ಕರ್ನಾಟಕದಲ್ಲಿ ಇಂದಿನಿಂದ ಒಂದೇ ಗ್ರಾಮೀಣ ಬ್ಯಾಂಕ್‌

Published : May 01, 2025, 05:46 AM IST
Bank Branch IFSC Code

ಸಾರಾಂಶ

ಧಾರವಾಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ (ಕೆವಿಜಿ ಬ್ಯಾಂಕ್‌) ಮತ್ತು ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಕರ್ನಾಟಕ ಗ್ರಾಮೀಣ ಬ್ಯಾಂಕ್‌’ಗಳು ಪರಸ್ಪರ ವಿಲೀನ

  ಧಾರವಾಡ : ರಾಜ್ಯಕ್ಕೀಗ ಒಂದೇ ಗ್ರಾಮೀಣ ಬ್ಯಾಂಕ್‌ ಅಸ್ವಿತ್ವಕ್ಕೆ ಬಂದಿದೆ. ಧಾರವಾಡದಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ (ಕೆವಿಜಿ ಬ್ಯಾಂಕ್‌) ಮತ್ತು ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಕರ್ನಾಟಕ ಗ್ರಾಮೀಣ ಬ್ಯಾಂಕ್‌’ಗಳು ಪರಸ್ಪರ ವಿಲೀನಗೊಂಡಿದ್ದು, ಮೇ 1ರ ಗುರುವಾರದಿಂದ ‘ಕರ್ನಾಟಕ ಗ್ರಾಮೀಣ ಬ್ಯಾಂಕ್’ ಉದಯಿಸಲಿದೆ.

‘ಒಂದು ರಾಜ್ಯ, ಒಂದು ಗ್ರಾಮೀಣ ಬ್ಯಾಂಕ್’ ಎಂಬ ನೀತಿಯನ್ವಯ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯ ಮೇರೆಗೆ ರಾಜ್ಯಕ್ಕೀಗ ಒಂದೇ ಗ್ರಾಮೀಣ ಬ್ಯಾಂಕ್‌ ಅಸ್ವಿತ್ವಕ್ಕೆ ಬಂದಿದೆ. ನೂತನ ಬ್ಯಾಂಕಿನ ಪ್ರಧಾನ ಕಚೇರಿ ಬಳ್ಳಾರಿಯಲ್ಲಿ ಇರಲಿದೆ.

ಉದಯಗೊಂಡ ಈ ಬ್ಯಾಂಕ್, ಸರ್ಕಾರಿ ಸ್ವಾಮಿತ್ವದಲ್ಲಿಯೇ ಮುಂದುವರಿಯಲಿದ್ದು, ಕೇಂದ್ರ ಸರ್ಕಾರ (ಶೇ.50), ರಾಜ್ಯ ಸರ್ಕಾರ (ಶೇ.15) ಮತ್ತು ಕೆನರಾ ಬ್ಯಾಂಕ್ (ಶೇ.35)ರಷ್ಟು ತಮ್ಮ ಪಾಲುದಾರಿಕೆಯನ್ನು ಮುಂದುವರಿಸಲಿವೆ. ಉದಯಗೊಳ್ಳುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸೇವೆ ಇನ್ನು ಮುಂದೆ ಸಮಗ್ರ ಕರ್ನಾಟಕಕ್ಕೆ ದೊರೆಯಲಿದೆ. ಈ ಬ್ಯಾಂಕ್‌ 1,751 ಶಾಖೆಗಳೊಂದಿಗೆ ₹10,4851 ಕೋಟಿ ವಹಿವಾಟು ನಡೆಸುವ ದೇಶದ ಎರಡನೇ ಬೃಹತ್ ಗ್ರಾಮೀಣ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಾರಥ್ಯವನ್ನು ಕೃಷಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ, ಬ್ಯಾಂಕಿಂಗ್ ರಂಗದಲ್ಲಿ 31 ವರ್ಷಗಳ ಅನುಭವ ಹೊಂದಿರುವ, ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಶ್ರೀಕಾಂತ ಎಂ ಭಂಡಿವಾಡ ವಹಿಸಲಿದ್ದಾರೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ 9 ಜಿಲ್ಲೆಗಳ ಕಾರ್ಯಕ್ಷೇತ್ರದಲ್ಲಿ 629 ಶಾಖೆಗಳೊಂದಿಗೆ 38,714 ಕೋಟಿ ರು. ವಹಿವಾಟು ನಡೆಸುತ್ತಿತ್ತು. ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕ್ 22 ಜಿಲ್ಲೆಗಳಲ್ಲಿ 1,122 ಶಾಖೆಗಳೊಂದಿಗೆ ₹66,137 ಕೋಟಿ ವಹಿವಾಟು ನಡೆಸುತ್ತಿತ್ತು.

1975ರಲ್ಲಿ ಗ್ರಾಮೀಣ ಬ್ಯಾಂಕ್‌ಗಳ ಸ್ಥಾಪನೆ:

ಗ್ರಾಮೀಣ ಭಾಗದ ಜನರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ 1975ರಲ್ಲಿ ಗ್ರಾಮೀಣ ಬ್ಯಾಂಕುಗಳನ್ನು ಸ್ಥಾಪಿಸಿತು. ಆ ಸಮಯದಲ್ಲಿ ದೇಶಾದ್ಯಂತ 196 ಗ್ರಾಮೀಣ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದವು, ರಾಜ್ಯದಲ್ಲಿ 13 ಗ್ರಾಮೀಣ ಬ್ಯಾಂಕುಗಳಿದ್ದವು. ಗ್ರಾಮೀಣ ಬ್ಯಾಂಕುಗಳನ್ನು ಇನ್ನಷ್ಟು ಬಲಪಡಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ 2005ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಪ್ರಾರಂಭಿಸಿತು. ಇದರನ್ವಯ ಮತ್ತು ತದನಂತರದ ವಿಲೀನ ಪ್ರಕ್ರಿಯೆಯ ಪರಿಣಾಮವಾಗಿ ರಾಜ್ಯದ ಕೆವಿಜಿ ಬ್ಯಾಂಕ್‌ ಸೇರಿ ಪ್ರಸ್ತುತ ದೇಶದಲ್ಲಿ 43 ಗ್ರಾಮೀಣ ಬ್ಯಾಂಕುಗಳು ಕಾರ್ಯ ನಿರ್ವಹಿಸುತ್ತಿದ್ದವು.

ಸರ್ಕಾರಿ ಸ್ವಾಮಿತ್ವದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್‌ ಇದಾಗಿರುವುದರಿಂದ ಗ್ರಾಹಕ ವರ್ಗ ಇನ್ನಷ್ಟು ಉತ್ತಮ ಸೇವೆ ಪಡೆಯಲಿದೆ.

- ಶ್ರೀಕಾಂತ ಎಂ ಭಂಡಿವಾಡ, ನೂತನ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