;Resize=(412,232))
ಸಂಪತ್ ತರೀಕೆರೆ
ಬೆಂಗಳೂರು : ಕನ್ನಡಿಗರ ಶಕ್ತಿ ಕೇಂದ್ರ ಬೆಂಗಳೂರು ವಲಸಿಗರ ಆರ್ಭಟಕ್ಕೆ ನಲುಗತೊಡಗಿದೆಯೇ?
ಹೌದು, ಎನ್ನುತ್ತವೆ ಅಂಕಿ-ಅಂಶ. ಕೇವಲ ಒಂದೂವರೆ ದಶಕದ ಹಿಂದೆ ಬೆಂಗಳೂರಿನಲ್ಲಿ 16 ಲಕ್ಷ ಇದ್ದ ವಲಸಿಗರ ಸಂಖ್ಯೆ ಈಗ ಇದೀಗ 55 ಲಕ್ಷ ದಾಟಿದ್ದು, ವಲಸಾ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ತನ್ನ ರಾಜಧಾನಿಯಲ್ಲೇ ಕನ್ನಡಿಗ ಅಲ್ಪಸಂಖ್ಯಾತನಾಗುವ ಭೀತಿ ನಿರ್ಮಾಣವಾಗಿದೆ.
ಇದರ ಪರಿಣಾಮ ವಲಸೆ ನೀತಿ ಜಾರಿಗೆ ತಂದು ಕನ್ನಡಿಗರನ್ನು ರಕ್ಷಿಸಬೇಕು ಎಂಬ ಹಕ್ಕೊತ್ತಾಯ ಕನ್ನಡ ಸಂಘಟನೆಗಳು ಹಾಗೂ ಕನ್ನಡ ಬೌದ್ಧಿಕ ವಲಯದಿಂದ ಕೇಳಿಬಂದಿದೆ.
ನಿಜಕ್ಕೂ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕುಸಿದಿದೆಯೇ ಎಂಬ ಪ್ರಶ್ನೆಗೆ ಉತ್ತರ- ಕನ್ನಡಿಗರ ಸಂಖ್ಯೆ ಕುಸಿದಿಲ್ಲ. ಬದಲಾಗಿ, ವಲಸಾ ಸ್ಫೋಟ ಸಂಭವಿಸಿದೆ. ಕನ್ನಡಿಗರ ಸಂಖ್ಯೆ ಉತ್ತಮವಾಗಿದ್ದರೂ ಮಿತಿ ಹಾಗೂ ನಿಯಂತ್ರಣವಿಲ್ಲದ ವಲಸಾ ಸ್ಫೋಟವು ನಗರದ ಮೂಲ ಕನ್ನಡಿಗ ಬಡಾವಣೆಗಳನ್ನು ವಲಸಿಗರ ವಸಾಹತುಗಳಾಗಿ ಬದಲಾಗುವಂತೆ ಮಾಡಿದೆ.
ಇದನ್ನು ಅಂಕಿ-ಅಂಶಗಳೂ ಖಚಿತಪಡಿಸುತ್ತಿವೆ. 2011ರ ಜನಗಣತಿ ಪ್ರಕಾರ, ಬೆಂಗಳೂರು ನಗರ ಜಿಲ್ಲೆಯ ಒಟ್ಟು 96.2 ಲಕ್ಷ ಜನಸಂಖ್ಯೆಯಲ್ಲಿ ಕೇವಲ 16 ಲಕ್ಷ ಮಾತ್ರ ಬೇರೆ ರಾಜ್ಯಗಳಿಂದ ವಲಸೆ ಬಂದವರಿದ್ದರು. ಕರುನಾಡಿನ ಬೇರೆ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ನೆಲೆಸಿದವರು 28.3 ಲಕ್ಷದಷ್ಟು ಮಂದಿ ಇದ್ದರು.
