ಏರೋಸ್ಪೇಸ್‌ ತಂತ್ರಜ್ಞಾನ ನಾಯಕನಾಗುವತ್ತ ಭಾರತ ದಾಪುಗಾಲು : ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌

Published : Feb 13, 2025, 09:58 AM IST
Rajnath singh

ಸಾರಾಂಶ

ಖಾಸಗಿ ಕಂಪನಿಗಳು ರಕ್ಷಣಾ ಉತ್ಪನ್ನಗಳ ಉತ್ಪಾದನೆಯ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಕರೆ ನೀಡಿದ್ದಾರೆ.

 ಬೆಂಗಳೂರು : ಖಾಸಗಿ ಕಂಪನಿಗಳು ರಕ್ಷಣಾ ಉತ್ಪನ್ನಗಳ ಉತ್ಪಾದನೆಯ ಮುಂದಾಳತ್ವ ವಹಿಸಿಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಕರೆ ನೀಡಿದ್ದಾರೆ.

ಯಲಹಂಕ ವಾಯುಪಡೆ ನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2025ರ ವ್ಯಾಪಾರೋದ್ಯಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ 16 ಸಾವಿರ ಸಣ್ಣ ಕೈಗಾರಿಕೆಗಳು ರಕ್ಷಣಾ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ. ಇದರಲ್ಲಿ ಶೇ.21ರಷ್ಟು ಪಾಲು ಖಾಸಗಿ ವಲಯದ್ದಿದೆ. ಸ್ವಾವಲಂಬನೆ ಸಾಧಿಸುವಲ್ಲಿ ಖಾಸಗಿ ಕಂಪನಿಗಳು ಮಹತ್ವದ ಪಾತ್ರ ವಹಿಸುತ್ತಿವೆ. ಖಾಸಗಿ ವಲಯಗಳಿಗೆ ಉತ್ತೇಜಿಸಲು ಅನೇಕ ನೀತಿಗಳನ್ನು ಸರ್ಕಾರ ಜಾರಿಗೆ ತಂದಿದೆ. ಅವುಗಳ ಪ್ರಯೋಜನ ಪಡೆದು ರಕ್ಷಣಾ ಉತ್ಪನ್ನಗಳ ಉತ್ಪಾದನೆಯ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಹೇಳಿದರು.

ರಕ್ಷಣಾ ಅನ್ವೇಷಣೆ ಮತ್ತು ಏರೋಸ್ಪೇಸ್ ಟೆಕ್ನಾಲಜಿಯಲ್ಲಿ ಭಾರತ ಜಾಗತಿಕ ನಾಯಕನಾಗುವತ್ತ ದಾಪುಗಾಲು ಇಡುತ್ತಿದೆ. ಏರೋ ಇಂಡಿಯಾದಲ್ಲಿ ಆ ಬಗೆಗಿನ ಶಕ್ತಿ ಸಾಮರ್ಥ್ಯ ಮತ್ತು ಉತ್ಸಾಹ ಸ್ಪಷ್ಟವಾಗಿ ಗೋಚರಿಸಿದೆ. ರಕ್ಷಣಾ ಮತ್ತು ಏರೋಸ್ಪೇಸ್‌ ಕಂಪನಿಗಳ ನಡುವಿನ ವ್ಯಾಪಾರ, ಒಪ್ಪಂದಗಳು, ಮಾತುಕತೆಗಳು ಫಲಪ್ರದವಾಗಿದೆ. ಈ ಬಾರಿಯ ಏರೋ ಇಂಡಿಯಾ ಐತಿಹಾಸಿಕ ಎಂದು ಸಚಿವರು ನುಡಿದರು.

