ಜೈಪುರ ಸಾಹಿತ್ಯೋತ್ಸವ 2026ರಲ್ಲಿ ಬಾನು ಮುಷ್ತಾಕ್, ಸುಧಾಮೂರ್ತಿ

Published : Nov 21, 2025, 12:13 PM IST
Banu Mushtaq

ಸಾರಾಂಶ

ಜಗತ್ತಿನ ಅತ್ಯಂತ ದೊಡ್ಡ ಹಾಗೂ ವೈವಿಧ್ಯಮಯ ಸಾಹಿತ್ಯ ಸಂಭ್ರಮವೆಂದು ಹೆಸರು ಮಾಡಿರುವ ಜೈಪುರ ಸಾಹಿತ್ಯೋತ್ಸವ (JLF) ತನ್ನ 19ನೇ ಆವೃತ್ತಿಗೆ ಬರಹಗಾರರ ಅಂತಿಮ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ.

ಬೆಂಗಳೂರು: ಜಗತ್ತಿನ ಅತ್ಯಂತ ದೊಡ್ಡ ಹಾಗೂ ವೈವಿಧ್ಯಮಯ ಸಾಹಿತ್ಯ ಸಂಭ್ರಮವೆಂದು ಹೆಸರು ಮಾಡಿರುವ ಜೈಪುರ ಸಾಹಿತ್ಯೋತ್ಸವ (JLF) ತನ್ನ 19ನೇ ಆವೃತ್ತಿಗೆ ಬರಹಗಾರರ ಅಂತಿಮ ಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. 2026ರ ಜನವರಿ 15ರಿಂದ 19ರವರೆಗೆ ಜೈಪುರದ ಹೋಟೆಲ್ ಕ್ಲಾರ್ಕ್ಸ್ ಅಮೇರ್‌ನಲ್ಲಿ ನಡೆಯಲಿರುವ ಈ ಉತ್ಸವದಲ್ಲಿ ಭಾರತ ಸೇರಿ ವಿಶ್ವದ ನಾನಾ ಭಾಗಗಳ ಪ್ರಮುಖ ಲೇಖಕರು ಭಾಗವಹಿಸಲಿದ್ದಾರೆ.

ಅನೇಕ ಕ್ಷೇತ್ರದ ಮುಖಂಡರು ಭಾಗಿ

ನೊಬೆಲ್, ಬುಕರ್, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರು, ಇತಿಹಾಸಕಾರರು, ವಿಜ್ಞಾನಿಗಳು, ಕವಿಗಳು, ಸಂಸ್ಕೃತಿ ತಜ್ಞರು, ರಾಜಕೀಯ ಮುಖಂಡರು, ಪತ್ರಕರ್ತರು, ಕ್ರೀಡಾ ತಾರೆಗಳು, ಆಹಾರ ತಜ್ಞರು, ಹಾಸ್ಯನಟರು ಸೇರಿ ಅನೇಕ ಕ್ಷೇತ್ರಗಳ ಗಣ್ಯರು ಒಂದೇ ವೇದಿಕೆಯಲ್ಲಿ ಸೇರಲಿದ್ದಾರೆ. ಉತ್ಸವದ ಸಹ-ನಿರ್ದೇಶಕರಾದ ನಮಿತಾ ಗೋಖಲೆ ಮತ್ತು ವಿಲಿಯಂ ಡಾಲ್ರಿಂಪಲ್ ಅವರೊಂದಿಗೆ ಅಮೀಶ್, ಅನುರಾಧಾ ರಾಯ್, ಆನ್ ಆಪಲ್‌ಬಾಮ್, ಅಲಿಸ್ ಓಸ್ವಾಲ್ಡ್, ಡೈಸಿ ರಾಕ್‌ವೆಲ್, ಜೀತ್ ತಾಯಿಲ್, ಕಿರಣ್ ದೇಸಾಯಿ, ರಿಚರ್ಡ್ ಫ್ಲಾನಗನ್, ತಮೀಮ್ ಅಲ್-ಬರ್ಗೂಟಿ ಸೇರಿ ಅನೇಕ ಜಾಗತಿಕ ಬರಹಗಾರರು ಭಾಗವಹಿಸಲಿದ್ದಾರೆ.

