯಿಸಿದ್ದಾರೆ. ಇದರಿಂದ ಅವರ ಸ್ವಾಮ್ಯದ ಹಕ್ಕುಗಳನ್ನು ತ್ಯಜಿಸಿದ್ದಾರೆ, ಅವರ ಮಕ್ಕಳ ಕೈಯಲ್ಲಿ ಆರೈಕೆ, ರಕ್ಷಣೆ ಮತ್ತು ಆರ್ಥಿಕ ಭದ್ರತೆಯ ನಂಬಿಕೆ ಮತ್ತು ಕಾನೂನುಬದ್ಧ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಸ್ವಂತ ಆಸ್ತಿಯಲ್ಲಿ ಆಶ್ರಯ ಮತ್ತು ಅದರಿಂದ ಉಂಟಾಗುವ ಆದಾಯದ ಲಾಭ ಎರಡನ್ನೂ ಕಳೆದುಕೊಂಡು ಈಗ ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿದೆ.

ಆದ್ದರಿಂದ ಉಪವಿಭಾಗಾಧಿಕಾರಿಗಳ ಆದೇಶ ರದ್ದುಗೊಳಿಸುವುದಿಲ್ಲ. ದಾನಪತ್ರಗಳನ್ನು ರದ್ದುಗೊಳಿಸುವುದು ಮತ್ತು ಆಸ್ತಿಯನ್ನು ತಾಯಿಯ ಸ್ವಾಧೀನವನ್ನು ಪುನಃಸ್ಥಾಪಿಸುವುದು ಸಮರ್ಥನೀಯ ಕ್ರಮ ಎಂದು ಪೀಠ ತಿಳಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಅಪ್ರಾಪ್ತೆಯರ ವಿಡಿಯೋ ಚಿತ್ರೀಕರಿಸಿ ಆನ್‌ಲೈನ್‌ಗೆ ಆಪ್ಲೋಡ್‌ : ಇಬ್ಬರ ಸೆರೆ
ಜೀತ ಪದ್ಧತಿಯಲ್ಲಿ ಸಿಲುಕಿದ್ದ 37 ಒಡಿಶಾ ಕಾರ್ಮಿಕರ ರಕ್ಷಣೆ !