ಒಂದು ದಶಕದ ಹಿಂದೆ ಶೇ.65-70ರಷ್ಟು ರಕ್ಷಣಾ ಉತ್ಪನ್ನಗಳನ್ನು ಅಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಅಷ್ಟೇ ಪ್ರಮಾಣದಲ್ಲಿ ಭಾರತದಲ್ಲೇ ಉತ್ಪಾದಿಸಲಾಗುತ್ತಿದೆ. ಫೈಟರ್ ಜೆಟ್, ಕ್ಷಿಪಣಿ, ನೌಕೆಗಳು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸುತ್ತಿರುವುದರಿಂದ ಜಗತ್ತಿನ ದೃಷ್ಟಿ ನಮ್ಮ ದೇಶದ ಕಡೆ ನೆಟ್ಟಿದೆ. ಅನೇಕ ಮಾದರಿಯ ಉತ್ಪನ್ನಗಳನ್ನು ಇಂದು ಭಾರತದಿಂದ ವಿವಿಧ ರಾಷ್ಟ್ರಗಳಿಗೆ ರಪ್ತು ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು.

ರಕ್ಷಣಾ ವಲಯದಲ್ಲಿ ಭಾರತದ ಭವಿಷ್ಯವನ್ನು ಏರೋ ಇಂಡಿಯಾ ಪರಿಚಯಿಸಿದೆ. ಈ ವೇಳೆ ಆಗಿರುವ ಸಹಭಾಗಿತ್ವ, ಹೂಡಿಕೆ ಒಪ್ಪಂದಗಳು, ಹೊಸ ಘಟಕ ಸ್ಥಾಪನೆ ಯೋಜನೆಗಳು ಫಲಪ್ರದವಾಗಿ ಜಾರಿಯಾಗುವ ಮೂಲಕ ಕಂಪನಿಗಳು, ಪಾಲುದಾರರು ಮತ್ತು ದೇಶಕ್ಕೆ ಉಪಯೋಗವಾಗುತ್ತದೆ ಎಂದು ರಾಜನಾಥ ಸಿಂಗ್ ಹೇಳಿದರು.

ಇನ್ನೋವೇಷನ್ಸ್ ಫಾರ್ ಡಿಫೆನ್ಸ್ ಎಕ್ಸ್‌ಲೆನ್ಸ್‌ (ಐಡೆಕ್ಸ್) ಯೋಜನೆಯಡಿ ಡಿಆರ್‌ಡಿಒ, ಭಾರತೀಯ ನೌಕಾಪಡೆ ಮತ್ತು 24 ಸರ್ಕಾರಿ ಸ್ವಾಮ್ಯದ ರಕ್ಷಣಾ ಸಂಸ್ಥೆಗಳು ಸಂಪೂರ್ಣವಾಗಿ ದೇಶಿಯವಾಗಿ ಉತ್ಪಾದಿಸಿರುವ ಉತ್ಪನ್ನಗಳಿರುವ ಕಾಫಿ ಟೇಬಲ್ ಪುಸ್ತಕವನ್ನು ಇದೇ ವೇಳೆ ರಾಜನಾಥ್ ಸಿಂಗ್ ಬಿಡುಗಡೆ ಮಾಡಿದರು.

ಗಡಿ ಭದ್ರತೆಗೆ ಬಳಸುವ ಡ್ರೋನ್ ಅಭಿವೃದ್ಧಿ ಘಟಕ ರಾಜ್ಯದಲ್ಲಿ ಸ್ಥಾಪನೆ

  ಬೆಂಗಳೂರು : ಮಾವನರಹಿತ ವೈಮಾನಿಕ ನೌಕೆಗಳ (ಯುಎವಿ) ಉತ್ಪಾದನೆಗಾಗಿ ಕರ್ನಾಟಕದಲ್ಲಿ ವಿನ್ಯಾಸ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಪ್ರಮಾಣೀಕರಣ ಕೇಂದ್ರವನ್ನು ಸ್ಥಾಪಿಸಲು ಟಾಟಾ ಎಲೆಕ್ಸಿ ಮತ್ತು ಗರುಡಾ ಏರೋಸ್ಪೇಸ್ ಕಂಪನಿಗಳು ಏರೋ ಇಂಡಿಯಾದಲ್ಲಿ ಬುಧವಾರ ಒಪ್ಪಂದ ಮಾಡಿಕೊಂಡಿವೆ.

