ಪೊಲೀಸ್‌ ನೇಮಕಾತಿಯಲ್ಲಿ ಕ್ರೀಡಾ ಮೀಸಲು ಶೇ.3ಕ್ಕೆ ಹೆಚ್ಚಳ - 33 ನಿಷ್ಕ್ರಿಯ ಸರ್ಕಾರಿ ಉದ್ಯಮಗಳ ಬಂದ್‌/ವಿಲೀನ

Published : Jan 31, 2025, 11:02 AM IST
KSRP

ಸಾರಾಂಶ

ಕಾನ್‌ಸ್ಟೇಬಲ್‌ನಿಂದ ಡಿವೈಎಸ್ಪಿವರೆಗೆ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.3ಕ್ಕೆ ಹೆಚ್ಚಿಸುವ ಜೊತೆಗೆ ಡಿವೈಎಸ್‌ಪಿ ಹುದ್ದೆಗೆ ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

 ಬೆಂಗಳೂರು : ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಖಾಸಗಿ ಹೂಡಿಕೆ ಹೆಚ್ಚಿಸಲು ಪಿಪಿಪಿ ಕಾರ್ಯನೀತಿ-2025, ಪೊಲೀಸ್‌ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್‌ಸ್ಟೇಬಲ್‌ನಿಂದ ಡಿವೈಎಸ್‌ಪಿವರೆಗಿನ ನೇಮಕಕ್ಕೆ ಕ್ರೀಡಾ ಕೋಟದ ಮೀಸಲಾತಿ ಪ್ರಮಾಣವನ್ನು ಶೇ.2ರಿಂದ 3ಕ್ಕೆ ಹೆಚ್ಚಳ, ಏತ ನೀರಾವರಿ ಕೆರೆಗಳಲ್ಲಿ ಮೀನುಗಾರಿಕೆ ಹರಾಜಿನ ಸರ್ಕಾರಿ ಸವಾಲಿನ ಬೆಲೆ ದುಬಾರಿ...’

ಇವು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವ ಪ್ರಮುಖ ವಿಷಯಗಳು. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ.ಪಾಟೀಲ್‌ ಅವರು, ಕಾನ್‌ಸ್ಟೇಬಲ್‌ನಿಂದ ಡಿವೈಎಸ್ಪಿವರೆಗೆ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ.3ಕ್ಕೆ ಹೆಚ್ಚಿಸುವ ಜೊತೆಗೆ ಡಿವೈಎಸ್‌ಪಿ ಹುದ್ದೆಗೆ ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಕೈಗೊಳ್ಳಲು ಸರ್ಕಾರ ಮುಂದಾಗಿದ್ದು, ಈ ಸಂಬಂಧದ ರಾಜ್ಯ ಮೂಲಸೌಕರ್ಯ ಯೋಜನೆಗಳಿಗೆ ಪಿಪಿಪಿ ಕಾರ್ಯನೀತಿ -2025ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸುಸ್ಥಿರ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬೆಳವಣಿಗೆ ಮತ್ತು ಸಮಾನತೆ ಸಾಧಿಸುವ ಸಾಧನವಾಗಿ ಮೂಲಸೌಕರ್ಯದಲ್ಲಿ ಖಾಸಗಿ ಹೂಡಿಕೆ ವಿಸ್ತರಿಸುವುದು, ಮತ್ತಷ್ಟು ಉತ್ತೇಜಿಸುವುದು ಮತ್ತು ಅಭಿವೃದ್ಧಿಪಡಿಸುವುದು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಮಾದರಿಯಾಗಿಸುವುದು ಇದರ ಉದ್ದೇಶ ಎಂದು ತಿಳಿಸಿದರು.

33 ನಿಷ್ಕ್ರಿಯ ಸರ್ಕಾರಿ ಉದ್ಯಮಗಳ ಬಂದ್‌/ವಿಲೀನ

ದೀರ್ಘಕಾಲದವರೆಗೆ ನಿಷ್ಕ್ರಿಯವಾದ ಅಥವಾ ಪುನಶ್ಚೇತನಕ್ಕೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲದ ಕರ್ನಾಟಕ ಸರ್ಕಾರದ ಒಡೆತನದ ಕಂಪನಿಗಳನ್ನು ಮುಚ್ಚುವ ಅಥವಾ ಮತ್ತೊಂದು ಕಂಪನಿಯೊಂದಿಗೆ ವಿಲೀನಗೊಳಿಸಲು ಸಂಪುಟ ಅನುಮೋದನೆ ನೀಡಿದೆ. ರಾಜ್ಯದ 125 ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ 16 ಕಂಪನಿಗಳು ನಿಷ್ಕ್ರಿಯವಾಗಿವೆ ಮತ್ತು ಸ್ಥಗಿತಗೊಂಡಿವೆ.