ಆದರೆ, ಕಳೆದ ಒಂದೂವರೆ ದಶಕದಲ್ಲಿ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಪ್ರಸ್ತುತ ನಗರದ ಒಟ್ಟು ಜನಸಂಖ್ಯೆ 1.40 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಉತ್ತರ, ಈಶಾನ್ಯ ಮತ್ತು ದಕ್ಷಿಣ ಭಾರತದಿಂದ ಬಂದವರ ಸಂಖ್ಯೆ 45ರಿಂದ 55 ಲಕ್ಷದವರೆಗೆ (ಸುಮಾರು ಶೇ.40ರಿಂದ 52) ಇರಬಹುದು ಎಂದು ನಗರ ಯೋಜನಾ ತಜ್ಞರು ಮತ್ತು ಜನಸಂಖ್ಯಾ ಅಧ್ಯಯನಗಳು ಅಂದಾಜಿಸಿವೆ.
ಇದನ್ನು ವಲಸೆ ಸ್ಫೋಟ ಎಂದೇ ಹೇಳಬಹುದು. ಪರಿಸ್ಥಿತಿ ಹೀಗೆ ಮುಂದುವರೆದರೆ 2031ಕ್ಕೆ ವಲಸಿಗರ ಸಂಖ್ಯೆ ಶೇ.60ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದ್ದು, ಸ್ಥಳೀಯ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಸಾಧ್ಯತೆ ಇದೆ ಎಂದು ಯುವ ಕರ್ನಾಟಕ ವೇದಿಕೆ ರಾಜ್ಯಾಧ್ಯಕ್ಷ ರೂಪೇಶ್ ರಾಜಣ್ಣ ಆತಂಕ ವ್ಯಕ್ತಪಡಿಸುತ್ತಾರೆ.
ಒಂದು ಅಂದಾಜಿನ ಪ್ರಕಾರ, ಉತ್ತರ ಭಾರತವೂ ಸೇರಿ ದೇಶದ ಇತರೆ ಪ್ರದೇಶಗಳಿಂದ ಸುಮಾರು 10 ಸಾವಿರ ಮಂದಿ ನಿತ್ಯ ನಗರಕ್ಕೆ ಆಗಮಿಸುತ್ತಿದ್ದಾರೆ. ಈ ಪೈಕಿ ಉತ್ತರ ಭಾರತದಿಂದಲೇ ಅತಿ ಹೆಚ್ಚು. ಉತ್ತರ ಭಾರತೀಯರು ಬೆಂಗಳೂರಿಗೆ ಬರಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವೂ ವ್ಯಾಪಕವಾಗಿ ರೈಲ್ವೆ ಸಂಪರ್ಕವನ್ನು ಅವರಿಗೆ ಕಲ್ಪಿಸಿದೆ.
ನಗರ ಸಾರಿಗೆ ಮತ್ತು ಜನಸಂಖ್ಯಾ ಅಧ್ಯಯನಗಳ ಪ್ರಕಾರ ಬೆಂಗಳೂರಿಗೆ ಐಟಿ-ಬಿಟಿ, ಕಾರ್ಪೊರೇಟ್ ಕೆಲಸ, ಕಟ್ಟಡ ನಿರ್ಮಾಣ, ಹೋಟೆಲ್, ಭದ್ರತೆ, ಮನೆ ಕೆಲಸ ಇತ್ಯಾದಿ, ಸೇವಾ ವಲಯ, ಶಿಕ್ಷಣ ಮತ್ತು ವ್ಯವಹಾರಕ್ಕಾಗಿ ಶಾಶ್ವತ ಇಲ್ಲವೇ ದೀರ್ಘಾವಧಿ ವಲಸಿಗರಾಗಿ ನಗರವನ್ನು ಪ್ರವೇಶಿಸುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಇಂತಹ ವಲಸಿಗರಲ್ಲಿ ಬಹುಪಾಲು ಉತ್ತರ ಮತ್ತು ಪೂರ್ವ ಭಾರತದ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಒಡಿಶಾ, ರಾಜಸ್ಥಾನ, ಪಶ್ಚಿಮ ಬಂಗಾಳ ಹಾಗೂ ದೆಹಲಿ ಭಾಗಗಳಿಂದ ಬರುವವರ ಸಂಖ್ಯೆಯೇ ಹೆಚ್ಚು. ಹೀಗೆ ನಗರಕ್ಕೆ ಹರಿದುಬರುತ್ತಿರುವ ಬೃಹತ್ ವಲಸೆ, ಸ್ಥಳೀಯ ಕನ್ನಡಿಗರ ಉದ್ಯೋಗಾವಕಾಶ, ಭಾಷಾ ಅಸ್ಮಿತೆ ಹಾಗೂ ನಗರದ ಮೂಲಸೌಕರ್ಯದ ಮೇಲೆ ಭಾರಿ ಒತ್ತಡ ಸೃಷ್ಟಿಸಿದೆ.
