;Resize=(412,232))
ಬೆಂಗಳೂರು : ಆದಾಯದ ಮೂಲಗಳಿಗೆ ಸಂಬಂಧಿಸಿ ನಟ ಯಶ್‌ಗೆ ನೀಡಿದ್ದ ನೋಟಿಸ್‌ಗಳು ಕಾನೂನುಬದ್ಧ ಹಾಗೂ ಸಮರ್ಥನೀಯವಾಗಿಲ್ಲ ಎಂದಿರುವ ಹೈಕೋರ್ಟ್, ಆದಾಯ ತೆರಿಗೆ ಇಲಾಖೆ ಯಶ್ ಅವರಿಗೆ ನೀಡಿದ್ದ ನೋಟಿಸ್‌ನ್ನು ರದ್ದುಗೊಳಿಸಿದೆ.
ಬೆಂಗಳೂರಿನಲ್ಲಿ ಯಶ್ ಅವರ ಮನೆ, ಕೊಠಡಿ ಶೋಧ ನಡೆಸಿದ್ದರೂ, ‘ಶೋಧಕ್ಕೆ ಒಳಪಡದ ವ್ಯಕ್ತಿ’ ಎಂದು ತನಿಖೆಯಲ್ಲಿ ಉಲ್ಲೇಖಿಸಿರುವುದು ನಿಯಮಗಳ ಪಾಲನೆಯಲ್ಲಿ ಲೋಪವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಐಟಿ ಕಾಯ್ದೆ ಕಲಂ 153 ಸಿ ಅನ್ವಯ 6 ವರ್ಷಗಳ ಅವಧಿಯ ಆದಾಯ ತೆರಿಗೆ ಮೌಲ್ಯಮಾಪನಕ್ಕೆ ಸಂಬಂಧಿಸಿ ತಮಗೆ ನೀಡಿರುವ ನೋಟಿಸ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಯಶ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ನೋಟಿಸ್ ಜಾರಿ ಮಾಡುವಾಗ ಕಾರ್ಯವಿಧಾನದ ಉಲ್ಲಂಘನೆಯಾಗಿರುವ ಕಾರಣ ನೋಟಿಸ್ ಊರ್ಜಿತವಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹೊಂಬಾಳೆ ಕನ್‌ಸ್ಟ್ರಕ್ಷನ್ಸ್ ಕಂಪನಿ ಕಚೇರಿ ಮತ್ತು ಮಾಲೀಕ ವಿಜಯಕುಮಾರ್ ನಿವಾಸದ ಮೇಲೆ 2019ರಲ್ಲಿ ಐಟಿ ದಾಳಿ ನಡೆಸಿತ್ತು. ತನಿಖೆ ಭಾಗವಾಗಿ ಐಟಿ ಅಧಿಕಾರಿಗಳ ತಂಡ ಹೊಸಕೆರೆಹಳ್ಳಿಯಲ್ಲಿರುವ ಯಶ್ ನಿವಾಸ ಮತ್ತು ಖಾಸಗಿ ಹೊಟೇಲ್‌ನಲ್ಲಿನ ಕೊಠಡಿಯಲ್ಲಿ ಶೋಧ ನಡೆಸಿದ್ದರು. ಬಳಿಕ 6 ವರ್ಷಗಳ ಆದಾಯ ತೆರಿಗೆ ಮಾಹಿತಿ ಒದಗಿಸುವಂತೆ ನೋಟಿಸ್ ನೀಡಿದ್ದರು. ನೋಟಿಸ್ ಪ್ರಶ್ನಿಸಿ ಯಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಪರ ವಕೀಲರು, ಯಶ್ ಮನೆ ಮತ್ತು ಹೋಟೆಲ್‌ನಲ್ಲಿನ ಕೋಣೆಯನ್ನು ಶೋಧ ನಡೆಸಿರುವ ಅಧಿಕಾರಿಗಳು ದಾಖಲೆಗಳನ್ನು ವಶಪಡಿಸಿಕೊಂಡು ಮಹಜರು ಮಾಡಿದ್ದಾರೆ. ಈ ಪ್ರಕ್ರಿಯೆಗಳು ಶೋಧನೆಗೆ ಒಳಪಟ್ಟ ವ್ಯಕ್ತಿ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೂ, ಯಶ್ ಅವರು ಶೋಧನೆಗೆ ಒಳಪಟ್ಟಿಲ್ಲ ಎಂದು ಐಟಿ ಇಲಾಖೆ ಹೇಳಿದೆ. ಈ ಮೂಲಕ ಐಟಿ ಇಲಾಖೆಯಿಂದ ಮೂಲ ಶೋಧನೆಗೆ ಒಳಗಾದ ವ್ಯಕ್ತಿಗೆ ‘ಸಂಬಂಧಿಸಿದ ವ್ಯಕ್ತಿ’ಗಳಿಗೆ ನೀಡುವ ಐಟಿ ಕಾಯ್ದೆಯ ಸೆಕ್ಷನ್ 153 ಇ ಅಡಿ ನೋಟಿಸ್ ನೀಡಿರುವುದು ತಪ್ಪು ಎಂದು ವಾದಿಸಿದ್ದರು.
ಐಟಿ ಪರ ವಕೀಲರು, ಹೊಂಬಾಳೆ ಕನ್‌ಸ್ಟ್ರಕ್ಷನ್ಸ್ ಮತ್ತು ವಿಜಯ್ ಕುಮಾರ್ ಅವರನ್ನು ಗುರಿಯಾಗಿಸಿಕೊಂಡು ಶೋಧ ನಡೆಸಲಾಗಿದೆ. ಯಶ್ ಪ್ರಾಥಮಿಕ ಶೋಧನೆಯ ವ್ಯಕ್ತಿ ಆಗಿರಲಿಲ್ಲ ಎಂದು ವಾದಿಸಿದ್ದರು.