;Resize=(412,232))
ಬೆಂಗಳೂರು : ಹೋಟೆಲ್‌ಗಳಿಗೆ ನೀಡುತ್ತಿರುವ ಅಡುಗೆ ಅನಿಲದ ಪ್ರಮಾಣವನ್ನು ಶೇ.40ಕ್ಕೆ ಹೆಚ್ಚಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಒತ್ತಾಯಿಸಿದರು.
ಶುಕ್ರವಾರ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ವಿಡಿಯೋ ಸಂವಾದದಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಸಚಿವರು ಭಾಗಹಿಸಿದ್ದರು.
ಪ್ರಸ್ತುತ ಹೋಟೆಲ್‌ಗಳಿಗೆ ಶೇ.20ರಷ್ಟು ಅಡುಗೆ ಅನಿಲ್ ಪೂರೈಸುತ್ತಿದ್ದು, ಈ ಪ್ರಮಾಣವನ್ನು ಮತ್ತೆ ಶೇ.20ರಷ್ಟು ಹೆಚ್ಚಿಸಬೇಕು. ಜೊತೆಗೆ ಸೋಲಾರ್ ವಿದ್ಯುತ್ ಹಾಗೂ ಬಯೋ ಅನಿಲ ಉತ್ಪಾದನೆಗೆ ಹೆಚ್ವಿನ ಒತ್ತು ನೀಡಿದಲ್ಲಿ ಆಯಾ ರಾಜ್ಯಗಳೇ ಹೆಚ್ಚಿನ ಇಂಧನ ಉತ್ಪಾದನೆಗೆ ಸಹಕಾರಿಯಾಗಲಿದ್ದು, ಇದರ ಬಗ್ಗೆ ಕ್ರಮವಹಿಸಬೇಕೆಂದು ಸಲಹೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಕೋವಿಡ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯಗಳ ನಡುವಿನ ಸಮನ್ವಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ನಿರ್ವಹಿಸಲಾಗಿತ್ತು. ಯುದ್ಧದ ಸ್ಥಿತಿ ಎದುರಿಸಲು ನಾವು ಬದ್ದರಾಗಿದ್ದು, ಯಾವುದೇ ಆತಂಕ ಪಡಬೇಕಿಲ್ಲ. ರಾಜ್ಯದಲ್ಲಿ ಅಡುಗೆ ಅನಿಲ ಸಮಸ್ಯೆಗಳ ಕುರಿತು ಚರ್ಚಿಸಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬೇಕಾಗುವಷ್ಟು ಅಡುಗೆ ಅನಿಲ ಪೂರೈಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲನಿ ರಜನೀಶ್ ಸೇರಿ ಇತರರು ಇದ್ದರು.