ಕೆಪಿಎಸ್ಸಿ ಅಧ್ಯಕ್ಷ ಸಾಹುಕಾರ್‌ ಭವಿಷ್ಯ ಗೌರ್‍ನರ್‌ ಅಂಗಳದಲ್ಲಿ

Published : Jul 05, 2026, 07:48 AM IST
KPSC Chairman Shivashankarappa S Sahukar Faces Allegations Over Daughters Recruitment in Industrial Department

ಸಾರಾಂಶ

ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಭವಿಷ್ಯ ರಾಜ್ಯಪಾಲರು ನಿರ್ಧರಿಸುವ ನಿರ್ಣಾಯಕ ಹಂತ ತಲುಪಿದೆ.

  ಬೆಂಗಳೂರು :  ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿ ಪಕ್ಷಪಾತ, ಅಕ್ರಮ ಎಸಗಿದ ಆರೋಪ ಹೊತ್ತಿರುವ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಅವರ ಭವಿಷ್ಯ ರಾಜ್ಯಪಾಲರು ನಿರ್ಧರಿಸುವ ನಿರ್ಣಾಯಕ ಹಂತ ತಲುಪಿದೆ. ರಾಜ್ಯಪಾಲರಾದ ಥಾವರ್‌ಚಂದ್‌ ಗೆಹಲೋತ್‌ ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದರತ್ತ ಎಲ್ಲರ ಗಮನ ನೆಟ್ಟಿದೆ.

ಕೆಪಿಎಸ್ಸಿ ಅಧ್ಯಕ್ಷರು ಅವರ ಪುತ್ರಿ ಸುಮಾ ಎಸ್. ಸಾಹುಕಾರ್ ಅವರಿಗೆ ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆ ಕೊಡಿಸಲು ಸುಳ್ಳು ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ದಾಖಲೆ ಪರಿಶೀಲನೆವರೆಗೂ ನೇಮಕಾತಿಯ ಎಲ್ಲ ಪ್ರಕ್ರಿಯೆಗಳಲ್ಲೂ ಅಧ್ಯಕ್ಷರು ಪಾಲ್ಗೊಂಡಿದ್ದರು. ದಾಖಲೆ ಪರಿಶೀಲನೆ ವೇಳೆ ಸುಳ್ಳು ಪ್ರಮಾಣ ಪತ್ರ ಹಾಗೂ ಅದು ಅವರ ಪುತ್ರಿ ಎಂಬುದು ಗಮನಕ್ಕೆ ಬಂದ ಮೇಲೆ ಜೂ.19ರ ಸಭೆಯಿಂದ ದೂರ ಉಳಿಯುವುದಾಗಿ ಅಧ್ಯಕ್ಷರು ಪತ್ರ ನೀಡಿದ್ದಾರೆ. ಇದು ಅಕ್ರಮವಾಗಿದ್ದು, ಅವರು ಅಧ್ಯಕ್ಷರ ಹುದ್ದೆಯಲ್ಲಿ ಮುಂದುವರೆಯುವುದು ಇತರ ಸದಸ್ಯರನ್ನು ಅನುಮಾನ ದೃಷ್ಟಿಯಿಂದ ನೋಡುವಂತೆ ಮಾಡುತ್ತದೆ. ಅವರು ರಾಜೀನಾಮೆ ನೀಡಲಿ ಎಂದು ಆಯೋಗದ ಸದಸ್ಯರು ನಿರ್ಣಯಿಸಿದ್ದಾರೆ.

ಪ್ರಕರಣ ಇತ್ಯರ್ಥವಾಗುವವರೆಗೆ ನೇಮಕಾತಿ ಪ್ರಕ್ರಿಯೆಗಳಿಂದ ಅಧ್ಯಕ್ಷರನ್ನು ದೂರವಿಡಬೇಕು. ಸುಮಾ ಎಸ್. ಸಾಹುಕಾರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಳ್ಳು ಆದಾಯ ಪ್ರಮಾಣ ಪತ್ರ ಪಡೆಯಲು ಸಹಕರಿಸಿದವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು. ಕೂಡಲೇ ಸರ್ಕಾರಕ್ಕೆ ಈ ಕುರಿತ ವಿವರವಾದ ವರದಿ ಕಳುಹಿಸಬೇಕು ಎಂದೂ ಆಯೋಗದ ಸದಸ್ಯರ ಸಭೆ ನಿರ್ಣಯಿಸಿ ರಾಜ್ಯಪಾಲರ ಗಮನಕ್ಕೂ ತಂದಿದೆ. ಇದಾದ ನಂತರ ರಾಜ್ಯಪಾಲರು ಆಯೋಗದ ಕಾರ್ಯದರ್ಶಿ ಜ್ಯೋತಿ ಅವರನ್ನು ಕರೆಯಿಸಿಕೊಂಡು ಪ್ರಕರಣದ ಸಂಪೂರ್ಣ ವಿವರ, ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಈ ನಡುವೆ ಜೂ.19ರ ಸಭೆಯ ನಡಾವಳಿಗಳ ವರದಿ ಈಗ ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರಿಗೆ ಸಲ್ಲಿಕೆಯಾಗಿದೆ. ಅವರು ಸಹಿ ಹಾಕಿದ ನಂತರ ನಡಾವಳಿ ಸೇರಿ ವಿವರವಾದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಸಭೆಯ ನಿರ್ಣಯ ಕುರಿತು ಪ್ರತಿಕ್ರಿಯೆಗಾಗಿ ‘ಕನ್ನಡಪ್ರಭ’ವು ಕೆಪಿಎಸ್ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಸಂಪರ್ಕಿಸಿದಾಗ, ನನ್ನ ರಾಜೀನಾಮೆ ಕೇಳಲು ಅವರಾರು? ಈಗಾಗಲೇ ಪತ್ರಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ. ಮತ್ತೆ ಮತ್ತೆ ಕೇಳಬೇಡಿ ಎಂದು ಕರೆ ಕಡಿತಗೊಳಿಸಿದರು.

