31ರವರೆಗೂ ಜಾತಿಗಣತಿ: ಶಾಲೆ ಶಿಕ್ಷಕರಿಗೆ ವಿನಾಯ್ತಿ

Published : Oct 20, 2025, 05:40 AM IST
Karnataka Caste Census

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

  ಬೆಂಗಳೂರು :  ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಪೂರ್ಣಗೊಳಿಸುವ ಸಲುವಾಗಿ ಅಕ್ಟೋಬರ್‌ 31ರವರೆಗೆ ಕಾಲಾವಕಾಶ ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಅ.20ರಿಂದ 22ರವರೆಗೆ ದೀಪಾವಳಿ ರಜೆ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯಕ್ಕೆ ತಾತ್ಕಾಲಿಕ ವಿರಾಮ ಇರಲಿದೆ. ಸಮೀಕ್ಷೆಯನ್ನು ಅ.23ರಿಂದ ಪುನಾರಂಭಿಸಬೇಕು. ಸಮೀಕ್ಷೆ ಅತಿ ಹೆಚ್ಚು ಪ್ರಮಾಣದಲ್ಲಿ ಬಾಕಿ ಇರುವ ಬೆಂಗಳೂರು ನಗರವನ್ನೂ ಒಳಗೊಂಡು ಬೆರಳೆಣಿಕೆಯಷ್ಟು ಪ್ರಮಾಣದಲ್ಲಿ ಸಮೀಕ್ಷೆ ಬಾಕಿ ಇರುವ ರಾಜ್ಯದ ಇನ್ನುಳಿದ ಜಿಲ್ಲೆಗಳಲ್ಲೂ ಅ.31ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸಬೇಕು. ಆದರೆ, ಬಾಕಿ ಇರುವ ಸಮೀಕ್ಷೆ ಪೂರ್ಣಗೊಳಿಸಲು ಎಲ್ಲಿಯೂ ಶಿಕ್ಷಕರನ್ನು ಬಳಸುವಂತಿಲ್ಲ ಎಂದು ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಮುಖ್ಯಮಂತ್ರಿ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಮುಖ್ಯಮಂತ್ರಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಮತ್ತು ಇಲಾಖಾ ಅಧಿಕಾರಿಗಳು ಹಾಗೂ ಬೆಂಗಳೂರಿನ ವಿವಿಧ ಸಚಿವರು, ಜಿಬಿಎ ಅಧಿಕಾರಿಗಳೊಂದಿಗೆ ನಡೆಸಿದ ಸಮೀಕ್ಷೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅ.31ರವರೆಗೆ ಕಾಲಾವಕಾಶ ವಿಸ್ತರಣೆಗೆ ತೀರ್ಮಾನಿಸಲಾಗಿದೆ.

ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಈ ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಅ.22ರವರೆಗೆ ಸಮೀಕ್ಷಾದಾರರಿಗೂ ಮೂರು ದಿನ ರಜೆ ಇರಲಿದೆ. ಹಾಗಾಗಿ ಅ.23ರಿಂದ ಸಮೀಕ್ಷೆ ಪುನಾರಂಭಿಸಿ 31ರೊಳಗೆ ಪೂರ್ಣಗೊಳಿಸಬೇಕು. ಆದರೆ, ಬಾಕಿ ಸಮೀಕ್ಷೆ ಪೂರ್ಣಗೊಳಿಸಲು ಶಿಕ್ಷಕರನ್ನು ಬಳಸಿಕೊಳ್ಳದಿರಲು ತೀರ್ಮಾನಿಸಲಾಗಿದೆ. ಆಯಾ ಜಿಲ್ಲಾಧಿಕಾರಿಗಳು ಶಿಕ್ಷಕರನ್ನು ಬಿಟ್ಟು ಉಳಿದ ಇನ್ನುಳಿದ ಇಲಾಖೆಗಳ ಸಿಬ್ಬಂದಿಗಳನ್ನು ಬಳಸಿಕೊಂಡು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಬೆಂಗಳೂರಲ್ಲಿ ಶೇ.50ಕ್ಕಿಂತ ಹೆಚ್ಚು ಸಮೀಕ್ಷೆ ಬಾಕಿ:

