;Resize=(412,232))
ಬೆಂಗಳೂರು : ನನ್ನ ತಮ್ಮ ಸಿ.ಜೆ.ರಾಯ್ ಆತ್ಮಹತ್ಯೆಗೆ ಕೇರಳದ ಐ.ಟಿ.ಅಧಿಕಾರಿಗಳ ಕಿರುಕುಳ ಹಾಗೂ ಒತ್ತಡವೇ ಕಾರಣ ಎಂದು ಸಹೋದರ ಸಿ.ಜೆ.ಬಾಬು ಐ.ಟಿ.ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ, ಕೇರಳದ ಐ.ಟಿ.ಅಧಿಕಾರಿಗಳು ಜ.28ರಿಂದ ನನ್ನ ತಮ್ಮ ಸಿ.ಜೆ.ರಾಯ್ ಅವರನ್ನು ವಿಚಾರಣೆ ಮಾಡುತ್ತಿದ್ದರು. ಅದರಂತೆ ಶುಕ್ರವಾರವೂ ಕಚೇರಿಗೆ ಬಂದು ವಿಚಾರಣೆ ಮಾಡಿದ್ದಾರೆ. ಐಟಿ ಇಲಾಖೆಯ ಅಡಿಷನಲ್ ಕಮಿಷನರ್ ಕೃಷ್ಣ ಪ್ರಸಾದ್ ಸಹ ಅಧಿಕಾರಿಗಳ ತಂಡದಲ್ಲಿದ್ದರು ಎಂದು ಹೇಳಿದರು.
ಈ ಐಟಿ ಅಧಿಕಾರಿಗಳು ಜ.27ರಂದು ನನ್ನ ಮನೆಗೆ ಬಂದು ನನ್ನನ್ನೂ ವಿಚಾರಣೆ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಕಾರ್ಯ ನಿಮಿತ್ತ ವಿದೇಶಕ್ಕೆ ಬಂದಿದ್ದೇನೆ. ಗುರುವಾರ ಸಿ.ಜೆ.ರಾಯ್ ನನಗೆ ಕರೆ ಮಾಡಿ ಯಾವಾಗ ಬರುವೆ ಎಂದು ಕೇಳಿದರು. ಅದಕ್ಕೆ ಶುಕ್ರವಾರ ಸಂಜೆ ಬರುವೆ ಎಂದಿದ್ದೆ. ಐ.ಟಿ.ಅಧಿಕಾರಿಗಳ ಒತ್ತಡ ಇದೆ ಎಂದು ರಾಯ್ ಹೇಳಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಸಹ ನನಗೆ ಕರೆ ಮಾಡಿ ಇಂದೂ ಐ.ಟಿ.ಅಧಿಕಾರಿಗಳು ಕಚೇರಿಗೆ ಬರುತ್ತಿರುವ ವಿಚಾರ ಹೇಳಿದರು ಬಾಬು ತಿಳಿಸಿದರು.
ಡಿಸೆಂಬರ್ ತಿಂಗಳಲ್ಲೂ ಕೇರಳದ ಐ.ಟಿ.ಅಧಿಕಾರಿಗಳು ಆದಾಯ ತೆರಿಗೆ ವಿಚಾರವಾಗಿ ಸಿ.ಜೆ.ರಾಯ್ ಕಚೇರಿಗೆ ಬಂದು ವಿಚಾರಣೆ ಮಾಡಿದ್ದರು. ನನ್ನ ತಮ್ಮ ರಾಯ್‌ಗೆ ಸಾಲ ಇರಲಿಲ್ಲ. ವೈರಿಗಳು ಇರಲಿಲ್ಲ. ಬೆದರಿಕೆಗಳು ಇರಲಿಲ್ಲ. ಕೌಟುಂಬಿಕ ಸಮಸ್ಯೆಗಳೂ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡರು ಎಂದು ಗೊತ್ತಿಲ್ಲ. ಐ.ಟಿ.ಅಧಿಕಾರಿಗಳ ಒತ್ತಡ ಇದ್ದದ್ದು ಸತ್ಯ. ಅವರ ಟಾಗೆರ್ಟ್ ಏನೆಂಬುದು ಗೊತ್ತಿಲ್ಲ. ಐಟಿ ಇಲಾಖೆ ಅಡಿಷನಲ್ ಕಮಿಷನರ್ ಕೃಷ್ಣ ಪ್ರಸಾದ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ಹೇಳಿದರು.