ದೇಶದ ರಕ್ಷಣಾ ವಲಯದ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಡ್ರೋನ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಗುಪ್ತಚರ ಕೆಲಸಗಳು, ಸೂಕ್ಷ್ಮ ಸ್ಥಳಗಳ ಮೇಲೆ ನಿಗಾ ಇಡುವುದು, ಗೌಪ್ಯ ಕಾರ್ಯಾಚರಣೆಗಳಿಗೂ ಬಳಕೆಯಾಗುತ್ತದೆ. ಗಡಿ ಭದ್ರತಾ ಪಡೆಯು ಡ್ರೋನ್‌ಗಳ ಪ್ರಮುಖ ಬಳಕೆದಾರನಾಗಲಿದೆ. ಅಲ್ಲದೆ, ಸರಕುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಿಸುವುದು, ಗುಣಮಟ್ಟ ಮೇಲ್ವಿಚಾರಣೆ ಸೇರಿ ಕೃಷಿಯ ವಿವಿಧ ಉದ್ದೇಶಗಳಿಗೆ ಬಳಸಬಹುದಾಗಿದೆ ಎಂದು ಟಾಟಾ ಎಲೆಕ್ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಯಾರಾಗ್ಲೈಡಿಂಗ್ ಪ್ರವಾಸೋದ್ಯಮದ ಅವಕಾಶ ಬಿಚ್ಚಿಟ್ಟ ಏರೋ ಇಂಡಿಯಾ 

ಪ್ರವಾಸೋದ್ಯಮ ಅವಲಂಬಿತ ರಾಷ್ಟ್ರಗಳಲ್ಲಿ ಜನಪ್ರಿಯತೆಗಳಿಸಿರುವ ರೋಮಾಂಚಕ ಮನೋರಂಜನಾ ಚಟುವಟಿಕೆ ‘ಪ್ಯಾರಾಗ್ಲೈಡಿಂಗ್‌’ಗೆ ರಾಜ್ಯದಲ್ಲಿರುವ ವಿಫುಲ ಅವಕಾಶಗಳನ್ನು ಏರೋ-ಇಂಡಿಯಾ-2025 ತೆರೆದಿಟ್ಟಿದೆ.

ಆಸ್ಟ್ರೇಲಿಯಾ ಮೂಲದ ಏರೋಚೂಟ್ ಇಂಟರ್‌ನ್ಯಾಷನಲ್ ಕಂಪನಿಯು ಎರಡು ಸೀಟುಗಳ ಪ್ಯಾರಾಗ್ಲೈಡರ್ ಅನ್ನು ಪ್ರದರ್ಶನಕ್ಕೆ ಇರಿಸಿದೆ. 150 ಮೀಟರ್‌ ಉದ್ದದ ಸಮತಟ್ಟಾದ ಖಾಲಿ ಜಾಗ, ಸಮುದ್ರತೀರ, ಗಟ್ಟಿಯಾದ ಹುಲ್ಲಿನ ಮೇಲೂ ಸುಲ‍ಭವಾಗಿ ಟೇಕಾಫ್‌ ಆಗುತ್ತದೆ. ಸಮುದ್ರತೀರ, ಅರಣ್ಯ, ಹುಲ್ಲುಗಾವಲು ಸೇರಿ ರಮಣೀಯ ದೃಶ್ಯಗಳನ್ನು ಪ್ಯಾರಾಗ್ಲೈಡರ್‌ನಲ್ಲಿ ಹಾರುತ್ತಾ ವೀಕ್ಷಿಸಬಹುದು. ಗಂಟೆಗೆ ಗರಿಷ್ಠ 60 ಕಿ.ಮೀ ವೇಗದಲ್ಲಿ ಸುಮಾರು 2 ತಾಸು ಕಾಲ ಹಾರಾಟ ನಡೆಸುತ್ತದೆ.

