;Resize=(412,232))
ಬೆಂಗಳೂರು : ಕನ್ನಡಿಗರ ಭಾವನೆ ಮತ್ತು ಅಸ್ಮಿತೆಯ ಹೆಗ್ಗುರುತಾಗಿರುವ ಹಳದಿ-ಕೆಂಪು ಕನ್ನಡ ಬಾವುಟಕ್ಕೆ ಅಧಿಕೃತ ‘ನಾಡಧ್ವಜ’ ಸ್ಥಾನಮಾನ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಸಮಗ್ರ ಚರ್ಚೆ ನಡೆಸಿ ಕಾನೂನಾತ್ಮಕ ಅಡಿಪಾಯ ಹಾಕುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ 71ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನಡೆಸಿ, ಭುವನೇಶ್ವರಿ ದೇವಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರಧ್ವಜದ ಜತೆಗೇ ಕನ್ನಡ ಬಾವುಟವನ್ನೂ ಹಾರಿಸಲಾಗಿದೆ. ಕನ್ನಡ ಬಾವುಟಕ್ಕೆ ಅಧಿಕೃತ ಮಾನ್ಯತೆ ನೀಡಿ, ರಾಷ್ಟ್ರಧ್ವಜದ ಪಕ್ಕದಲ್ಲೇ ಗೌರವಯುತವಾಗಿ ಹಾರಿಸಲು ಅಗತ್ಯವಿರುವ ಕಾನೂನು ಹಾಗೂ ನೀತಿ-ನಿಯಮಗಳ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಈ ಬಗ್ಗೆ ಶಾಸಕಾಂಗದಲ್ಲಿ ವಿಸ್ತೃತ ಸಾರ್ವಜನಿಕ ಚರ್ಚೆಗೆ ಅವಕಾಶ ಕಲ್ಪಿಸಿ, ಕೇಂದ್ರ ಸರ್ಕಾರಕ್ಕೂ ಅಧಿಕೃತ ನಿರ್ಣಯ ಕಳುಹಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಕನ್ನಡಿಗರು ಹೃದಯಪೂರ್ವಕವಾಗಿ ಒಪ್ಪಿಕೊಂಡಿರುವ ಪ್ರಸ್ತುತ ಹಳದಿ ಮತ್ತು ಕೆಂಪು ಬಣ್ಣಗಳೇ ಧ್ವಜದಲ್ಲಿ ಮುಂದುವರಿಯಲಿವೆ. ಯಾವುದೇ ಹೆಚ್ಚುವರಿ ಬಣ್ಣ ಸೇರಿಸುವ ಅಥವಾ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದರು.
ಕನ್ನಡ ರಾಜ್ಯೋತ್ಸವದ 71ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷ ನಿರಂತರವಾಗಿ ಭಾಷಾ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳು, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳ ಮೇಲೂ ಕನ್ನಡ ಬಾವುಟ ಹಾರಿಸುವುದನ್ನು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಸರ್ಕಾರಿ ಆದೇಶ ತರಲಾಗುವುದು ಎಂದು ತಿಳಿಸಿದರು.
6 ರಿಂದ 12ನೇ ತರಗತಿವರೆಗಿನ ಸರ್ಕಾರಿ ಶಾಲಾ ಮಕ್ಕಳಿಗೆ ಕೃತಕ ಬುದ್ಧಿಮತ್ತೆ (ಎಐ) ಮತ್ತು ಕೌಶಲ್ಯಾಧಾರಿತ ತರಬೇತಿ. ರಾಜ್ಯದಲ್ಲಿ ಈಗಾಗಲೇ 25,498 ದ್ವಿಭಾಷಾ ಶಾಲೆಗಳು ಹಾಗೂ 250 ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಕಾರ್ಯಾರಂಭ ಮಾಡಲಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ಪಂಚಾಯತಿ ಮತ್ತು ವಾರ್ಡ್ ಮಟ್ಟದಲ್ಲಿ 16ರಿಂದ 35 ವರ್ಷದೊಳಗಿನ ಯುವಕರಲ್ಲಿ ನಾಯಕತ್ವ, ಕ್ರೀಡೆ ಹಾಗೂ ಕಲೆ ಪ್ರೋತ್ಸಾಹಿಸಲು 10 ಸಾವಿರ ಯುವ ಸಂಘಗಳ ಸ್ಥಾಪನೆ. ಪ್ರತಿ ಸಂಘಕ್ಕೆ ವಾರ್ಷಿಕ 10 ಲಕ್ಷ ಅನುದಾನ ನೀಡಲಾಗುವುದು. ಕ್ರೀಡಾಪಟುಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಶೇ.2ರಷ್ಟು ಹಾಗೂ ಪೊಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಶೇ.3ರಷ್ಟು ನೇರ ಮೀಸಲಾತಿ ನೀಡಲಾಗುತ್ತಿದೆ ಎಂದರು.
