ಹಾಲಿನ ಮೇಲೆ ಜಿಎಸ್‌ಟಿ ಇಳಿಕೆಗೆ ಕೆಎಂಎಫ್‌ ಆಗ್ರಹ

ಸಾರಾಂಶ

ವಿಧಾನಸೌಧದಲ್ಲಿ ಕಂದಾಯ ಸಚಿವ ಹಾಗೂ ಜಿಎಸ್‌ಟಿ ಕೌನ್ಸಿಲ್‌ನ ಕರ್ನಾಟಕ ಪ್ರತಿನಿಧಿಯಾಗಿರುವ ಕೃಷ್ಣಬೈರೇಗೌಡ ಅವರನ್ನು ಭೀಮಾನಾಯ್ಕ್ ಭೇಟಿ ಮಾಡಿದ್ದರು.

ಬೆಂಗಳೂರು ;  ಹಾಲಿಗೆ ಶೇ.5 ರಷ್ಟು ಜಿಎಸ್‌ಟಿ ತೆರಿಗೆಯಿದ್ದರೆ ಕಂಡೆನ್ಸ್ಡ್‌ ಹಾಲಿಗೆ (ಮಂದಗೊಳಿಸಿದ ಅಥವಾ ನೀರಿನಾಂಶ ತೆಗೆದ) ಶೇ.12 ರಷ್ಟು ದುಬಾರಿ ತೆರಿಗೆ ವಿಧಿಸಲಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ಕೇಂದ್ರದ ಮೇಲೆ ಒತ್ತಡ ಹೇರುವಂತೆ ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ನೇತೃತ್ವದ ನಿಯೋಗವು ಸಚಿವ ಕೃಷ್ಣಬೈರೇಗೌಡ ಅವರನ್ನು ಮನವಿ ಮಾಡಿದೆ.

ಬುಧವಾರ ವಿಧಾನಸೌಧದಲ್ಲಿ ಕಂದಾಯ ಸಚಿವ ಹಾಗೂ ಜಿಎಸ್‌ಟಿ ಕೌನ್ಸಿಲ್‌ನ ಕರ್ನಾಟಕ ಪ್ರತಿನಿಧಿಯಾಗಿರುವ ಕೃಷ್ಣಬೈರೇಗೌಡ ಅವರನ್ನು ಭೀಮಾನಾಯ್ಕ್ ಭೇಟಿ ಮಾಡಿದ್ದರು.

ಕಂಡೆನ್ಸ್ಡ್‌ ಹಾಲಿನ ಮೇಲಿನ ದುಬಾರಿ ತೆರಿಗೆ ಕಡಿಮೆ ಮಾಡಿದರೆ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಕ್ಕೆ (ಕೆಎಂಎಫ್‌) ಪ್ರತಿ ವರ್ಷ 30 ಕೋಟಿ ರು. ಉಳಿತಾಯವಾಗಲಿದೆ. ಹೀಗಾಗಿ ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಕೃಷ್ಣಬೈರೇಗೌಡ ಅವರಿಗೆ ಮನವಿ ಸಲ್ಲಿಸಿದ್ದಾರೆ. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್‌ ಹಾಜರಿದ್ದರು.

Share this article