ಬೆಂಗಳೂರು : ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತಕ್ಕೆ 11 ಮಂದಿ ಅಮಾಯಕರ ಸಾವು ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಕ್ಲೀನ್ ಚಿಟ್ ಹಾಗೂ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ಶಾಸಕರು ಸೋಮವಾರ ವಿಧಾನಸೌಧದ ಆವರಣದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ, ಅಧಿವೇಶನದ ಮೊದಲ ದಿನವೇ ಬಿಜೆಪಿ-ಜೆಡಿಎಸ್ ಶಾಸಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಸದನದೊಳಗೂ ನಾವು ಹೋರಾಡಲಿದ್ದೇವೆ. ಆರ್‌ಸಿಬಿ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತದ ಪ್ರಕರಣದ ಜವಾಬ್ದಾರಿಯನ್ನು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹೊರಬೇಕು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಅಮಾಯಕ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡಿದ್ದಾರೆ ಕಿಡಿಕಾರಿದರು.
ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಹಿನ್ನೆಲೆಯಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ, ಉತ್ತರ ಕರ್ನಾಟಕದ ನೀರಾವರಿ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ, ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದರೂ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುತ್ತಿಲ್ಲ. ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇವೆ. ಆದರೂ ನೇಮಕಾತಿ ಮಾಡುತ್ತಿಲ್ಲ. ಇನ್ನೂ ಹಲವು ವಿಚಾರಗಳ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮಾಡಲಿದ್ದೇವೆ. ಇಂದಿನ ಪ್ರತಿಭಟನೆ ಕೇವಲ ಸಾಂಕೇತಿಕ ಎಂದು ಹೇಳಿದರು.
ಈ ಸರ್ಕಾರ 60% ಕಮಿಷನ್‌ಗೆ ಬ್ರ್ಯಾಂಡ್:
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರ 60 ಪರ್ಸೆಟ್ ಕಮಿಷನ್‌ಗೆ ಬ್ರ್ಯಾಂಡ್ ಆಗಿದೆ. ಕಾಟಾಚಾರಕ್ಕೆ 9 ದಿನ ಅಧಿವೇಶನ ನಡೆಸಲಾಗುತ್ತಿದೆ. ಕನಿಷ್ಠ 20 ದಿನ ಅಧಿವೇಶನ ನಡೆಸಬೇಕಿತ್ತು. ಜೆಡಿಎಸ್-ಬಿಜೆಪಿ ನಾಯಕರು ಸಭೆ ಮಾಡಿದ್ದು, ಸರ್ಕಾರದ ವಿರುದ್ಧ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದರು.
ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಕೊಲೆ:
ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಇವರ ಕುಟುಂಬದವರು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು. ಕಾಲ್ತುಳಿತ ದುರಂತಕ್ಕೆ 11 ಮಂದಿ ಅಮಾಯಕರ ಸಾವಾಯಿತು. ಇದು ಸರ್ಕಾರ ಪ್ರಾಯೋಜಿತ ಕೊಲೆ. ಕಾಲ್ತುಳಿತ ಸಂಭವಿಸಿದರೂ ಮುಖ್ಯಮಂತ್ರಿಗಳು ದೋಸೆ ತಿನ್ನಲು ಹೋಗಿದ್ದರು. ಉಪಮುಖ್ಯಮಂತ್ರಿ ಆರ್‌ಸಿಬಿ ಕಪ್‌ಗೆ ಮುತ್ತಿಕ್ಕುತ್ತಿದ್ದರು. ವಿಧಾನಸೌಧದ ಎದುರು ಕಾನೂನು ಸುವ್ಯವಸ್ಥೆ ಕಾಪಾಡಲಾಗದವರು ರಾಜ್ಯದಲ್ಲಿ ಕಾನೂನು ಕಾಪಾಡುತ್ತಾರಾ ಎಂದು ಪ್ರಶ್ನಿಸಿದರು.
ಆರ್‌ಸಿಬಿದು ಕಪ್, ಸರ್ಕಾರದ್ದು ತಪ್ಪು:
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರವು ಆರ್‌ಸಿಬಿ ವಿಜಯೋತ್ಸವ ಕ್ರೆಡಿಟ್ ತೆಗೆದುಕೊಳ್ಳಲು ಮುಂದಾಗಿದ್ದೇ ಕಾಲ್ತುಳಿತ ದುರಂತಕ್ಕೆ ಕಾರಣವಾಯಿತು. ಆರ್‌ಸಿಬಿದು ಕಪ್ ಆದರೆ, ಸರ್ಕಾರದ್ದು ತಪ್ಪು. ಕಾಲ್ತುಳಿತಕ್ಕೆ ಬಲಿಯಾದ 11 ಮಂದಿ ಅಮಾಯಕರ ಸಾವಿಗೆ ಸರ್ಕಾರ ನ್ಯಾಯ ಕೊಡಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್, ಶಾಸಕರಾದ ಆರಗ ಜ್ಞಾನೇಂದ್ರ, ಸುನೀಲ್ ಕುಮಾರ್, ಎಸ್.ಸುರೇಶ್ ಕುಮಾರ್ ಸೇರಿದಂತೆ ಬಿಜೆಪಿ-ಜೆಡಿಎಸ್‌ನ ಹಲವು ಶಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯದ ಹೆಸರಿನಲ್ಲಿ ದಲಿತರು, ರೈತರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸಬೇಕು. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ. ಇದು 60 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿವೆ. ಸಾವು-ನೋವುಗಳಾಗುತ್ತಿವೆ. ಈ ಎಲ್ಲಾ ವಿಚಾರಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇವೆ ಎಂದು ಅವರು ಹೇಳಿದರು