ಇವುಗಳನ್ನು ಶಾಶ್ವತವಾಗಿ ಮುಚ್ಚುವ ಅಥವಾ ಮತ್ತೊಂದು ಕಂಪನಿಯಲ್ಲಿ ವಿಲೀನಕ್ಕೆ ತೀರ್ಮಾನಿಸಲಾಗಿದೆ. ಉಳಿದವುಗಳ ಪೈಕಿ 34 ಕಂಪನಿಗಳು ಲಾಭದಲ್ಲಿದ್ದರೆ, 33 ನಷ್ಟದಲ್ಲಿವೆ. 32 ಸಾಮಾಜಿಕ ವಲಯದ ಕಂಪನಿಗಳಾಗಿವೆ.

ಜಾತಿಗಣತಿ ವರದಿ ಮಂಡನೆ ಇಲ್ಲ:

ಬಹು ನಿರೀಕ್ಷಿತ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿಯು (ಜಾತಿಗಣತಿ) ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿಲ್ಲ. ತನ್ಮೂಲಕ ಜಾತಿಗಣತಿ ವರದಿ ಮಂಡನೆ ಮುಹೂರ್ತ ಮತ್ತೊಮ್ಮೆ ಮುಂದೂಡಿಕೆಯಾದಂತಾಗಿದೆ. ಈಗಾಗಲೇ ಮೂರು ಬಾರಿ ಮಂಡನೆ ಮಾಡುವುದಾಗಿ ಹೇಳಿ ಮುಂದೂಡಿಕೆಯಾಗಿದ್ದ ಜಾತಿಗಣತಿ ವರದಿ ಈ ಬಾರಿಯೂ ಮಂಡನೆಯಾಗಿಲ್ಲವಲ್ಲ ಎಂಬ ಪ್ರಶ್ನೆಗೆ, ಈ ಬಾರಿ ತುರ್ತು ವಿಷಯಗಳಿದ್ದ ಕಾರಣ ಜಾತಿಗಣತಿ ವರದಿ ತರಲಾಗಿಲ್ಲ ಎಂದು ಸಚಿವ ಎಚ್‌.ಕೆ.ಪಾಟೀಲ್‌ ಹೇಳಿದರು.

ಮೀನುಗಾರಿಕೆ ಸವಾಲಿನ ಬೆಲೆ ದುಬಾರಿ:

ಏತ ನೀರಾವರಿ ಕೆರೆಗಳ ಮೀನುಗಾರಿಕೆ ಹರಾಜಿನ ಸರ್ಕಾರಿ ಸವಾಲಿನ ಬೆಲೆಯನ್ನು ಹಾಲಿ ಉಪಯುಕ್ತ ಜಲ ವಿಸ್ತೀರ್ಣಕ್ಕೆ ಇರುವ 300 ರು.ಗಳನ್ನು ಪ್ರತಿ ಹೆಕ್ಟೇರ್‌ಗೆ 1,500 ರು.ಗೆ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ. ಕಾರವಾರ, ಹೊನ್ನಾವರ, ಮಲ್ಪೆ ಸೇರಿ ರಾಜ್ಯದ 14 ಕಿರು ಬಂದರುಗಳಲ್ಲಿ ವಿಧಿಸಲಾಗುತ್ತಿರುವ ಬಂದರು ಶುಲ್ಕ, ಪೈಲಟೇಜ್‌ ಮತ್ತು ಟಗ್‌ ಬಾಡಿಗೆ ಶುಲ್ಕಗಳ ಪರಿಷ್ಕರಣೆ, ಹಾರ್ಬರ್‌ ಕ್ರಾಫ್ಟ್‌ ಸರ್ವೆ ಮತ್ತು ನೋಂದಣಿ ಶುಲ್ಕ ಹಾಗೂ ಇನ್‌ಲ್ಯಾಂಡ್‌ ವೆಸೆಲ್ಸ್ ನಾವೆಗಳ ಸರ್ವೆ ಮತ್ತು ನೋಂದಣಿ ಶುಲ್ಕಗಳ ಪರಿಷ್ಕರಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದರಿಂದ ವಾರ್ಷಿಕ 3.50ರಿಂದ 4 ಕೋಟಿ ರು.ವರೆಗೆ ಹೆಚ್ಚಿನ ಆದಾಯ ನಿರೀಕ್ಷಿಸಲಾಗಿದೆ.

ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಇತರೆ ನಿರ್ಣಯಗಳು

ವಿಶ್ವ ಬ್ಯಾಂಕ್ ನೆರವಿನ ಕರ್ನಾಟಕ ಜಲಭದ್ರತೆ ಮತ್ತು ವಿಪತ್ತು ನಿರೋಧಕ ಕಾರ್ಯಕ್ರಮ 5000 ಕೋಟಿ ರು.ಗಳಲ್ಲಿ ಕೈಗೊಳ್ಳಲು ತೀರ್ಮಾನ. (500 ಕೋಟಿ ರು. ವಿಶ್ವ ಬ್ಯಾಂಕ್ ಸಾಲ-ರಾಜ್ಯ ಸರ್ಕಾರದ 1500 ಕೋಟಿ ರು.)

- ಹಾಸನ-ಹೊಳೆನರಸೀಪುರ ರೈಲು ಮಾರ್ಗದ ರೈಲ್ವೆ ಲೆವಲ್ ಕ್ರಾಸಿಂಗ್ ಗೇಟ್ ಸಂ. 3ರ ಬದಲಿಗೆ ರಸ್ತೆ ಮೇಲ್ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣ

- ಸಿಂದಗಿ ತಾಲೂಕಿನ ಕಡಣಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ 44.50 ಕೋಟಿ ರು. ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿ

- ಅಲ್ಪಸಂಖ್ಯಾತ ಇಲಾಖೆಯಡಿ 304 ಕೋಟಿ ರು. ಅಂದಾಜಿನಲ್ಲಿ 19 ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾಲೇಜು ಕಟ್ಟಡ, ಪಿಎಂ ಜನವಿಕಾಸ ಯೋಜನೆಯಡಿ 12 ವಸತಿ ಶಾಲೆ/ವಿದ್ಯಾರ್ಥಿನಿಲಯಗಳನ್ನು 191.19 ಕೋಟಿ ರು. ಅಂದಾಜಲ್ಲಿ ನಿರ್ಮಾಣ

- ರಾಜ್ಯದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಮಾರುಕಟ್ಟೆ ಶುಲ್ಕ/ಬಳಕೆದಾರರ ಶುಲ್ಕದ ಮರುಹಂಚಿಕೆ, ಮೂರು ಪೈಸೆಯನ್ನು ಮಾರುಕಟ್ಟೆ ಅಭಿವೃದ್ದಿ ನೆರವು ನಿಧಿಗೆ ವಂತಿಗೆ ನೀಡಲು ತೀರ್ಮಾನ

- ಬೀದರ್‌ ನಗರಸಭೆಯನ್ನು 16 ಗ್ರಾಮಗಳ ಸೇರ್ಪಡೆಯೊಂದಿಗೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲು ಅನುಮೋದನೆ

- ಬೆಳಗಾವಿ ಜಿಲ್ಲೆಯ ಅಥಣಿ ಪುರಸಭೆ ವ್ಯಾಪ್ತಿಯ ಜೋಡುಕೆರೆಯನ್ನು 15 ಕೋಟಿ ರು.ಗಳಲ್ಲಿ ಅಭಿವೃದ್ಧಿಗೆ ಒಪ್ಪಿಗೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕೃತಕ ಬುದ್ದಿಮತ್ತೆ ಯುಗದಲ್ಲಿ ಕೌಶಲ್ಯಕ್ಕೆ ಮನ್ನಣೆ
ಟೌನ್ ಬ್ಯಾಂಕ್ ನೂತನ ಸದಸ್ಯರಿಗೆ ಶಾಸಕ ಶರತ್‌ ಅಭಿನಂದನೆ