ಮೇಕೆದಾಟುಗೆ ಕೇಂದ್ರದ ಅನುಮತಿ ಕೇಳಿದ ಸಿಎಂ

Published : Oct 23, 2026, 01:14 PM IST
Mekedatu project

ಸಾರಾಂಶ

ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ನವದೆಹಲಿ : ಕರ್ನಾಟಕದ ಪ್ರಮುಖ ಯೋಜನೆಗಳಾದ ಶರಾವತಿ ಪಂಪ್ಡ್‌ ಸ್ಟೋರೇಜ್‌ ಹಾಗೂ ಮೇಕೆದಾಟು ಯೋಜನೆಗಳಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸ್ಥಾಯಿ ಸಮಿತಿ ಅನುಮೋದನೆ ನೀಡಬೇಕು ಹಾಗೂ ಕಸ್ತೂರಿ ರಂಗನ್‌ ವರದಿ ವಿಚಾರವಾಗಿ ಭೌತಿಕ ಸಮೀಕ್ಷೆ ಪೂರ್ಣಗೊಳ್ಳುವವರೆಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಡಿ ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿದ್ದಾರೆ.

ಅರಣ್ಯ ಸಚಿವ ಭೂಪೇಂದರ್ ಯಾದವ್ ಭೇಟಿ

ನವದೆಹಲಿಯ ಪರಿಸರ ಭವನದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೇಂದ್ರ ಪರಿಸರ, ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರನ್ನು ಗುರುವಾರ ಭೇಟಿ ಮಾಡಿ ಚರ್ಚಿಸಿ, ರಾಜ್ಯದ ಯೋಜನೆಗಳ ಕುರಿತು ಮನವಿ ಸಲ್ಲಿಸಿದರು.

ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಯ ಪ್ರಸ್ತಾಪ ಕುರಿತು ಕೊನೆಯ ಬಾರಿಗೆ 2026ರ ಫೆ.28ರಂದು ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯ 89ನೇ ಸಭೆಯಲ್ಲಿ ಚರ್ಚಿಸಲಾಯಿತು. ತಾಂತ್ರಿಕ ಸಮಿತಿಯು ಎತ್ತಿದ ಅಂಶಗಳಿಗೆ ಸ್ಪಷ್ಟೀಕರಣ ಹಾಗೂ ರಾಷ್ಟ್ರೀಯ ಸುಧಾರಿತ ಅಧ್ಯಯನ ಸಂಸ್ಥೆಯಿಂದ ತಾಂತ್ರಿಕ ವರದಿಯನ್ನು ಸಲ್ಲಿಸುವಂತೆ ರಾಜ್ಯ/ಬಳಕೆದಾರ ಸಂಸ್ಥೆಗೆ ಸೂಚಿಸಲಾಗಿತ್ತು. ಈ ಸಂಬಂಧ ಬೆಂಗಳೂರಿನ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್’ (ಎನ್‌ಐಎಎಸ್‌) ವರದಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸುವುದರ ಜೊತೆಗೆ, ಸ್ಥಾಯಿ ಸಮಿತಿಯು ಎತ್ತಿದ ಪ್ರಶ್ನೆಗಳಿಗೆ ಕರ್ನಾಟಕ ಸರ್ಕಾರವು ಸೂಕ್ತ ಉತ್ತರಗಳನ್ನು ನೀಡಿದೆ ಎಂದು ವಿವರಿಸಿದರು.

ಮೇಕೆದಾಟು ಕುಡಿಯುವ ನೀರಿನ ಯೋಜನೆ

ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಭೂ-ತಾಂತ್ರಿಕ ಸಮೀಕ್ಷೆಗಾಗಿ ಕಾವೇರಿ ವನ್ಯಜೀವಿ ಅಭಯಾರಣ್ಯದಲ್ಲಿ ಒಟ್ಟು 0.0000352 ಹೆಕ್ಟೇರ್ ಪ್ರದೇಶದಲ್ಲಿ 20 ಬೋರ್ ಹೋಲ್‌ಗಳನ್ನು ಕೊರೆಯಲು ಅನುಮತಿ ಕೋರುವ ಈ ಪ್ರಸ್ತಾಪವನ್ನು ರಾಷ್ಟ್ರೀಯ ವನ್ಯ ಜೀವಿ ಮಂಡಳಿಯ ಸ್ಥಾಯಿ ಸಮಿತಿ ಪರಿಶೀಲನೆಗಾಗಿ 2026ರ ಜು.1ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಇತ್ತೀಚೆಗೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಮುಂದೆ ಬಾಕಿ ಇರುವ ವಿವಿಧ ಅರ್ಜಿಗಳ ಸ್ಥಿತಿಗತಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಅಗತ್ಯ ದಾಖಲೆ/ಮಾಹಿತಿಯನ್ನು ಕೋರಿದ್ದು, ಅದನ್ನು ಶೀಘ್ರದಲ್ಲೇ ಒದಗಿಸಲಾಗುವುದು.

ಆದರೆ, ಈ ಪ್ರಸ್ತಾಪವು ಕೇವಲ ಸಮೀಕ್ಷೆ ಮತ್ತು ತನಿಖಾ ಚಟುವಟಿಕೆಗಳಿಗೆ ಮಾತ್ರ ಸಂಬಂಧಿಸಿದ್ದು, ಪ್ರಸ್ತುತ ಯಾವುದೇ ಸಂರಕ್ಷಿತ ಪ್ರದೇಶದ ಭೂಮಿಯನ್ನು ಯೋಜನೆಗೆ ಬಳಸಿಕೊಳ್ಳಲು ಕೋರುತ್ತಿಲ್ಲ ಎಂದು ವಿವರಿಸಿದ್ದಾರೆ. ಈ ಸಂಬಂಧ ಮೇಲ್ಕಂಡ 2 ಪ್ರಸ್ತಾಪಗಳನ್ನು ಶೀಘ್ರವಾಗಿ ಪರಿಶೀಲಿಸಿ ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಆಲಿಸು ಕಂದ ಯೋಜನೆಗೆ ಖಾದರ್‌ ಚಾಲನೆ
ಮೆಟ್ರೋ ಕಾಮಗಾರಿಯಿಂದ ರಸ್ತೆ ದುಸ್ಥಿತಿ : ಕೃಷ್ಣ ಬೈರೇಗೌಡ