ಆಲಿಸು ಕಂದ ಯೋಜನೆಗೆ ಖಾದರ್‌ ಚಾಲನೆ

Published : Oct 23, 2026, 11:09 AM IST
UT khader

ಸಾರಾಂಶ

‘ಶ್ರವಣ ದೋಷ ಮುಕ್ತ ಕರ್ನಾಟಕ’ ಅಭಿಯಾನದ ಅಂಗವಾಗಿ ‘ಆಲಿಸು ಕಂದ’ ಯೋಜನೆ ನಿರಂತರವಾಗಿ ಮುಂದುವರಿಯಲು ಸಾಧ್ಯವಾಗುವಂತೆ ವಿಷನ್ ಕಮಿಟಿ ರಚಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಬೆಂಗಳೂರು : ‘ಶ್ರವಣ ದೋಷ ಮುಕ್ತ ಕರ್ನಾಟಕ’ ಅಭಿಯಾನದ ಅಂಗವಾಗಿ ‘ಆಲಿಸು ಕಂದ’ ಯೋಜನೆ ನಿರಂತರವಾಗಿ ಮುಂದುವರಿಯಲು ಸಾಧ್ಯವಾಗುವಂತೆ ವಿಷನ್ ಕಮಿಟಿ ರಚಿಸಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಗುರುವಾರ ಆರೋಗ್ಯಸೌಧದಲ್ಲಿ ಶ್ರವಣ ದೋಷ ಮುಕ್ತ ಅಭಿಯಾನದ ‘ಆಲಿಸು ಕಂದ’ ಯೋಜನೆಯಡಿ 2026-27ನೇ ಸಾಲಿನಲ್ಲಿ 200 ಮಕ್ಕಳಿಗೆ ಕಾಕ್ಲಿಯರ್‌ ಇಂಪ್ಲ್ಯಾಂಟ್‌ ಶ್ರವಣ ಸಾಧನ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿದರು.

200 ಮಕ್ಕಳಲ್ಲಿ ಮೊದಲ ಹಂತದಲ್ಲಿ 75 ಮಕ್ಕಳಿಗೆ ಶ್ರವಣ ಸಾಧನ ಅಳವಡಿಕೆಗೆ ಚಾಲನೆ ನೀಡಿದ್ದು, ಒಂದೆರಡು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು. ಎರಡನೇ ಹಂತದಲ್ಲಿ 125 ಮಕ್ಕಳಿಗೆ 3 ತಿಂಗಳಲ್ಲಿ ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.

ಶಸ್ತ್ರಚಿಕಿತ್ಸೆಗೆ ₹15 ಲಕ್ಷ ನೆರವು:

ರಾಜ್ಯದಲ್ಲಿ ಕಿವುಡ-ಮೂಗ ಸಮಸ್ಯೆಯಿಂದ ಯಾವ ಮಕ್ಕಳೂ ತೊಂದರೆ ಅನುಭವಿಸಬಾರದು. ಅದಕ್ಕಾಗಿ ಕಾಕ್ಲಿಯರ್ ಇಂಪ್ಲ್ಯಾಂಟ್ ಶಸ್ತ್ರಚಿಕಿತ್ಸೆಗೆ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. 2014ರಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಆಗ ಈ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ₹8-9 ಲಕ್ಷ ಇತ್ತು. ಈಗ ಅದು ₹15 ಲಕ್ಷಕ್ಕೆ ತಲುಪಿದೆ. ಸರ್ಕಾರ ಜಾರಿಗೊಳಿಸಿದ ಈ ಯೋಜನೆ ಆಗಾಗ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡು ತೊಂದರೆ ಆಗುತ್ತಿದೆ. ಈ ಅಡೆತಡೆ ನಿವಾರಣೆಗೆ ವಿಷನ್ ಸಮಿತಿ ರಚಿಸಿ ಯೋಜನೆ ಉತ್ತಮವಾಗಿ ಮುಂದುವರಿಯುವಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಿವುಡು ಸಮಸ್ಯೆಯೇ ಮೂಲ ಕಾರಣ:

ಹಲವು ಮಕ್ಕಳು ಮಾತು ಬಾರದೆ ಮೂಗರಾಗಿರಲು ಕಿವುಡು ಸಮಸ್ಯೆ ಮೂಲ ಕಾರಣದೆ. ಮುಂದಿನ 5-10 ವರ್ಷದಲ್ಲಿ ‘ಆಲಿಸು ಕಂದ’ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಬೇಕು. ಈ ಮೂಲಕ ಇಂತಹ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.

ಈ ಕಾರ್ಯಕ್ರಮದಡಿ ಫಲಾನುಭವಿಗಳ ತಪಾಸಣೆ, ಶ್ರವಣ ಸಾಮರ್ಥ್ಯದ ಮೌಲ್ಯಮಾಪನ, ಅರ್ಹತೆಯ ಪರಿಶೀಲನೆ, ಕಾಕ್ಲಿಯರ್‌ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೆ ನಂತರ ಸಾಧನವನ್ನು ಸಕ್ರಿಯಗೊಳಿಸುವಿಕೆ ಮತ್ತು ಅದರ ಸೂಕ್ತ ಹೊಂದಾಣಿಕೆ (ಡಿವೈಸ್ ಆ್ಯಕ್ಟಿವೇಶನ್ ಆ್ಯಂಡ್ ಮ್ಯಾಪಿಂಗ್) ಹಾಗೂ ವ್ಯವಸ್ಥಿತ ಶ್ರವಣ-ಮೌಖಿಕ ಚಿಕಿತ್ಸಾ ಸೇವೆಗಳನ್ನು (ಆಡಿಟರಿ ಆ್ಯಂಡ್ ವರ್ಬಲ್ ಥೆರಪಿ -ಎವಿಟಿ) ಒಳಗೊಂಡ ಸಮಗ್ರ ಆರೈಕೆ ಒದಗಿಸಲಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ಕಾರ್ಯದರ್ಶಿ ರಿತ್ವಿಕ್ ರಂಜನ್‌ಪಾಂಡೆ, ಅಧಿಕಾರಿಗಳಿದ್ದರು.

ಕಳೆದ ವರ್ಷ 575 ಮಕ್ಕಳಿಗೆಕಾಕ್ಲಿಯರ್ ಇಂಪ್ಲಾಂಟ್

ಕಳೆದ 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕ ರಾಜ್ಯದಲ್ಲಿ 575 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ ಸರ್ಕಾರದೊಂದಿಗೆ ನೋಂದಾಯಿತ ಹಾಗೂ ಮಾನ್ಯತೆ ಪಡೆದ ಕಾಕ್ಲಿಯರ್‌ಇಂಪ್ಲಾಂಟ್ ಆಸ್ಪತ್ರೆಗಳಿಗೆ ಹೆಚ್ಚುವರಿ 200 ಕಾಕ್ಲಿಯರ್‌ಇಂಪ್ಲಾಂಟ್ ಸಾಧನಗಳನ್ನು ಪೂರೈಸಲು ಯೋಜಿಸಲಾಗಿದೆ ಎಂದು ಸಚಿವ ಖಾದರ್‌ ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮೆಟ್ರೋ ಕಾಮಗಾರಿಯಿಂದ ರಸ್ತೆ ದುಸ್ಥಿತಿ : ಕೃಷ್ಣ ಬೈರೇಗೌಡ
ನಗರದ ವಿವಿಧೆಡೆ ಸಂಜೆ ಮಳೆ: 26ರ ವರೆಗೆ ಮಳೆ ಮುನ್ಸೂಚನೆ