ದೇಶ-ವಿದೇಶಗಳಲ್ಲಿ ಪ್ರಾಜೆಕ್ಟ್:
ಸಿ.ಜೆ.ರಾಯ್ ಅವರು ಕರ್ನಾಟಕ, ಕೇರಳ, ದುಬೈ ಸೇರಿ ವಿವಿಧೆಡೆ ರಿಯಲ್ ಎಸ್ಟೇಟ್ ಪ್ರಾಜೆಕ್ಟ್‌ಗಳನ್ನು ನಡೆಸುತ್ತಿದ್ದರು. ಕೇರಳವೊಂದರಲ್ಲೇ 60 ಪ್ರಾಜೆಕ್ಟ್ ಮಾಡಿದ್ದಾರೆ. ಬಂಗಾರಪೇಟೆಯಲ್ಲಿ ಗಾಲ್ಫ್ ಕೋರ್ಟ್ ನಿರ್ಮಾಣ ಸೇರಿ ವಿವಿಧೆಡೆ ಜಂಟಿ ಮಾಲೀಕತ್ವದಲ್ಲಿ ಹಲವು ಪ್ರಾಜೆಕ್ಟ್‌ಗಳನ್ನು ಮಾಡುತ್ತಿದ್ದರು. ಎರಡು ವರ್ಷಗಳಲ್ಲಿ ನನಗೆ 700-800 ಕೋಟಿ ರು. ಆದಾಯ ಬರಲಿದೆ ಎಂದು ನನ್ನೊಂದಿಗೆ ಹೇಳಿಕೊಂಡಿದ್ದರು ಎಂದು ತಿಳಿಸಿದರು.
ಸಿ.ಜೆ.ರಾಯ್ ಆತ್ಮಹತ್ಯೆಗೆ ಕಾರಣ ಗೊತ್ತಿಲ್ಲ. ಅವರ ಬಳಿ ಕಳೆದ 20 ವರ್ಷಗಳಿಂದ ಪಿಸ್ತೂಲ್ ಇತ್ತು. 2016ರಲ್ಲಿ ಬೆಂಗಳೂರು ಐ.ಟಿ.ಅಧಿಕಾರಿಗಳು ಕಡೆಯದಾಗಿ ಸಿ.ಜೆ.ರಾಯ್ ಅವರನ್ನು ವಿಚಾರಣೆ ಮಾಡಿದ್ದರು. ಆಗ ಯಾವುದೇ ಸಮಸ್ಯೆಯಾಗಲಿಲ್ಲ. ಇದೀಗ ಕೇರಳ ಐ.ಟಿ.ಅಧಿಕಾರಿಗಳು ಬಂದಾಗ ಬಳಿಕ ಸಮಸ್ಯೆಯಾಗಿದೆ ಎಂದು ಹೇಳಿದರು.
ಕುಟುಂಬ ದುಬೈನಲ್ಲಿ ನೆಲೆ:
ನಾವು ಮೂರು ಜನ ಅಣ್ಣ ತಮ್ಮಂದಿರು. ಸಿ.ಜೆ.ರಾಯ್ ಕೊನೆಯವರು. ಸಿ.ಜೆ.ರಾಯ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಕಳೆದ 15 ವರ್ಷಗಳಿಂದ ಕುಟುಂಬ ದುಬೈನಲ್ಲಿ ನೆಲೆಸಿದೆ. ರಾಯ್ ಆತ್ಮಹತ್ಯೆಗೆ ಬಗ್ಗೆ ಪೊಲೀಸರು ತನಿಖೆ ನಡೆಸಿ, ಸತ್ಯಾಂಶ ಹೊರ ತೆಗೆಯಬೇಕು ಎಂದು ಸಿ.ಜೆ.ಬಾಬು ಆಗ್ರಹಿಸಿದರು.
ಸಿ.ಜೆ.ರಾಯ್‌ಗೆ ಸಮಾಜ ಸೇವೆ ಮಾಡುವ ತುಡಿತವಿತ್ತು. 301 ವಿದ್ಯಾರ್ಥಿಗಳಿಗೆ ಗರಿಷ್ಠ 50 ಸಾವಿರ ರು.ನಂತೆ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಿಸಿದ್ದರು. ಜುಲೈ ತಿಂಗಳಿಂದ ಅರ್ಜಿ ಹಾಕುವಂತೆಯೂ ಹೇಳಿದ್ದರು. ರಾಯ್ ಎಲ್ಲ ಪಕ್ಷದ ರಾಜಕಾರಣಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ದೇಶದಲ್ಲಿ ಶೇ.6.68ರಷ್ಟು ಮಂದಿ ಆದಾಯ ತೆರಿಗೆ ಪಾವತಿಸುತ್ತಾರೆ. ಈ ಪೈಕಿ ಶೇ.4ರಷ್ಟು ಉದ್ಯೋಗಿಗಳು, ಶೇ.2.68ರಷ್ಟು ಉದ್ಯಮಿಗಳು ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಐ.ಟಿ. ಇಲಾಖೆ ಅಧಿಕಾರಿಗಳು ಉದ್ಯಮಿಗಳಿಗೆ ಹೀಗೆ ತೊಂದರೆ ಕೊಟ್ಟರೆ ಸಿ.ಜೆ.ರಾಯ್ ರೀತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ
-ಸಿ.ಜೆ.ಬಾಬು, ಉದ್ಯಮಿ ಸಿ.ಜೆ.ರಾಯ್ ಸಹೋದರ