ಕಳೆದ ಒಂದೂವರೆ ದಶಕದಲ್ಲಿ ಹೊರ ರಾಜ್ಯಗಳಿಂದ ತೀವ್ರ ವಲಸೆ ಸ್ಫೋಟಗೊಂಡಿರುವುದರಿಂದ ಬೆಂಗಳೂರಿನಲ್ಲಿ ಕನ್ನಡವನ್ನು ಪ್ರಥಮ ಭಾಷೆಯಾಗಿ ಮಾತನಾಡುವವರ ಪ್ರಮಾಣ ಸುಮಾರು ಶೇ.40 ಆಸುಪಾಸಿಗೆ ಇಳಿದಿದೆ ಎಂದು ಅಂದಾಜಿಸಲಾಗಿದೆ. ಹೀಗೆಯೇ ಪರಿಸ್ಥಿತಿ ಮುಂದುವರೆದರೆ ಮುಂದಿನ ಹತ್ತು ವರ್ಷಗಳಲ್ಲಿ ಈ ಪ್ರಮಾಣ ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಿದೆ. ಈ ಮಣ್ಣಿನ ಭಾಷೆ, ಸಂಸ್ಕೃತಿ ಮತ್ತು ಸ್ಥಳೀಯರ ಹಿತಾಸಕ್ತಿಯೂ ರಕ್ಷಣೆಯಾಗಬೇಕು. ಅದಕ್ಕಾಗಿ ಸರ್ಕಾರ ವಲಸೆ ಸ್ಫೋಟಕ್ಕೆ ನಿಯಂತ್ರಣ ಏರಲೇಬೇಕಿದೆ.
ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ, ರಾಜಸ್ಥಾನ, ಜಾರ್ಖಂಡ್ ಮೊದಲಾದ ರಾಜ್ಯಗಳಿಂದ ಅಸಂಘಟಿತ ವಲಯದ ಸಾವಿರಾರು ಕಾರ್ಮಿಕರು ಕಟ್ಟಡ ನಿರ್ಮಾಣ, ಭದ್ರತೆ, ಗೃಹಸೇವೆ ಹಾಗೂ ಸಾರಿಗೆ ಕ್ಷೇತ್ರಗಳಲ್ಲಿ ತೊಡಗಿಕೊಂಡಿದ್ದಾರೆ. ಅಂದಾಜಿನ ಪ್ರಕಾರ ಶೇ.25ಕ್ಕಿಂತ ಹೆಚ್ಚು ಮಂದಿ ಇವರೇ ಇದ್ದಾರೆ. ಗುತ್ತಿಗೆದಾರರು, ಮಧ್ಯವರ್ತಿಗಳ ಮೂಲಕ ಕಡಿಮೆ ಕೂಲಿಗೆ ಈ ಕಾರ್ಮಿಕರನ್ನು ಕರೆತರಲಾಗುತ್ತಿದೆ. ಹೊರ ರಾಜ್ಯಗಳಿಂದ ವಲಸೆ ಕಾರ್ಮಿಕರನ್ನು ಕರೆತರುತ್ತಿರುವುದು ಕನ್ನಡದ ನೆಲದ ಗುತ್ತಿಗೆದಾರರು, ಮಧ್ಯವರ್ತಿಗಳು ಮತ್ತು ಸ್ಥಿತಿವಂತ ಕನ್ನಡಿಗರೇ ಎನ್ನುವುದು ವಿಪರ್ಯಾಸ.