ಗ್ರೇಟರ್ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಶೇಕಡ 95ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಂಡಿದೆ. ರಾಮನಗರ, ಧಾರವಾಡ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಾತ್ರ ಶೇ.10ರಿಂದ 12ರಷ್ಟು ಸಮೀಕ್ಷೆ ಆಗಬೇಕಿದೆ. ಕೆಲ ಜಿಲ್ಲೆಗಳಲ್ಲಿ ನೂರರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಆದರೆ, ಬೆಂಗಳೂರಿನಲ್ಲಿ ತಡವಾಗಿ ಸಮೀಕ್ಷೆ ಪ್ರಾರಂಭವಾದ ಕಾರಣ ಸಮೀಕ್ಷೆ ಕಡಿಮೆಯಾಗಿದ್ದು ಶೇ.45ರಷ್ಟು ಪೂರ್ಣಗೊಂಡಿದೆ. ಬಾಕಿ ಉಳಿದಿರುವ ಜಿಲ್ಲೆಗಳಲ್ಲಿ ಮಾತ್ರ ಸಮೀಕ್ಷೆ ಅಕ್ಟೋಬರ್ 31ರವರೆಗೆ ಸಮೀಕ್ಷೆ ಮುಂದುವರೆಯಲಿದೆ ಎಂದರು.

ಶಾಸಕರ ಮೂಲಕ ಜನತೆಗೆ ಜಾಗೃತಿ:

ಬೆಂಗಳೂರಿನ ಜನರಲ್ಲಿ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಜಾಗೃತಿ ಮೂಡಿಸುವಂತೆ ಶಾಸಕರಿಗೆ ನಿರ್ದೇಶನ ನೀಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಕಚೇರಿಯಿಂದ ಸೂಚನೆ ರವಾನೆಯಾಗಲಿದೆ ಎಂದು ಹೇಳಿದರು.

ಗಡುವಿನೊಳಗೆ ಪೂರ್ಣ

ಅ.31ರೊಳಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಎಲ್ಲ ಜಿಲ್ಲೆಗಳಲ್ಲೂ ಶೇ.100ರಷ್ಟು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಪೂರ್ಣ ಪ್ರಮಾಣದಲ್ಲಿ ಸಮೀಕ್ಷೆ ಯಶಸ್ಸಿಗೆ ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲೂ ಸಮೀಕ್ಷೆ ಪೂರ್ಣಗೊಳಿಸಲು ಸಹಕರಿಸುವಂತೆ ಶಾಸಕರುಗಳಿಗೂ ಮನವಿ ಮಾಡಲಾಗುವುದು.

- ಶಿವರಾಜ ತಂಗಡಗಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ

ಪ್ರಸಕ್ತ ಬೆಂಗಳೂರಲ್ಲಿ ಶೇ.45, ಎರಡು ಜಿಲ್ಲೆಗಳಲ್ಲಿ ಶೇ.85, ಉಳಿದಂತೆ ಬಹುತೇಕ ಜಿಲ್ಲೆಗಳಲ್ಲಿ ಜನಗಣತಿ ಕಾರ್ಯ ಶೇ.95ರಷ್ಟು ಪೂರ್ಣ

ಅ.19ರ ಗಡುವಿನೊಳಗೆ ಗಣತಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಅ.31ರವರೆಗೂ ಅವಧಿ ವಿಸ್ತರಣೆಗೆ ಸಿಎಂ ನೇತೃತ್ವದ ಸಭೆಯಲ್ಲಿ ನಿರ್ಧಾರ

ಆದರೆ ವಿಸ್ತರಿತ ಅವಧಿಯಲ್ಲಿ ಶಾಲೆ ಪುನಾರಂಭ ಹಿನ್ನೆಲೆಯಲ್ಲಿ ಗಣತಿಗೆ ಶಿಕ್ಷಕರ ಬಳಕೆ ಇಲ್ಲ. ಬದಲಿಗೆ ಇತರೆ ಸರ್ಕಾರಿ ಸಿಬ್ಬಂದಿ ನಿಯೋಜನೆ

ದೀಪಾವಳಿ ಹಿನ್ನೆಲೆಯಲ್ಲಿ ಅ.20ರಿಂದ ಮೂರು ದಿನಗಳ ಕಾಲ ಗಣತಿಗೆ ಕಾರ್ಯಕ್ರಮಕ್ಕೆ ರಜೆ. ಬಳಿಕ ತುರುಸಿನಿಂದ ಅಭಿಯಾನಕ್ಕೆ ನಿರ್ಧಾರ

 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌
ನಟ ಯಶ್‌ಗೆ ಜಾರಿಯಾಗಿದ್ದ ಆದಾಯ ತೆರಿಗೆ ನೋಟಿಸ್‌ ರದ್ದು