ಒಳಮೀಸಲು ಸಮೀಕ್ಷಾ ವರದಿ ಇಂದು ರಾಜ್ಯ ಸರ್ಕಾರಕ್ಕೆ ಸಲ್ಲಿಕೆ

Published : Aug 04, 2025, 06:35 AM IST
vidhan soudha

ಸಾರಾಂಶ

ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಉಪ ಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಏಕಸದಸ್ಯ ಆಯೋಗ ಸೋಮವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

ಬೆಂಗಳೂರು : ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸಲು ಉಪ ಪಂಗಡಗಳ ಅಂಕಿ-ಅಂಶಗಳ ಸಮೀಕ್ಷೆಗಾಗಿ ರಾಜ್ಯ ಸರ್ಕಾರ ರಚಿಸಿದ್ದ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ನೇತೃತ್ವದ ಏಕಸದಸ್ಯ ಆಯೋಗ ಸೋಮವಾರ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಲಿದೆ.

ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಆಯೋಗ ತನ್ನ ವರದಿ ಸಲ್ಲಿಸಲಿದೆ.

ಒಳಮೀಸಲಾತಿ ಹಿನ್ನೆಲೆಯಲ್ಲಿ ಸರ್ಕಾರದ ವಿವಿಧ ಇಲಾಖಾ ನೇಮಕಾತಿಗಳು, ಬಡ್ತಿ ವಿಚಾರಗಳಿಗೆ ಕೆಲ ತಿಂಗಳಿಂದ ತಡೆಬಿದ್ದಿದೆ. ನೇಮಕಾತಿ, ಬಡ್ತಿ ಪುನಾರಂಭಗೊಳ್ಳಲು ಈ ವರದಿ ಮಹತ್ವದ್ದಾಗಿದೆ. ವರದಿಗಾಗಿ ನಾವು ಕಾಯುತ್ತಿದ್ದೇವೆ. ವರದಿ ಬಂದ 20 ದಿನಗಳಲ್ಲೇ ಒಳಮೀಸಲಾತಿ ಜಾರಿ ಮಾಡುವುದಾಗಿ ಸರ್ಕಾರ ಕೂಡ ಹೇಳಿದೆ.

ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ ಬರುವ ಸುಮಾರು 100ಕ್ಕೂ ಹೆಚ್ಚು ಉಪ ಪಂಗಡಗಳ ಜನಸಂಖ್ಯೆಯ ಅಂಕಿ-ಅಂಶಗಳು ಬಹಿರಂಗವಾಗಲಿವೆ. ಇದರ ಆಧಾರದಲ್ಲಿ ಪ್ರಸ್ತುತ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಎಸ್ಸಿ ಸಮುದಾಯಕ್ಕೆ ಒಳಮೀಸಲಾತಿ ನೀಡಲಾಗುತ್ತದೆ. ಮೀಸಲಾತಿ ಸೌಲಭ್ಯ ವಂಚಿತ ಸಣ್ಣಪುಟ್ಟ ಎಸ್ಸಿ ಉಪ ವರ್ಗಗಳಿಗೂ ಮುಂದೆ ಮೀಸಲಾತಿ ದೊರೆಯುವ ಭರವಸೆ ಇದೆ.

ರಾಜ್ಯದಲ್ಲಿ 2011ರ ಜನಗಣತಿ ಹಾಗೂ ಇಲ್ಲಿಯವರೆಗೆ ನಡೆದಿರುವ ಸಮೀಕ್ಷೆ/ಜನಗಣತಿಯಲ್ಲಿ ಶೇ.43ರಷ್ಟು ಪರಿಶಿಷ್ಟ ಜಾತಿಯ ಸಮುದಾಯದವರಿದ್ದಾರೆ ಎಂದು ಹೇಳಲಾಗಿದೆ. ಆದರೆ, ಎಸ್ಸಿಯಲ್ಲಿ ಪ್ರಮುಖವಾಗಿ ಬರುವ ಎಡಗೈ, ಬಲಗೈ ಸಮುದಾಯದಲ್ಲಿ ಯಾವ್ಯಾವ ಒಳಪಂಗಡದ ಜನ ಬರುತ್ತಾರೆ ಎನ್ನುವ ಬಗ್ಗೆ ಸಷ್ಟತೆ ಇರಲಿಲ್ಲ. ಏಕೆಂದರೆ ಎಸ್ಸಿ ಸಮುದಾಯದಲ್ಲಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ, ಎಸ್ಸಿ ಎಂದು ನಮೂದಿಸುವ ಜನರಲ್ಲಿ ಕೆಲವರು ತಮ್ಮನ್ನು ಎಡಗೈ ಎಂದು, ಇನ್ನು ಕೆಲವರು ಬಲಗೈ ಎಂದು ಹೇಳಿಕೊಳ್ಳುತ್ತಾರೆ. ಹಾಗಾಗಿ ಇದರಲ್ಲಿ ಸ್ಪಷ್ಟ ಅಂಕಿ-ಅಂಶ ತಿಳಿಯದೆ ಉಪ ಪಂಗಡಗಳ ವೈಜ್ಞಾನಿಕ ವರ್ಗೀಕರಣಕ್ಕೆ ಅಡಚಣೆಯಾಗಿತ್ತು. ಇದರಿಂದ ನ್ಯಾಯಯುತ ಒಳಮೀಸಲಾತಿ ಕಲ್ಪಿಸುವುದು ಸಾಧ್ಯವಿರಲಿಲ್ಲ.

ಈಗ ನಡೆದಿರುವ ಸಮೀಕ್ಷೆ ಕುಟುಂಬಗಳ ಸಂಖ್ಯೆ ಹಾಗೂ ಅವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ, ಹೊಂದಿರುವ ಸೌಲಭ್ಯಗಳು ಮುಂತಾದ ಸಾಮಾನ್ಯ ಮಾಹಿತಿಗಳು ಹಾಗೂ ಆರ್ಥಿಕತೆಗೆ ಸಂಬಂಧಿಸಿದ ಮಾಹಿತಿಗಳು, ಸರ್ಕಾರಿ ಉದ್ಯೋಗ, ಖಾಸಗಿ ಉದ್ಯೋಗ, ವೃತ್ತಿ, ಭೂಮಿ ಒಡೆತನ, ಮನೆ, ಆದಾಯ, ಮಾನವ ಅಭಿವೃದ್ಧಿ, ಸರ್ಕಾರದಿಂದ ಪಡೆದಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯ ಇತ್ಯಾದಿ ವಿಷಯಗಳ ಕುರಿತು ಸಮೀಕ್ಷೆ ನಡೆಸಲಾಗಿದೆ.

ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಸಮೀಕ್ಷೆ:

ದೇಶದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಆ.1ರಂದು ನೀಡಿದ ತೀರ್ಪಿನಲ್ಲಿ ಸಂವಿಧಾನದ ಅಡಿ ರಾಜ್ಯ ಸರ್ಕಾರಗಳು ಶಿಕ್ಷಣ ಮತ್ತು ಸೇವೆಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಸಂಬಂಧ ಪರಿಶಿಷ್ಟ ಜಾತಿಗಳ ಉಪವರ್ಗೀಕರಣಕ್ಕೆ ಅವಕಾಶ ಕಲ್ಪಿಸಿತ್ತು. ಅದರಂತೆ ರಾಜ್ಯ ಸರ್ಕಾರ ನ್ಯಾ.ಡಾ.ಎಚ್.ಎನ್.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗ ರಚಿಸಿತ್ತು.

PREV
Read more Articles on

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...