ಬರದ ಹಿನ್ನೆಲೆಯಲ್ಲಿ ಹಾಲಿನ ಖರೀದಿ ದರವನ್ನು ಲೀಟರ್ಗೆ 8 ರು. ಹೆಚ್ಚಿಸಲಾಗಿದ್ದು, ಇದರಲ್ಲಿ 7 ರು. ನೇರವಾಗಿ ರೈತರಿಗೆ ತಲುಪುತ್ತಿದೆ. 3 ಎಕರೆವರೆಗಿನ ಬಡ ರೈತರ ಜಮೀನು ಉಳುಮೆಗೆ ‘ನೇಗಿಲ ಯೋಗಿ’ ಯೋಜನೆ ಹಾಗೂ 2,825 ಕೋಟಿ ರು.ವೆಚ್ಚದಲ್ಲಿ ಹನಿ ನೀರಾವರಿ ಯೋಜನೆ ವಿಸ್ತರಣೆ ಮಾಡಲಾಗಿದೆ. 1995ರ ನಂತರ ಪ್ರಾರಂಭವಾದ ಕನ್ನಡ ಮಾಧ್ಯಮ ಅನುದಾನಿತ ಶಾಲೆಗಳಿಗೆ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಸೂಕ್ತ ಅನುದಾನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಮಧುಬಂಗಾರಪ್ಪ, ವಿಧಾನ ಪರಿಷತ್ತು ಸದಸ್ಯರಾದ ಗೋವಿಂದರಾಜು, ಎ.ಪಿ.ರಂಗನಾಥ, ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿಮಹೇಶ್, ರಾಜ್ಯ ಪೊಲೀಸ್ ಮುಖ್ಯಸ್ಥ ಎಂ.ಎ.ಸಲೀಂ, ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಸೇರಿ ಇತರರಿದ್ದರು. ==
ಗಮನ ಸೆಳೆದ ಪಥಸಂಚಲನ
ಕಂಠೀರವ ಕ್ರೀಡಾಂಗಣದ ಅಕ್ಷರಶಃ ಕನ್ನಡಮಯವಾಗಿತ್ತು. ಎಲ್ಲೆಲ್ಲೂ ಕನ್ನಡಧ್ವಜದ ಹಾರಾಟ, ಹಳದಿ, ಕೆಂಪು ಬಣ್ಣದ ವಸ್ತ್ರಧರಿಸಿದ್ದ ಜನರು, ಧ್ವನಿವರ್ಧಕದಲ್ಲಿ ಕನ್ನಡ ನಿತ್ಯೋತ್ಸವದ ಹಾಡುಗಳು ಮನಸ್ಸಿಗೆ ಮುದನೀಡಿದವು. ಜೊತೆಗೆ ಭೂಸೇನೆ, ನೌಕಾಪಡೆ, ವಾಯುಪಡೆ ಸೈನಿಕರ ಮಾದರಿಯಲ್ಲಿ ಸಮವಸ್ತ್ರ ಧರಿಸಿದ್ದ ವಿದ್ಯಾರ್ಥಿಗಳ ಪಥಸಂಚಲನ ಗಮನ ಸೆಳೆಯಿತು. ಅದೇ ರೀತಿಯಲ್ಲಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಳಿಸಿತು.
- ಸಂಪುಟ ಅನುಮೋದನೆ ಬಳಿಕ ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ, ಕಾಯ್ದೆ ಜಾರಿ
- ರಾಷ್ಟ್ರಧ್ವಜದ ಪಕ್ಕದಲ್ಲೇ ಹಾರಿಸಲು ಅಗತ್ಯ ಕ್ರಮ । ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಕನ್ನಡ ಧ್ವಜ ಕಡ್ಡಾಯ: ಡಿಕೆ
ಹಳದಿ- ಕೆಂಪು ಬಾವುಟಕ್ಕೆ ಅಧಿಕೃತ ನಾಡಧ್ವಜ ಸ್ಥಾನಮಾನಕ್ಕೆ ನಿರ್ಧಾರ
ಈ ಬಗ್ಗೆ ಸಂಪುಟದಲ್ಲಿ ಅನುಮೋದನೆ ಬಳಿಕ ಅಧಿವೇಶನದಲ್ಲಿ ಅಗತ್ಯ ಚರ್ಚೆ
ಅಲ್ಲಿ ಅಗತ್ಯ ಕಾಯ್ದೆ ರೂಪಿಸಿ ಅನುಮೋದನೆ ಪಡೆಯಲು ಕೇಂದ್ರಕ್ಕೆ ರವಾನೆ
ಬಳಿಕ ಎಲ್ಲಾ ಸರ್ಕಾರಿ, ಖಾಸಗಿ ಕಚೇರೀಲಿ ಕನ್ನಡ ಧ್ವಜ ಹಾರಿಸುವುದು ಕಡ್ಡಾಯ
ಈ ಕುರಿತು ಶೀಘ್ರವೇ ಅಧಿಸೂಚನೆ ಜಾರಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಧ್ವಜಕ್ಕೆ ಬಣ್ಣ ಸೇರ್ಪಡೆ ಬದಲಾವಣೆ ಪ್ರಶ್ನೆ ಇಲ್ಲ
ಕನ್ನಡಿಗರು ಹೃದಯಪೂರ್ವಕವಾಗಿ ಒಪ್ಪಿಕೊಂಡಿರುವ ಪ್ರಸ್ತುತ ಹಳದಿ ಮತ್ತು ಕೆಂಪು ಬಣ್ಣಗಳೇ ಧ್ವಜದಲ್ಲಿ ಮುಂದುವರಿಯಲಿವೆ. ಯಾವುದೇ ಹೆಚ್ಚುವರಿ ಬಣ್ಣ ಸೇರಿಸುವ ಅಥವಾ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ.
ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