ಭಾರತವು ಸಾವಿರಾರು ಕಿ.ಮೀ.ಗಳ ಕಡಲ ಕಿನಾರೆ ಹೊಂದಿದೆ. ಅರಣ್ಯ, ಬೆಟ್ಟಗುಡ್ಡ, ಜಲಪಾತಗಳು ಸೇರಿ ರಮಣೀಯ ದೃಶ್ಯ ಅನುಭವ ನೀಡುವ ಅನೇಕ ತಾಣಗಳಿವೆ. ಇಂಥ ಸ್ಥಳಗಳಲ್ಲಿ ಪ್ಯಾರಾ ಗ್ಲೈಡರ್ ಬಳಸಬಹುದು. ಆಸ್ಟ್ರೇಲಿಯಾ, ಥಾಯ್ಲೆಂಡ್‌, ಇಂಡೋನೇಷ್ಯಾ ಸೇರಿ ಅನೇಕ ರಾಷ್ಟ್ರಗಳಲ್ಲಿ ಈ ಪ್ಯಾರಾ-ಗ್ಲೈಡರ್ ಬಳಕೆಯಲ್ಲಿದೆ. ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ. ಪ್ಯಾರಾಗ್ಲೈಡಿಂಗ್ ರೈಡ್ ಇರುವ ಕಡೆ ಅದರ ಅನುಭವಕ್ಕಾಗಿ ಅನೇಕರು ಭೇಟಿ ನೀಡುತ್ತಾರೆ ಎಂದು ಏರೋಚೂಟ್ ಕಂಪನಿಯ ಸಂಸ್ಥಾಪಕ, ಸಿಇಒ ಸ್ಟಿಫನ್ ಕಾಂಟೇ ತಿಳಿಸಿದರು.

ಮನೋರಂಜನಾ ಉದ್ದೇಶ ಜತೆಗೆ ಕೃಷಿ ಜಮೀನುಗಳ ಮೇಲ್ವಿಚಾರಣೆ, ಬೆಳೆ ಸಿಂಪಡಣೆ, ಗಡಿ ಕಾವಲು, ವೈಮಾನಿಕ ಫೋಟೋ ಶೂಟ್, ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಗಳಿಗೂ ಈ ಪ್ಯಾರಾಗ್ಲೈಡರ್ ಬಳಸಬಹುದು. 34 ವರ್ಷಗಳ ಅನುಭವದಲ್ಲಿ ಸಾವು-ನೋವಿನ ಅಪಘಾತಗಳು ಸಂಭವಿಸಿಲ್ಲ. ಗುಣಮಟ್ಟದಿಂದ ಸುರಕ್ಷತೆ ಖಾತ್ರಿ ನೀಡುತ್ತೇವೆ. ಕಿರು ಅವಧಿಯ ಪೈಲಟ್ ತರಬೇತಿ ಕೂಡ ನೀಡಲಾಗುತ್ತದೆ ಎಂದು ಸ್ಟಿಫನ್ ಹೇಳಿದರು.

ಮೇಕ್ ಇನ್ ಇಂಡಿಯಾ: ಪುಣೆ ಮೂಲಕ ಮ್ಯಾಕ್ಸ್‌ಲಿಂಕ್ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಲಾಗಿದ್ದು, ದೇಶಿಯವಾಗಿ ಪ್ಯಾರಾಗ್ಲೈಡರ್ ಉತ್ಪಾದಿಸುತ್ತೇವೆ. ಬೆಂಗಳೂರಿನಲ್ಲೂ ಕಚೇರಿ ತೆರೆಯುವ ಆಲೋಚನೆ ಇದೆ ಎಂದು ಸಿಇಒ ಸ್ಟಿಫನ್ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರೈಲುಗಳಲ್ಲಿ ಹೆಚ್ಚಾಗುತ್ತಲೇ ಇದೆ ಗಾಂಜಾ ಸಾಗಣೆ
ಯತೀಂದ್ರ ಹೇಳಿಕೆಯಿಂದ ರಾಜ್ಯದಲ್ಲಿ ಮತ್ತೆ ಸಿಎಂ ಕುರ್ಚಿ ಕಿಚ್ಚು