ಹೊಸಕೋಟೆ: ಗ್ರಾಪಂ ಮಟ್ಟದಲ್ಲಿ ಆಯೋಜಿಸುವ ಮಹಿಳಾ ಕ್ರೀಡಾಕೂಟಗಳಲ್ಲಿ ಮಹಿಳೆಯರು ಸ್ವಯಂಪ್ರೇರಿತವಾಗಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಭಾಗವಹಿಸಬೇಕು ಎಂದು ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ತಿಳಿಸಿದರು

ಹೊಸಕೋಟೆ: ಗ್ರಾಪಂ ಮಟ್ಟದಲ್ಲಿ ಆಯೋಜಿಸುವ ಮಹಿಳಾ ಕ್ರೀಡಾಕೂಟಗಳಲ್ಲಿ ಮಹಿಳೆಯರು ಸ್ವಯಂಪ್ರೇರಿತವಾಗಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ಭಾಗವಹಿಸಬೇಕು ಎಂದು ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ತಿಳಿಸಿದರು.

ತಾಲೂಕಿನ ಕುಂಬಳಹಳ್ಳಿ ಗ್ರಾಪಂ ವತಿಯಿಂದ ಮಹಿಳಾ ಗ್ರಾಮ ಸಭೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಿಂದಲೇ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಸ್ವಯಂ ಪ್ರೇರಣೆಯಿಂದ ಬರಬೇಕು. ಆ ಮೂಲಕ ಆರ್ಥಿಕವಾಗಿ, ಔದ್ಯೋಗಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ನೆಲೆಗೆ ಬರುವ ಪ್ರಯತ್ನ ಮಾಡಬೇಕು ಎಂಬ ಶಾಸಕ ಶರತ್ ಬಚ್ಚೇಗೌಡರ ಆಶಯದಂತೆ ಗ್ರಾಪಂ ಮಟ್ಟದಲ್ಲಿ ಮಹಿಳೆಯರ ಕ್ರೀಡಾಕೂಟ ಆಯೋಜಿಸಿದ್ದೇವೆ ಎಂದು ಹೇಳಿದರು.ಒಂದೇ ವೇದಿಕೆಯಲ್ಲಿ ಎಲ್ಲಾ ಮಹಿಳೆಯರನ್ನು ಒಟ್ಟುಗೂಡಿಸುವುದೇ ಈ ಕ್ರೀಡಾಕೂಟದ ಮುಖ್ಯ ಉದ್ದೇಶ. ಮನೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಇರುವ ಮಹಿಳೆಯರಿಗೆ ತಮ್ಮ ಪ್ರತಿಭೆ ಅನಾವರಣದೊಂದಿಗೆ ಒಂದಿಷ್ಟು ಚೈತನ್ಯ ತುಂಬುವ ಉದ್ದೇಶದಿಂದ ಶಾಸಕ ಶರತ್ ಬಚ್ಚೇಗೌಡರು ಮಹಿಳೆಯರಿಗಾಗಿ ಕ್ರೀಡಾಕೂಟಗಳನ್ನು ಆಯೋಜಿಸಲು ಸೂಚಿಸಿದ್ದಾರೆ. ಇದರಿಂದ ಅವರಲ್ಲಿ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದರು.

ಪಿಡಿಒ ಚೇತನ್ ಮಾತನಾಡಿ, ಗ್ರಾಮ ಪಂಚಾಯ್ತಿಯಿಂದ ಆಯೋಜಿಸುವ ಗ್ರಾಮ ಸಭೆಗೆ ಪೂರಕವಾಗಿ ಮಹಿಳೆಯರಿಗೆ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದೇವೆ. ವಿಜೇತರಾದ ಮಹಿಳೆಯರಿಗೆ ಮಹಿಳಾ ಗ್ರಾಮ ಸಭೆಯಲ್ಲಿ ಶಾಸಕ ಶರತ್ ಬಚ್ಚೇಗೌಡರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಸಿಡಿಪಿಒ ಶಿವಮ್ಮ ಮಾತನಾಡಿ, ಮಹಿಳೆಯರು ಕೇವಲ ಕುಟುಂಬಕ್ಕೆ ಮಾತ್ರ ಸೀಮಿತರಾಗದೆ ಸಮಾಜದಲ್ಲಿ ಪ್ರಮುಖ ಭಾಗವಾಗಿ ತಮ್ಮ ಕರ್ತವ್ಯಗಳ ಪಾಲನೆ ಜೊತೆ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು. ಸಮಾಜದಲ್ಲಿ ನಡೆಯುವ ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಸ್ವಂತ ಕೌಶಲ್ಯದಿಂದ ಉದ್ಯೋಗ ಸೃಷ್ಟಿ, ಗುಡಿ ಕೈಗಾರಿಕೆಗಳಲ್ಲಿ ತೊಡಗಿಕೊಳ್ಳುವುದು, ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಮುಂದಾಗುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು ಹೀಗೆ ಹಲವಾರು ವಿಭಾಗಗಳಲ್ಲಿ ಸಕ್ರಿಯರಾಗಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯತಿ ವ್ಯಾಪ್ತಿಯ 11 ಗ್ರಾಮದ ಮಹಿಳೆಯರು ಥ್ರೋಬಾಲ್, ಮ್ಯುಸಿಕಲ್ ಚೇರ್‌, ಚಮಚದಲ್ಲಿ ನಿಂಬೆ ಓಟ, ರಂಗೋಲಿ ಸ್ಪರ್ಧೆ, ಹಗ್ಗ ಜಗ್ಗಾಟದ ಜೊತೆ ಹಲವಾರು ಕ್ರೀಡೆಗಳು ಆಯೋಜಿಸಲಾಗಿತ್ತು.

ಈ ವೇಳೆ ಎಸ್‌ಎಫ್‌ಸಿಎಸ್ ಅಧ್ಯಕ್ಷ ಸತೀಶ್, ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ, ಮುಖಂಡರಾದ ವಾಗಟ ನರೇಂದ್ರ, ಇತರರು ಹಾಜರಿದ್ದರು.

ಫೋಟೋ: 7 ಹೆಚ್‌ಎಸ್‌ಕೆ 1 ಮತ್ತು 2

1: ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಪಂ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟದಲ್ಲಿ ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಭಾಗವಹಿಸಿದ್ದರು.

2: ಹೊಸಕೋಟೆ ತಾಲೂಕಿನ ಕುಂಬಳಹಳ್ಳಿ ಗ್ರಾಪಂ ವತಿಯಿಂದ ಆಯೋಜಿಸಿದ್ದ ಮಹಿಳಾ ಕ್ರೀಡಾಕೂಟವನ್ನು ಟೀಮ್ ಎಸ್‌ಬಿಜಿ ತಂಡದ ಸಂಚಾಲಕಿ ಪ್ರತಿಭಾ ಶರತ್ ಉದ್ಘಾಟಿಸಿದರು.