ನಂಗೆ ಗೊತ್ತಿಲ್ಲ, ಏನಿದ್ದರೂ ಸಾಹುಕಾರ್‌ ಕೇಳಿ: ಕೆಪಿಎಸ್ಸಿ ಸದಸ್ಯೆ ಗೀತಾ

Published : Oct 12, 2026, 09:33 AM IST
KPSC Scam

ಸಾರಾಂಶ

ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಪಶುವೈದ್ಯಾಧಿಕಾರಿಗಳ ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಪ್ರಕರಣದ ಪ್ರಮುಖ ಆರೋಪಿಗಳಾದ ಶಿವಶಂಕರಪ್ಪ ಸಾಹುಕಾರ್ ಹಾಗೂ ಕೆಪಿಎಸ್‌ಸಿ ಸದಸ್ಯೆ ಬಿ.ವಿ.ಗೀತಾ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಇಬ್ಬರೂ ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಪ್ರಕರಣದಲ್ಲಿ ತಮ್ಮ ಪಾತ್ರವನ್ನು ಗೀತಾ ಸಂಪೂರ್ಣವಾಗಿ ನಿರಾಕರಿಸುತ್ತಿದ್ದು, ತಮಗೂ ಈ ಹಗರಣಕ್ಕೂ ಯಾವುದೇ ಸಂಬಂಧವಿಲ್ಲ. ನೀವು ಏನಾದರೂ ಕೇಳುವುದಿದ್ದರೆ ಕೆಪಿಎಸ್‌ಸಿ ಮಾಜಿ ಅಧ್ಯಕ್ಷರಾದ ಶಿವಶಂಕರಪ್ಪ ಸಾಹುಕಾರ್‌ ಅವರನ್ನೇ ಕೇಳಿ. ನಾನೊಬ್ಬ ಸದಸ್ಯೆಯಾಗಿ ಸಭೆಗಳಲ್ಲಿ ಭಾಗಿಯಾಗುತ್ತಿದ್ದೆ ಅಷ್ಟೇ. ಪರೀಕ್ಷೆಗೆ ಮೊದಲು ಮತ್ತು ಫಲಿತಾಂಶ ನಂತರ ನಡೆದ ಸಭೆಗಳಲ್ಲಿ ಭಾಗವಹಿಸಿ, ನಂತರ ದಾಖಲೆಗಳಿಗೆ ಸಹಿ ಹಾಕುತ್ತಿದ್ದೆ. ಇದು ಬಿಟ್ಟರೆ ನನಗೆ ಏನೂ ಗೊತ್ತಿಲ್ಲ ಎಂದು ಇ.ಡಿ. ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಗೀತಾರ ಹೇಳಿಕೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ. ಕೆಪಿಎಸ್‌ಸಿಯಂಥ ಉನ್ನತ ಸಂಸ್ಥೆಯ ಸದಸ್ಯರೊಬ್ಬರು ಕಣ್ಮುಚ್ಚಿ ಕಡತಗಳಿಗೆ ಸಹಿ ಹಾಕಿದ್ದಾರೆ ಎಂಬುದನ್ನು ಒಪ್ಪುವುದು ಹೇಗೆ ಎಂದು ತನಿಖಾಧಿಕಾರಿಗಳು ಪ್ರಶ್ನಿಸಿದ್ದಾರೆ.

ಇನ್ನು ಇ.ಡಿ. ಅಧಿಕಾರಿಗಳು ಈಗಾಗಲೇ ಶಿವಶಂಕರಪ್ಪ ಸಾಹುಕಾರ್ ಮತ್ತು ಗೀತಾ ನಡುವೆ ನಡೆದಿರುವ ಹಣಕಾಸು ವ್ಯವಹಾರಗಳ ಕುರಿತು ಹಲವು ಮಾಹಿತಿ ಕಲೆಹಾಕಿದ್ದಾರೆ. ಈ ವ್ಯವಹಾರಗಳಿಗೆ ಸಂಬಂಧಿಸಿ ಹಲವು ಮಹತ್ವದ ದಾಖಲೆಗಳನ್ನು ಸಹ ಸಂಗ್ರಹಿಸಲಾಗಿದೆ. ಜತೆಗೆ ಅಭ್ಯರ್ಥಿಗಳಿಂದ ಹಾಗೂ ಅವರ ಪಾಲಕರಿಂದ ಹೇಗೆ ಹಣ ಸಂಗ್ರಹಿಸಲಾಗಿದೆ ಎಂಬ ವಿವರಗಳನ್ನೂ ಸಹ ಪತ್ತೆ ಹಚ್ಚಿದ್ದಾರೆ.

ಸಾಕ್ಷ್ಯಾಧಾರ ಮುಂದಿಟ್ಟು ವಿಚಾರಣೆಗೆ ಸಿದ್ಧತೆ:

ಕೆಪಿಎಸ್‌ಸಿ ಸದಸ್ಯರು ಮತ್ತು ಆಗಿನ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅಭ್ಯರ್ಥಿಗಳು ಹಾಗೂ ಅವರ ಪಾಲಕರೊಂದಿಗೆ ಸಂಪರ್ಕ ಸಾಧಿಸಿ, ಹಣ ಸಂಗ್ರಹಿಸಲು ಹೇಗೆ ಯೋಜನೆ ರೂಪಿಸಿದ್ದರು ಮತ್ತು ಯಾವ ರೀತಿ ಮಾತುಕತೆ ನಡೆಸಿದ್ದರು ಎಂಬ ಮಾಹಿತಿಯೂ ಅಧಿಕಾರಿಗಳ ಬಳಿಯಿದೆ.

ಸದ್ಯ ಪ್ರಾಥಮಿಕ ವಿಚಾರಣೆ

ಸದ್ಯ ಪ್ರಾಥಮಿಕ ವಿಚಾರಣೆ ನಡೆಯುತ್ತಿದ್ದು, ಈ ವೇಳೆ ಇಬ್ಬರೂ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ಹೀಗಾಗಿ ಮುಂದಿನ ಹಂತದಲ್ಲಿ ಸಂಗ್ರಹಿಸಿರುವ ಎಲ್ಲಾ ಸಾಕ್ಷ್ಯಾಧಾರಗಳನ್ನು ಆರೋಪಿಗಳ ಮುಂದೆ ಇಟ್ಟು ಮತ್ತಷ್ಟು ತೀವ್ರ ವಿಚಾರಣೆ ನಡೆಸಲು ಇ.ಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯದಲ್ಲೇ ಪ್ರಕರಣದಲ್ಲಿ ಭಾಗಿಯಾಗಿರುವ ಹಾಲಿ ಮತ್ತು ಮಾಜಿ ಸದಸ್ಯರಿಗೂ ಹಾಗೂ ಅಕ್ರಮದಲ್ಲಿ ಎಸಗಿರುವ ಕೆಲ ಅಭ್ಯರ್ಥಿಗಳಿಗೆ ಸಮನ್ಸ್‌ ನೀಡಿ ವಿಚಾರಣೆ ನಡೆಸಲಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜಿಬಿಎ 2.0 ತಂತ್ರಾಂಶ ಅಪ್‌ಡೇಟ್‌ ಆಗದೆ ಸಮಸ್ಯೆ
ಹೆಸರು ಡಿಲೀಟ್‌ ಸರ್ವಾಧಿಕಾರಿ ಧೋರಣೆ : ಡಿಕೆಶಿ