ಕೆಎಂಎಫ್‌ ಅಧ್ಯಕ್ಷ ಗಾದಿಗೂ ಬಣ ರಾಜಕೀಯ ಕರಿನೆರಳು

Published : Jul 31, 2025, 07:40 AM IST
KMF

ಸಾರಾಂಶ

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌)ದ ನೂತನ ಅಧ್ಯಕ್ಷರ ಆಯ್ಕೆಗೆ ಆಗಸ್ಟ್‌ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್‌ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕುತೂಹಲದ ಸಂಗತಿಯೆಂದರೆ, ಈ ಚುನಾ‍ವಣೆ ವಿಚಾರದಲ್ಲೂ ಕಾಂಗ್ರೆಸ್‌ ಬಣ ರಾಜಕಾರಣ ಆರಂಭಗೊಂಡಿರುವ ಸೂಚನೆಗಳಿವೆ

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌)ದ ನೂತನ ಅಧ್ಯಕ್ಷರ ಆಯ್ಕೆಗೆ ಆಗಸ್ಟ್‌ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್‌ ಆರಂಭದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ. ಕುತೂಹಲದ ಸಂಗತಿಯೆಂದರೆ, ಈ ಚುನಾ‍ವಣೆ ವಿಚಾರದಲ್ಲೂ ಕಾಂಗ್ರೆಸ್‌ ಬಣ ರಾಜಕಾರಣ ಆರಂಭಗೊಂಡಿರುವ ಸೂಚನೆಗಳಿವೆ.

ಹಾಲಿ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಹಾಗೂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಭೀಮಾನಾಯ್ಕ್‌ ಅಧ್ಯಕ್ಷ ಸ್ಥಾನದ ಅವಧಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಕೆಎಂಎಫ್‌ ನೂತನ ಅಧ್ಯಕ್ಷ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳಬೇಕಿದ್ದು, ಆ.11ರಿಂದ 21ರವರೆಗೆ ನಡೆಯಲಿರುವ ವಿಧಾನಸಭೆ ಅಧಿವೇಶನದ ಬಳಿಕ ಚುನಾವಣೆ ನಡೆಯುವ ಸಾಧ್ಯತೆ ಇದೆ. ಕೆಎಂಎಫ್‌ ಮೂಲಗಳ ಪ್ರಕಾರ ಆಗಸ್ಟ್‌ ಅಂತ್ಯಕ್ಕೆ ಇಲ್ಲವೇ ಸೆಪ್ಟೆಂಬರ್‌ ಆರಂಭದಲ್ಲಿ ಚುನಾವಣೆ ನಡೆಯಲಿದೆ.

ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಪ್ರಬಲ ಆಕಾಂಕ್ಷಿಯಾಗಿ ಈಗಾಗಲೇ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ನಡೆದ ಬಮೂಲ್‌ ನಿರ್ದೇಶಕರ ಚುನಾವಣೆಯಲ್ಲೂ ಅವಿರೋಧವಾಗಿ ಆಯ್ಕೆಯಾಗಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಈ ನಡುವೆ ಕಳೆದ ಬಾರಿಯೇ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಮಾಲೂರು ಕ್ಷೇತ್ರದ ಶಾಸಕ ಕೆ.ವೈ.ನಂಜೇಗೌಡ ಅವರು ಈ ಬಾರಿ ಕೆಎಂಎಫ್‌ ಅಧ್ಯಕ್ಷಕ್ಕೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ, ಕೋಲಾರ ಹಾಲು ಒಕ್ಕೂಟದ (ಕೋಮೂಲ್‌) ಚುನಾವಣೆಯಲ್ಲಿ ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯೂ ಆಗಿದ್ದಾರೆ. ಇನ್ನು ಭೀಮಾನಾಯ್ಕ್‌ ಅವರು ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಮುಂದುವರೆಯಲು ಒಲವು ತೋರಿದ್ದಾರೆ. ಈ ಗುಂಪಿಗೆ ಹೊಸ ಸೇರ್ಪಡೆ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್‌.

