ಬೆಂಗಳೂರಿನಲ್ಲಿ ಹೂಡಿಕೆ ಮಾಡಿ - ವಿಶ್ವ ಉದ್ಯಮಿಗಳಿಗೆ ಉಪಮುಖ್ಯಮಂತ್ರಿ ಆಹ್ವಾನ

Published : Jan 22, 2026, 05:08 AM IST
DK Shivakumar

ಸಾರಾಂಶ

ಬೆಂಗಳೂರು ಭವಿಷ್ಯದ ನಗರವಾಗಿದ್ದು, ಹವಾಗುಣ, ಸಂಸ್ಕೃತಿ, ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ವಿಶ್ವದ ಅನೇಕ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿ ಬೆಳೆಯುತ್ತಿವೆ. ಆದ್ದರಿಂದ ಬೆಂಗಳೂರಿನಲ್ಲಿ ಹೂಡಿಕೆ ಮಾಡುವತ್ತ ಎಲ್ಲ ಉದ್ಯಮಗಳು ಆಸಕ್ತಿ ತೋರಬೇಕು

  ಬೆಂಗಳೂರು :  ಬೆಂಗಳೂರು ಭವಿಷ್ಯದ ನಗರವಾಗಿದ್ದು, ಹವಾಗುಣ, ಸಂಸ್ಕೃತಿ, ಮಾನವ ಸಂಪನ್ಮೂಲ ಅತ್ಯುತ್ತಮವಾಗಿದೆ. ವಿಶ್ವದ ಅನೇಕ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿ ಬೆಳೆಯುತ್ತಿವೆ. ಆದ್ದರಿಂದ ಬೆಂಗಳೂರಿನಲ್ಲಿ ಹೂಡಿಕೆ ಮಾಡುವತ್ತ ಎಲ್ಲ ಉದ್ಯಮಗಳು ಆಸಕ್ತಿ ತೋರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಶ್ವದ ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ.

ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಸಮ್ಮೇಳನದಲ್ಲಿ ಬುಧವಾರ ಮಾತನಾಡಿದ ಡಿ.ಕೆ.ಶಿವಕುಮಾರ್‌, ಬೆಂಗಳೂರಲ್ಲಿ ಅತ್ಯತ್ತಮ ಮಾನವ ಸಂಪನ್ಮೂಲವಿದ್ದು, ವಿಶ್ವದ ಪ್ರತಿಷ್ಠಿತ 500 ಕಂಪನಿಗಳು ಇಲ್ಲಿವೆ. ಏರೋಸ್ಪೇಸ್‌, ಐಟಿ, ಮೆಡಿಕಲ್‌ ಸೇರಿ ಇತರ ಕ್ಷೇತ್ರಗಳಲ್ಲಿ ಬೆಂಗಳೂರು ಮಾನವ ಸಂಪನ್ಮೂಲ ಕೌಶಲ್ಯ ಹೊಂದಿದೆ. ಕರ್ನಾಟಕದಲ್ಲಿ 70 ಮೆಡಿಕಲ್‌ ಕಾಲೇಜುಗಳಿದ್ದು, ಪ್ರತಿ ವರ್ಷ 1.50 ಲಕ್ಷ ಆರೋಗ್ಯ ಕ್ಷೇತ್ರದ ಸಿಬ್ಬಂದಿ ಸಿದ್ಧರಾಗುತ್ತಿದ್ದಾರೆ. ಹೀಗಾಗಿ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಹೂಡಿಕೆ ಮೂಲಕ ಎಲ್ಲರೂ ಒಟ್ಟಾಗಿ ಸೇರಿ ಪ್ರಗತಿಯತ್ತ ಸಾಗಬಹುದಾಗಿದೆ ಎಂದರು.