ಸರ್ಕಾರ ಏನು ಮಾಡಬಹುದು?:

ಈ ಎಲ್ಲ ಘಟನೆಗಳ ಕುರಿತು ತುರ್ತಾಗಿ ಆಯೋಗದ ಕಾರ್ಯದರ್ಶಿಗಳಿಂದ ವರದಿ ತರಿಸಿಕೊಳ್ಳಬಹುದು. ಮುಖ್ಯಮಂತ್ರಿಗಳು ನೇರವಾಗಿ ಕೆಪಿಎಸ್ಸಿ ಅಧ್ಯಕ್ಷರನ್ನು ಕರೆಸಿ ಮಾತನಾಡಿ, ರಾಜೀನಾಮೆ ನೀಡುವಂತೆ ಸಲಹೆ ಕೊಡಬಹುದು. ಸ್ವಯಂ ಪ್ರೇರಿತರಾಗಿ ರಾಜ್ಯಪಾಲರಿಗೆ ಕೆಪಿಎಸ್ಸಿ ಅಧ್ಯಕ್ಷರ ಕುರಿತು ಅಭಿಪ್ರಾಯಗಳನ್ನು ಕಳುಹಿಸಬಹುದು.

ರಾಜೀನಾಮೆ ನೀಡ್ತಾರಾ?

ಈ ಎಲ್ಲ ಪ್ರಕ್ರಿಯೆಗಳು ನಡೆಯುವ ತನಕ ಕಾದು ಕೂರದೆ ಕೆಪಿಎಸ್ಸಿ ಅಧ್ಯಕ್ಷರು ರಾಜೀನಾಮೆ ನೀಡಲೂಬಹುದು. ಸುಳ್ಳು ಆದಾಯ ಪ್ರಮಾಣ ಪತ್ರ ಮಾತ್ರವಲ್ಲದೆ, ಸುಮಾ ಅವರು ಸಲ್ಲಿಸಿರುವ ಪದವಿ ಪ್ರಮಾಣ ಪತ್ರದ ಕುರಿತೂ ಆಯೋಗಕ್ಕೆ ಕೆಲ ಸಂಶಯಗಳಿವೆ. ಸಾಮಾನ್ಯ ಅಭ್ಯರ್ಥಿಗಳ ಮೇಲಾಗುವಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿ ತನಿಖೆ ನಡೆಸುವ ಪ್ರಕ್ರಿಯೆಯಿಂದ ಅಲ್ಪಮಟ್ಟಿಗೆ ರಕ್ಷಣೆ ಪಡೆಯಲು ರಾಜೀನಾಮೆ ನೀಡದೆ ಮುಂದುವರೆಯುವ ಸಾಧ್ಯತೆಯೇ ಹೆಚ್ಚಾಗಿದೆ.

ಏನು ಮಾಡಬಹುದು?

1. ಕೆಪಿಎಸ್ಸಿ ಅಧ್ಯಕ್ಷರನ್ನು ನೇರವಾಗಿ ಪದಚ್ಯುತಗೊಳಿಸುವ ಅಧಿಕಾರ ದೇಶದ ರಾಷ್ಟ್ರಪತಿಗಳಿಗೆ ಮಾತ್ರವೇ ಇದೆ

2. ಆಯೋಗದ ಸದಸ್ಯರ ನಿರ್ಣಯದ ಆಧರಿಸಿ ಅಧ್ಯಕ್ಷರನ್ನು ಗೌರ್ನರ್ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಬಹುದು

3. ಪದಚ್ಯುತಗೊಳಿಸುವಂತೆ ರಾಷ್ಟ್ರಪತಿಗೆ ಶಿಫಾರಸು ಮಾಡಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಸೂಚಿಸಬಹುದು

4. ಕೆಪಿಎಸ್‌ಸಿ ಅಧ್ಯಕ್ಷರ ವಿಚಾರವಾಗಿ ರಾಜ್ಯ ಸರ್ಕಾರದ ಜತೆ ಚರ್ಚಿಸಿ ಅಭಿಪ್ರಾಯವನ್ನು ಸಂಗ್ರಹ ಮಾಡಬಹುದು

5. ತನಿಖಾ ವರದಿಯೊಂದಿಗೆ ಕೆಪಿಎಸ್ಸಿ ಅಧ್ಯಕ್ಷರ ಪದಚ್ಯುತಿಗೊಳಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಕಳುಹಿಸಬಹುದು

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗೊಂದಲ ಬೆನ್ನಲ್ಲೇ ಕೇಂದ್ರ ಆಯೋಗದ ತಂಡ ನಾಳೆ ರಾಜ್ಯಕ್ಕೆ
SIRನಲ್ಲಿ ಗೊಂದಲ: ಚುನಾವಣಾಧಿಕಾರಿಗೆ ಬಿಜೆಪಿ ದೂರು