ಕಳೆದ ಬಾರಿಯೂ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್‌ ಬೇಡಿಕೆ ಇಟ್ಟಿದ್ದರು. ಆದರೆ, ಸಿಎಂ ಆಪ್ತ ಭೀಮಾ ನಾಯ್ಕ್‌ ಅವರಿಗೆ ಅವಕಾಶ ಸಿಕ್ಕಿತ್ತು. ಆದ್ದರಿಂದ ಈ ಬಾರಿ ಅಧ್ಯಕ್ಷ ಸ್ಥಾನದ ಮೇಲೆ ಹಿಟ್ನಾಳ್ ಕಣ್ಣಿಟ್ಟಿದ್ದಾರೆ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವಿಭಾಗದ ಹಾಲು ಒಕ್ಕೂಟದ ಚುಕ್ಕಾಣಿ ಹಿಡಿದಿರುವ ಹಿಟ್ನಾಳ್, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆಯಲ್ಲಿ ಪೈಪೋಟಿ ನೀಡಲು ಆರಂಭಿಸಿದ್ದಾರೆ. ಈ ಕುರಿತು ಪ್ರಭಾವಿ ಸಚಿವ ಸತೀಶ್‌ ಜಾರಕಿಹೊಳಿ ಜತೆಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮತದಾನ?:

ಸಾಮಾನ್ಯವಾಗಿ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆಯೋ ಆ ಪಕ್ಷ ಬೆಂಬಲಿತ ಹಾಲು ಒಕ್ಕೂಟಗಳ ನಿರ್ದೇಶಕನೊಬ್ಬನನ್ನು ಕೆಎಂಎಫ್‌ ಅಧ್ಯಕ್ಷ ಸ್ಥಾನ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಇದಕ್ಕೆ ವಿರುದ್ಧವಾಗಿ ಚುನಾವಣೆಯಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ನಾಲ್ವರೂ ಕಾಂಗ್ರೆಸ್‌ ಪಕ್ಷದವರೇ ಆಗಿದ್ದಾರೆ. ಆದರೆ, ಬಣ ರಾಜಕೀಯದಿಂದ ಯಾರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬುದು ನಾಯಕರಿಗೂ ಕಗ್ಗಂಟಾಗಲಿದೆ. ಹಾಗಾಗಿ ಚುನಾವಣೆಯಲ್ಲಿ ಮತದಾನದ ಮೂಲಕ ಅಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆ ಇದೆ.

ಪಕ್ಷಗಳ ಬಲಾಬಲ:

ಸದ್ಯ ರಾಜ್ಯದಲ್ಲಿ ಬೆಂಗಳೂರು, ಹಾಸನ, ಶಿವಮೊಗ್ಗ, ಮಂಡ್ಯ, ಕೋಲಾರ ಸೇರಿ ಒಟ್ಟು 16 ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳು ಇವೆ. ಈ ಪೈಕಿ ಚಿಕ್ಕಬಳ್ಳಾಪುರ ಒಕ್ಕೂಟದ ನಿರ್ದೇಶಕರ ಚುನಾವಣೆ ನಡೆಯಬೇಕಿದೆ. ಉಳಿದಂತೆ 15 ಒಕ್ಕೂಟಗಳಲ್ಲಿ ಹಾಸನ ಮತ್ತು ಬೆಳಗಾವಿ ಹಾಲು ಒಕ್ಕೂಟಗಳನ್ನು ಹೊರತುಪಡಿಸಿ ಉಳಿದ 13 ಒಕ್ಕೂಟಗಳಲ್ಲಿ ಕಾಂಗ್ರೆಸ್‌ ಬೆಂಬಲಿತರೇ ಇದ್ದಾರೆ. ಹಾಸನದಲ್ಲಿ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಮತ್ತು ಬೆಳಗಾವಿಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಅಧ್ಯಕ್ಷರಾಗಿದ್ದಾರೆ.

ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ಯಾರೇ ಚುನಾವಣೆಯಲ್ಲಿ ಸ್ಪರ್ಧಿಸಿದರೂ ಹೆಚ್ಚು ಮತಗಳನ್ನು ಪಡೆಯಲು ಯಾರು ಶಕ್ತರಾಗುತ್ತಾರೋ ಅವರೇ ಕೆಎಂಎಫ್‌ ಗದ್ದುಗೆ ಏರಲಿದ್ದಾರೆ. ಈ ನಡುವೆ, ರಾಜಕೀಯ ಮೇಲಾಟದಲ್ಲಿ ಯಾವ ಬದಲಾವಣೆಯಾಗುತ್ತದೆ ಕಾದು ನೋಡಬೇಕಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''
ಗ್ರೇಟರ್‌ ಬೆಂಗಳೂರು ಪ್ರಾಧಿಕಾರಕ್ಕೆ 58 ಮಾದರಿಯ ಕರಡು ಲೋಗೋ ಸಿದ್ಧ!