ಪ್ರತಿಭಾವಂತರ ದೇಶ:

ಭಾರತ ಹೆಚ್ಚು ಪ್ರತಿಭಾವಂತರನ್ನು ಹೊಂದಿರುವ ದೇಶ. ನಮ್ಮ ದೇಶ ಮುಂದಿನ 25 ವರ್ಷಗಳಿಗೆ ತಯಾರಿ ನಡೆಸುತ್ತಿದೆ. ಅದರಲ್ಲೂ ಇಡೀ ವಿಶ್ವ ಬೆಂಗಳೂರಿನ ಮೂಲಕ ಭಾರತವನ್ನು ನೋಡುತ್ತಿದೆ. ಬೆಂಗಳೂರು ಏಷ್ಯಾದ ಐಟಿ ರಾಜಧಾನಿ. ಭಾರತದ ಜನಸಂಖ್ಯೆ ಪ್ರಮಾಣದಲ್ಲಿ ನಗರ ಪ್ರದೇಶದಲ್ಲಿಯೇ ಶೇ.40ರಷ್ಟಿದೆ. ಮುಂದಿನ 25 ವರ್ಷಗಳಲ್ಲಿ ಶೇ.50ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಅದಕ್ಕಾಗಿ ನಾವು ಈಗಿನಿಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಜಾಗತಿಕ ಐಟಿ ರಾಜಧಾನಿ ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಎಂಜಿನಿಯರಿಂಗ್‌ ವೃತ್ತಿಪರರಿದ್ದು, ಅದೇ ಬೆಂಗಳೂರಿನಲ್ಲಿ 25 ಲಕ್ಷ ವೃತ್ತಿಪರ ಎಂಜಿನಿಯರ್‌ಗಳಿದ್ದಾರೆ. ಇದು ಬೆಂಗಳೂರಿನ ಶಕ್ತಿ. ವಿಶ್ವದ ನಾಯಕರು ಮತ್ತು ಉದ್ಯಮಿಗಳು ಬೆಂಗಳೂರಿನತ್ತ ಆಕರ್ಷಿತರಾಗಿದ್ದಾರೆ. ಹೀಗಾಗಿ ಬೆಂಗಳೂರಿನ ಸಂಚಾರ ಹಾಗೂ ಮೂಲ ಸೌಕರ್ಯವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಅತ್ಯುತ್ತಮ ಸಾರಿಗೆ ವ್ಯವಸ್ಥೆ:

ಮುಂದಿನ ವರ್ಷದ ವೇಳೆಗೆ ಬೆಂಗಳೂರಿನಲ್ಲಿ ಮೆಟ್ರೋ ರೈಲು ಸಂಪರ್ಕ 153 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಬಸ್‌ ವ್ಯವಸ್ಥೆ ಅತ್ಯುತ್ತಮವಾಗಿದ್ದು, ನಿತ್ಯ 6 ಸಾವಿರ ಬಸ್‌ಗಳ ಮೂಲಕ ಸೇವೆ ನೀಡಲಾಗುತ್ತಿದೆ. ಅದರಲ್ಲಿ 2,500 ಎಲೆಕ್ಟ್ರಿಕ್‌ ಬಸ್‌ಗಳಾಗಿವೆ. ಕರ್ನಾಟಕದಲ್ಲಿ ದಕ್ಷ ಆಡಳಿತವಿದ್ದು, ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಜತೆಗೆ ಕರ್ನಾಟಕದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಉತ್ತಮ ಸಾರಿಗೆ ವ್ಯವಸ್ಥೆಯಿದ್ದು, 2045ರ ಗುರಿಯನ್ನಿಟ್ಟುಕೊಂಡು ರಾಜ್ಯದಲ್ಲಿ ಸಾರಿಗೆ ಸಂಪರ್ಕ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಒಳಮೀಸಲಾತಿ ವರದಿ ತಪ್ಪುಗಳ ತಿದ್ದುಪಡಿಗೆ ಮುಖಂಡರ ಹಕ್ಕೊತ್ತಾಯ
ವರದಕ್ಷಿಣೆ ಕಿರುಕುಳ: ಗೃಹಿಣಿ ನೇಣಿಗೆ ಶರಣು