ಶ್ರೀರಂಗಪಟ್ಟಣ : ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೃಷ್ಣರಾಜಸಾಗರ ಜಲಾಶಯ (ಕನ್ನಂಬಾಡಿ)ಕ್ಕೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲಿ ಡಾ। ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಲು ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದರೂ ಈ ವಿಷಯವನ್ನು ಹೇಳಲು ಯಾರಿಗೂ ಧೈರ್ಯವಿಲ್ಲ. ಕೆಆರ್‌ಎಸ್ ಗೇಟ್ ಹೆಬ್ಬಾಗಿಲಿನಲ್ಲಿ ಈಗಲೂ ಟಿಪ್ಪು ಸುಲ್ತಾನ್ ಅವರು ಅಣೆಕಟ್ಟೆಗೆ ಅಡಿಗಲ್ಲು ಹಾಕಿರುವುದನ್ನು ಕಾಣಬಹುದು ಎಂದು ಹೇಳಿದರು. ಮೈಸೂರು ರಾಜರ್ಷಿ ನಾಲ್ವಡಿ ಒಡೆಯರ್ ಅವರ ಪುಣ್ಯ ತಿಥಿಯ ದಿನವೇ ಸಚಿವರು ಈ ಹೇಳಿಕೆ ನೀಡಿದ್ದಾರೆ.
ಚರಿತ್ರೆ ಗೊತ್ತಿಲ್ಲದವರು ಚರಿತ್ರೆ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಮಸೀದಿ ಇದ್ದು, ಪಕ್ಕದಲ್ಲಿ ದೇವಸ್ಥಾನವೂ ಇದೆ. ಒಂದೆಡೆ ಅಲ್ಲಾ ಹು ಅಕ್ಬರ್ ಅಂತಾರೆ, ಮತ್ತೊಂದೆಡೆ ಗಂಟೆ ಢಣ್, ಢಣ್ ಅಂತ ಹೊಡೀತಾರೆ. ಎರಡರಲ್ಲೂ ಟಿಪ್ಪು ಸುಲ್ತಾನ್ ಸಮಚಿತ್ತರಾಗಿದ್ದವರು ಎಂದರು.
ಸಮಾಜಕ್ಕೆ ಕಂಟಕವಾಗಿದ್ದ ದೇವದಾಸಿ ಪದ್ಧತಿಯನ್ನು ಟಿಪ್ಪು ರದ್ದು ಮಾಡಿದ್ದರು. ಜೊತೆಗೆ ಅವರ ಕಾಲದಲ್ಲಿ ಒಂದೇ ಒಂದು ಇಂಚು ಭೂಮಿಯನ್ನು ಉಳ್ಳವರಿಗೆ ಕೊಟ್ಟಿರಲಿಲ್ಲ. ದೇಶಕ್ಕೆ ರೇಷ್ಮೆ (ಸಿರಿಕಲ್ಚರ್) ತಂದರು. ರಣರಂಗದಲ್ಲಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸ್ವತಂತ್ರ ಸೇನಾನಿ. ಇದನ್ನು ಅರ್ಥ ಮಾಡಿಕೊಳ್ಳದೆ ಸ್ವತಂತ್ರ್ಯ ಚಳವಳಿಗಾರನ ವಿರುದ್ಧ ಮಾತನಾಡುತ್ತಾರೆ ಎಂದು ವಿರೋಧಿಗಳಿಗೆ ಟಾಂಗ್ ನೀಡಿದರು.