ಭೂ ಖರೀದಿಯಲ್ಲೂ ಪ್ರಾಬಲ್ಯ:
ಮತ್ತೊಂದೆಡೆ, ಐಟಿ ಕಾರಿಡಾರ್ಗಳಾದ ವೈಟ್ಫೀಲ್ಡ್, ಮಹದೇವಪುರ, ಸರ್ಜಾಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗಗಳಲ್ಲಿ ಹೊರರಾಜ್ಯಗಳ ಹೂಡಿಕೆದಾರರು ಮತ್ತು ವೃತ್ತಿಪರರಿಂದಾಗಿ ರಿಯಲ್ ಎಸ್ಟೇಟ್ ದರ ಗಗನಕ್ಕೇರಿದೆ. ಭೂ ಖರೀದಿಯಲ್ಲಿ ಹೊರ ರಾಜ್ಯಗಳಿಂದ ಬಂದ ಉದ್ಯಮಿಗಳು, ಸ್ಥಿತಿವಂತರು ಹೆಚ್ಚಾಗಿ ತೊಡಗಿದ್ದು, ಶೇ,50ರಿಂದ 60ರಷ್ಟಿದೆ. ವೈಟ್ಫೀಲ್ಡ್ನಲ್ಲಿ ಆಂಧ್ರದವರು, ಕೆ.ಆರ್.ಪುರಂನಲ್ಲಿ ತೆಲುಗು ಮತ್ತು ತಮಿಳರ ಪ್ರಾಬಲ್ಯ, ಅಪಾರ್ಟ್ಮೆಂಟ್ಗಳಲ್ಲಿ ಉತ್ತರ ಭಾರತೀಯರದ್ದೇ ಆಡಳಿತ. ಡೆವಲಪರ್ಗಳ ಅಪಾರ್ಟ್ಮೆಂಟ್ಗಳಲ್ಲಿ ಶೇ.40ರಿಂದ 60ರಷ್ಟು ಹಿಂದಿವಾಲಾಗಳದ್ದೇ ಹಿಡಿತ ಇದೆ. ಚಿಕ್ಕಪೇಟೆ, ಬಳೇಪೇಟೆ, ಚಾಮರಾಜಪೇಟೆ, ಬಸವನಗುಡಿ ಮುಂತಾದೆಡೆ ಹಿಂದಿ ಮಾರ್ವಾಡಿಗಳದ್ದೇ ಸಾಮ್ರಾಜ್ಯ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿ ಹೂವಯ್ಯ ಗೌಡ.
ಇದರಿಂದ ಬಾಡಿಗೆ ದರ ಹಾಗೂ ನಿವೇಶನಗಳ ಬೆಲೆ ದುಬಾರಿಯಾಗಿ, ಸ್ಥಳೀಯ ಮಧ್ಯಮ ವರ್ಗದ ಜನರಿಗೆ ವಸತಿ ಅಲಭ್ಯವಾಗುತ್ತಿದೆ. ಜೊತೆಗೆ, ಸಾರ್ವಜನಿಕ ಮತ್ತು ವಸತಿ ಸಮುಚ್ಚಯಗಳಲ್ಲಿ ಕನ್ನಡ ಭಾಷಾ ಬಳಕೆಯ ಪ್ರಮಾಣ ಕುಸಿಯುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಬೆಲೆ ಬಾಳುವ ಕೃಷಿ ಜಮೀನು, ಅಪಾರ್ಟ್ಮೆಂಟ್ಗಳು, ಖಾಲಿ ನಿವೇಶನಗಳು ಉತ್ತರ ಭಾರತೀಯರ, ಗುಜರಾತಿಗಳ ಪಾಲಾಗುತ್ತಿವೆ.