ಅರ್ಥಶಾಸ್ತ್ರಜ್ಞರಾದ ಅರವಿಂದ್ ಸುಬ್ರಹ್ಮಣಿಯನ್ ಮತ್ತು ಎಸ್ಟರ್ ಡುಫ್ಲೋ, ಚೆಸ್ ಪಟು ವಿಶ್ವನಾಥನ್ ಆನಂದ್ ಸೇರಿ 300ಕ್ಕೂ ಹೆಚ್ಚು ಗಣ್ಯರು ಈ ಸಲದ ಜೈಪುರ ಸಾಹಿತ್ಯೋತ್ಸವದಲ್ಲಿ ಇರುತ್ತಾರೆ. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಗೋಷ್ಠಿಯೂ ಇರಲಿದೆ.

ಜೈಪುರ ಲಿಟ್‌ಫೆಸ್ಟಿನ ವಿಶೇಷ ಆಕರ್ಷಣೆ ಸುಧಾ ಮೂರ್ತಿ ಅವರು ಈ ವರ್ಷವೂ ಭಾಗವಹಿಸುತ್ತಿದ್ದಾರೆ. ಬುಕರ್ ಪುರಸ್ಕೃತೆ ಬಾನು ಮುಷ್ತಾಕ್ ಅವರ ಜತೆಗೆ ಮಾತುಕತೆಯೂ ನಿಗದಿಯಾಗಿದೆ.

ಕಥಾ ಸಂಸ್ಕೃತಿಗೆ ಹೊಸ ಬಣ್ಣ:

ಜೈಪುರ ಸಾಹಿತ್ಯೋತ್ಸವದಲ್ಲಿ ಪ್ರತಿಯೊಂದು ಧ್ವನಿಯೂ ನಮ್ಮ ಕಥಾಸಂಸ್ಕೃತಿಗೆ ಹೊಸ ಬಣ್ಣ ನೀಡುತ್ತದೆ ಎಂದು ನಮಿತಾ ಗೋಖಲೆ ಪ್ರತಿಕ್ರಿಯಿಸಿದ್ದಾರೆ. ಈ ಆವೃತ್ತಿ ಜಾಗತಿಕ ಸಂವಾದ ಮತ್ತು ಸೃಜನಶೀಲತೆಯ ಮತ್ತೊಂದು ಮಹತ್ವದ ಘಟ್ಟವಾಗಲಿದೆ ಎಂದು ಟೀಂವರ್ಕ್ ಆರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೆ.ರಾಯ್ ಹೇಳಿದ್ದಾರೆ.

ಸಾಹಿತ್ಯ ಚರ್ಚೆಗಳ ಜೊತೆಗೆ ಜೈಪುರ ಮ್ಯೂಸಿಕ್ ಸ್ಟೇಜ್, ಹೆರಿಟೇಜ್ ಈವ್ನಿಂಗ್ಸ್‌ ಹಾಗೂ ಜೈಪುರ ಬುಕ್‌ಮಾರ್ಕ್ (JBM) ಕಾರ್ಯಕ್ರಮಗಳೂ ನಡೆಯಲಿವೆ. ಕಥೆಗಳ ಶಕ್ತಿಯನ್ನು ಸಂಭ್ರಮಿಸುವ ಈ ಉತ್ಸವ ಮತ್ತೊಮ್ಮೆ ಜಾಗತಿಕ ಗಮನ ಸೆಳೆಯಲು ಸಜ್ಜಾಗಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕಾಸರಗೋಡು ಕನ್ನಡಿಗರ ಮೇಲೆ ನಾವು ಮಲಯಾಳಂ ಹೇರುತ್ತಿಲ್ಲ : ಕೇರಳ ಸಿಎಂ
2025ರಲ್ಲಿ ಬಿಯರ್‌ ಮಾರಾಟ ಭಾರೀ ಕುಸಿತ