ಹೊಸಕೋಟೆ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಿರಿಯ ನಾಗರಿಕರು ಒಂಟಿಯಾಗಿ ಅಥವಾ ದಂಪತಿ ಮಾತ್ರ ನೆಲೆಸಿರುವ ಅವರ ಮನದಲ್ಲಿ ಮೂಡುವ ಅಭದ್ರತೆ, ಅಸುರಕ್ಷತೆ, ಕಾಳಜಿ ವಹಿಸುವವರ ವಿಶ್ವಾಸದ ಕೊರತೆ ನೀಗಿಸಲು ಸಮುದಾಯ ಪೊಲೀಸ್ ಪರಿಕಲ್ಪನೆಯಲ್ಲಿ "ಆಸರೆ " ಎಂಬ ವಿನೂತನ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿ.ಟಿ.ಗೋವಿಂದ್ ಹೇಳಿದರು. ನಗರದ ಠಾಣೆಯಲ್ಲಿ ಮಾತನಾಡಿದ ಅವರು, ಇಲಾಖೆಯ ಮಹಾ ನಿರ್ದೇಶಕರು ಹಾಗೂ ಆರಕ್ಷಕ ಮಹಾ ನಿರೀಕ್ಷಕರು ಆದ ಡಾ. ಎಂ.ಎ.ಸಲೀಂ ಸಾಹೇಬರ ಕನಸಿನ ಯೋಜನೆ "ಆಸರೆ " ಯೋಜನೆಯನ್ನು ನಮ್ಮ ಠಾಣಾ ವ್ಯಾಪ್ತಿಯಲ್ಲಿ ಜಾರಿ ಮಾಡಲಾಗಿದೆ. ಸುರಕ್ಷೆ, ಭದ್ರತೆ, ಯೋಗಕ್ಷೇಮ, ವಿಶ್ವಾಸ ಮೂಡಿಸಿ ನೀವು ಒಂಟಿಯಲ್ಲ, ನಿಮ್ಮೊಂದಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರ ಇದೆ ಎಂಬ ನಂಬಿಕೆ ಮತ್ತು ವಿಶ್ವಾಸ ಮೂಡಿಸುವುದೇ ಈ ಯೋಜನೆಯ ಉದ್ದೇಶ ಎಂದು ಹೇಳಿದರು. ಈಗಾಗಲೆ ಠಾಣಾ ವ್ಯಾಪ್ತಿಯಲ್ಲಿ 19 ಬೀಟ್‌ಗಳಿದ್ದು ಪ್ರತಿ ಬೀಟ್‌ಗೆ ಇಬ್ಬರು ಪೊಲೀಸರನ್ನು ನೇಮಕ ಮಾಡಲಾಗಿದೆ. ಅವರಿಂದ ಪ್ರತಿ ಬೀಟ್‌ನಲ್ಲಿ ಒಂಟಿಯಾಗಿ ನೆಲೆಸಿರುವ ಹಿರಿಯ ನಾಗರಿಕರ ಮಾಹಿತಿ ಪಡೆಯಲಾಗಿದೆ. ಬೆಳಗಿನ ಸಮಯದಲ್ಲಿ ಹಿರಿಯ ನಾಗರಿಕರನ್ನು ಖುದ್ದು ಪೊಲೀಸರೇ ಭೇಟಿ ಮಾಡಿ ಅವರಿಗಿರುವ ಸಮಸ್ಯೆಗಳು, ತೊಂದರೆಗಳು ಹಾಗೂ ಸುತ್ತಮುತ್ತಲ ವಾತಾವರಣ, ಅವರ ಭದ್ರತೆ ಬಗ್ಗೆ ಕೂಲಂಕುಷ ಮಾಹಿತಿ ಪಡೆಯಲಾಗಿದೆ. ಪ್ರತಿ ಬೀಟ್‌ನಲ್ಲಿ ಅವರ ಮನೆ ಸುತ್ತಮುತ್ತ ನಿಗಾ ವಹಿಸುವುದು, ವಾರಕೊಮ್ಮೆ ಅವರನ್ನು ಬೆಳಗಿನ ಸಂದರ್ಭದಲ್ಲಿ ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿ ಆರೋಗ್ಯ ವ್ಯತ್ಯಯವಿದ್ದಲ್ಲಿ ಆ್ಯಂಬುಲೆನ್ಸ್‌ ಒದಗಿಸುವಿಕೆ ಇತ್ಯಾದಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಂಂಬಂಧಪಟ್ಟ ಬೀಟ್ ಪೊಲೀಸರ ದೂರವಾಣಿ ಸಂಖ್ಯೆ ಅವರಿಗೆ ನೀಡಿ, ಅವಶ್ಯಕತೆ ಇದ್ದಾಗ ಕರೆ ಮಾಡಲು ತಿಳಿಸಲಾಗಿದೆ ಹಾಗೂ ಪ್ರತಿ ಮೂರ್ನಾಲ್ಕು ದಿನಕ್ಕೊಮ್ಮೆ ನಾವೇ ಹಿರಿಯ ನಾಗರಿಕರಿಗೆ ಕರೆ ಮಾಡಿ ಅವರೊಂದಿಗೆ ಬಾಂಧವ್ಯ ವೃದ್ಧಿಗೆ ಮಾತುಕತೆಯೊಂದಿಗೆ ಬೆರೆಯುತ್ತೇವೆ. ಈವರೆಗೆ ಹೊಸಕೋಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೩೯ ಒಂಟಿಯಾಗಿ ನೆಲೆಸಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಪ್ರತಿಯೊಬ್ಬರನ್ನು ಪೊಲೀಸ್ ಇಲಾಖೆಯ ಬೀಟ್ ಪೊಲೀಸರು ಖುದ್ದು ಬೇಟಿ ಮಾಡಿ ಅವರಿಗೆ ಧೈರ್ಯ ತುಂಬಿದ್ದೇವೆ. ಅವರ ಕುಂದುಕೊರತೆ ಆಲಿಸುವ ಜೊತೆಗೆ ಸಮಸ್ಯೆ ಆಲಿಸಿ ಪರಿಹರಿಸುವ ಕೆಲಸ ಪ್ರಗತಿಯಲ್ಲಿದೆ ಎಂದರು.

ಫೋಟೋ: 22 ಹೆಚ್‌ಎಸ್‌ಕೆ 3

ಹೊಸಕೋಟೆಯ ಅಂಬೇಡ್ಕರ್ ಕಾಲೋನಿಯಲ್ಲಿ ವೃದ್ಧ ಒಂಟಿ ಮಹಿಳೆ ರತ್ನಮ್ಮ ಅವರನ್ನು ಹೊಸಕೋಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಬಿಟಿ ಗೋವಿಂದ್ ಭೇಟಿ ನೀಡಿ ಕುಂದು ಕೊರತೆ ಆಲಿಸಿ ಅವರಿಗೆ ಧೈರ್ಯ ತುಂಬಿದರು. ಬೀಟ್ ಪೊಲೀಸ್ ಜಗದೀಶ್ ಹಾಜರಿದ್ದರು.