ಸರೋಜಿನಿ ಮಹಿಷಿ ವರದಿಯಲ್ಲೂ ರಾಜ್ಯದ ಭೂಮಿಯನ್ನು ಅನ್ಯಭಾಷಿಕರಿಗೆ ಪರಭಾರೆ ಮಾಡುವ ಮುನ್ನ ಸೂಕ್ತ ಚಿಂತನೆ ನಡೆಸಬೇಕು. ಅನಿಯಂತ್ರಿತವಾಗಿ ಭೂಮಿ ನೀಡುವುದನ್ನು ತಡೆಯಬೇಕು ಎಂಬ ಪ್ರಸ್ತಾಪವಿತ್ತು. ಆದರೆ, ಅದು ಸಮಗ್ರ ಕಾನೂನಾಗಿ ಜಾರಿಯಾಗಲಿಲ್ಲ. ಪ್ರಸ್ತುತ ಬೆಂಗಳೂರು ಹಾಗೂ ದಕ್ಷಿಣ ಕರ್ನಾಟಕ ಭಾಗದ ಮಹತ್ವದ ಭೂಪ್ರದೇಶಗಳು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅನ್ಯಭಾಷಿಕರ ಪಾಲಾಗುತ್ತಿವೆ. ಕೃಷಿಭೂಮಿ ಪರಭಾರೆ ನಿಯಮಗಳ ಸಡಿಲಿಕೆಯ ಪರಿಣಾಮವಾಗಿ ಕನ್ಡನಿಗರ ನೆಲದ ಮೇಲೆ ಸ್ಥಳೀಯರ ಹಿಡಿತ ಕೈತಪ್ಪುವ ಭೀತಿ ಸೃಷ್ಟಿಯಾಗಿದೆ.
ವೈಜ್ಞಾನಿಕ ನಿರ್ವಹಣೆ ಪರಿಹಾರ:
ವಲಸಿಗರ ಮೂಲದ ಆಧಾರದಲ್ಲಿ ಆಸ್ತಿ ಅಥವಾ ಉದ್ಯೋಗ ನಿರ್ಬಂಧಿಸುವುದು ಮತ್ತು ಕಾನೂನುಬದ್ಧ ಸ್ಥಳೀಯ ಆದ್ಯತೆ ನೀಡುವುದು ಎರಡೂ ವಿಭಿನ್ನ ಕಾನೂನು ವಿಚಾರ. ಭಾರತ ಸಂವಿಧಾನದ 19 (1)(ಡಿ), 19(1)(ಇ) ಮತ್ತು 19 (1)(ಜಿ) ವಿಧಿಗಳು ನಾಗರಿಕರಿಗೆ ದೇಶದಾದ್ಯಂತ ಸಂಚರಿಸುವ, ನೆಲೆಸುವ ಹಾಗೂ ವೃತ್ತಿ-ಉದ್ಯೋಗ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತವೆ. ಹಾಗಾಗಿ ಹೊರರಾಜ್ಯದ ಜನರು ಕರ್ನಾಟಕಕ್ಕೆ ಬರುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ. ಕಾನೂನು ತಜ್ಞರೊಂದಿಗೆ ಚರ್ಚಿಸಿ, ವಲಸೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಪಡಬಹುದು ಎನ್ನುತ್ತಾರೆ ಹಿರಿಯ ವಕೀಲ ಎಂ.ಎಚ್.ಮಹೇಶ್ಕುಮಾರ್.
ಕೇರಳದ ‘ಅತಿಥಿ ಕಾರ್ಮಿಕರ ಕಲ್ಯಾಣ ಮಾದರಿ’ ಹಾಗೂ ಜಾರ್ಖಂಡ್-ಒಡಿಶಾ ರಾಜ್ಯಗಳ ವಲಸೆ ನಿಯಂತ್ರಣ ಕ್ರಮಗಳನ್ನು ಅಧ್ಯಯನ ಮಾಡಿ, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ರಾಜ್ಯಗಳ ಜೊತೆ ಅಧಿಕೃತ ಒಪ್ಪಂದ ಮಾಡಿಕೊಂಡು ವಲಸೆ ನಿಯಂತ್ರಿಸಬೇಕು.
ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ
ಭಾರತ ಸಂವಿಧಾನದ ಪ್ರಕಾರ ಕಾನೂನುಬದ್ಧವಾಗಿ ವಲಸೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ, ನಿಯಂತ್ರಿಸುವ ಹಕ್ಕು ಮತ್ತು ಅಧಿಕಾರ ರಾಜ್ಯ ಸರ್ಕಾರಕ್ಕೆ ಇದ್ದೇ ಇದೆ. ಹೊರಗಿನಿಂದ ಬರುವ ಕಾರ್ಮಿಕರಿಗೆ ಅನ್ವಯಿಸುವ ಕಾನೂನುಗಳಲ್ಲಿ ಮಾರ್ಪಾಡು ಮಾಡುವುದು ಸೇರಿ ವಸತಿ ನಿಯಮಗಳು, ತೆರಿಗೆ ಮಾದರಿಯಲ್ಲಿ ಬದಲಾವಣೆ, ಉದ್ಯೋಗ ನೀಡುವವರಿಗೆ ಹೊಣೆಗಾರಿಕೆ ನಿಗದಿಪಡಿಸುವುದು, ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವಂತಹ ಉಪಕ್ರಮಗಳಿಂದ ವಲಸೆ ನಿಯಂತ್ರಣ ಸಾಧ್ಯ.
- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ.
ನಿಯಂತ್ರಣ ನೀತಿ ಅಗತ್ಯ
ಬೆಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಮುಚ್ಚಯಗಳಲ್ಲಿ ಕನ್ನಡಿಗರಿಗೆ ಪ್ರವೇಶವಿಲ್ಲದಂತೆ ನಿರ್ದಿಷ್ಟ ಭಾಷಿಕರೇ ಪ್ರತ್ಯೇಕವಾಗಿ ನೆಲೆಸುತ್ತಿದ್ದು, ಸ್ಥಳೀಯರ ಜೊತೆ ಬೆರೆಯದ ಕನ್ನಡವಿಲ್ಲದ ಕರ್ನಾಟಕ ಸೃಷ್ಟಿಯಾಗುವ ಅಪಾಯವಿದೆ. ಹೀಗಾಗಿ ಸಮಗ್ರ ವಲಸೆ ನೀತಿ ರೂಪಿಸಬೇಕು.
-ಡಾ.ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಸವಾಲಿನ ಕೆಲಸ
ಐಟಿ-ಬಿಟಿ, ನಿರ್ಮಾಣ, ಹೋಟೆಲ್, ರಿಯಲ್ ಎಸ್ಟೇಟ್ ಕ್ಷೇತ್ರಗಳ ಬೆಳವಣಿಗೆಯೊಂದಿಗೆ ಹೆಚ್ಚುತ್ತಿರುವ ಹೊರರಾಜ್ಯಗಳ ಜನರ ವಲಸೆ-ಉದ್ಯೋಗ ಸ್ಪರ್ಧೆ, ವಸತಿ ಒತ್ತಡ, ಭಾಷಾ ಅಸಮತೋಲನದ ಆತಂಕ-ಕನ್ನಡಿಗರ ಹಿತಾಸಕ್ತಿ ಕಾಪಾಡಲು ಸರ್ಕಾರದಿಂದ ವೈಜ್ಞಾನಿಕ ವಲಸೆ ನೀತಿ ರೂಪಿಸುವ ಅಗತ್ಯ. ವಲಸೆ ನಿರ್ಬಂಧಿಸುವುದು ಕಾನೂನಾತ್ಮಕವಾಗಿ ಸವಾಲಿನ ಕೆಲಸ. ಇದಕ್ಕೆ ಸಂವಿಧಾನದ ತಿದ್ದುಪಡಿಯ ಅಗತ್ಯ ಇದೆ.
- ಬಂಜಗೆರೆ ಜಯಪ್ರಕಾಶ್, ಹಿರಿಯ ಸಾಹಿತಿ