ಜೂ.11 ಕ್ಕೆ ಕುಸುಮ್‌-ಸಿ ಯೋಜನೆಗೆ ಚಾಲನೆ : ರೈತರಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್

Published : Jun 10, 2025, 09:47 AM IST
KJ George

ಸಾರಾಂಶ

ರೈತರಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸುವ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.11ರಂದು ಗೌರಿಬಿದನೂರಿನಲ್ಲಿ ಅಧಿಕೃತ ಚಾಲನೆ

  ಬೆಂಗಳೂರು :  ರಾಜ್ಯದಲ್ಲಿ ಕುಸುಮ್‌-ಸಿ ಯೋಜನೆ ಮೂಲಕ ಡಿಸೆಂಬರ್‌ ವೇಳೆಗೆ 2,400 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿ ಹೊಂದಿದ್ದು, ರೈತರಿಗೆ ಹಗಲಿನ ವೇಳೆಯೇ ಸಮರ್ಪಕ ವಿದ್ಯುತ್ ಪೂರೈಸುವ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೂ.11ರಂದು ಗೌರಿಬಿದನೂರಿನಲ್ಲಿ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ಪ್ರತಿ ಮೆ.ವ್ಯಾಟ್‌ ವಿದ್ಯುತ್ ಉತ್ಪಾದನೆಗೆ ₹3-4 ಕೋಟಿ ವೆಚ್ಚ ತಗುಲುತ್ತದೆ. ಈ ಪೈಕಿ ₹1 ಕೋಟಿ ಕೇಂದ್ರ ಸರ್ಕಾರ ಸಬ್ಸಿಡಿ ನೀಡುತ್ತದೆ. ಸದ್ಯ ಟೆಂಡರ್‌ ಕರೆದು 2,400 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಘಟಕಗಳ ಅಳವಡಿಕೆಗೆ ನಿರ್ಧರಿಸಿದ್ದು, ₹9,500 ಕೋಟಿಯಿಂದ ₹10,000 ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದು ಹೇಳಿದರು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಜೂ.11ರಂದು ಬುಧವಾರ ಬೆಳಗ್ಗೆ 10.30ಕ್ಕೆ ಗೌರಿಬಿದನೂರಿನ ನೇತಾಜಿ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿಯವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕುಸುಮ್‌-ಸಿ ಯೋಜನೆಯಡಿ ನೀರಾವರಿಗೆ ವಿದ್ಯುತ್ ಪೂರೈಸುವ ಫೀಡರ್‌ಗಳ ಬಳಿ ಸೋಲಾರ್ ಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಉತ್ಪಾದಿಸಲಾಗುವುದು. ಬಳಿಕ ಅಲ್ಲಿಂದ ಫೀಡರ್‌ಗಳ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಒದಗಿಸಲಾಗುವುದು. ಸ್ಥಳೀಯವಾಗಿಯೇ ವಿದ್ಯುತ್ ಉತ್ಪಾದಿಸಿ ಪೂರೈಸುವುದರಿಂದ ಗುಣಮಟ್ಟದ ವಿದ್ಯುತ್ ಲಭ್ಯವಾಗುತ್ತದೆ. ಟ್ರಾನ್ಸ್‌ಫರ್ಮರ್‌ಗಳ ಮೇಲಿನ ಹೊರೆಯೂ ಇದರಿಂದ ತಗ್ಗುತ್ತದೆ ಎಂದರು. ಗೌರಿಬಿದನೂರು ತಾಲೂಕಿನ ತೊಂಡೇಬಾವಿ ಹೋಬಳಿ ಹನುಮೇನಹಳ್ಳಿ ಮತ್ತು ಚರಕಮಟ್ಟೇನಹಳ್ಳಿಯ ಸುಮಾರು 60 ಎಕರೆ ಪ್ರದೇಶದಲ್ಲಿ 20 ಮೆ.ವ್ಯಾ. ಸಾಮರ್ಥ್ಯದಲ್ಲಿ ಸೋಲಾರ್ ಘಟಕ ಸ್ಥಾಪಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ ಕುಸುಮ್- ಸಿ ಯೋಜನೆಯಡಿ ಸ್ಥಾಪಿಸಲಾಗಿರುವ ಅತಿದೊಡ್ಡ ಘಟಕವಿದು. ಹೀಗಾಗಿ ಗೌರಿಬಿದನೂರಿನಲ್ಲಿ ಯೋಜನೆ ಉದ್ಘಾಟಿಸಲು ನಿರ್ಧರಿಸಲಾಗಿದೆ. ಇಲ್ಲಿ ಖಾಸಗಿ ಜಮೀನನ್ನು 25 ವರ್ಷಕ್ಕೆ ಭೋಗ್ಯಕ್ಕೆ ಪಡೆಯಲಾಗಿದೆ ಎಂದು ಜಾರ್ಜ್‌ ವಿವರಿಸಿದರು.

6.19 ಲಕ್ಷ ಪಂಪ್‌ಸೆಟ್‌ಗಳಿಗೆ ವಿದ್ಯುತ್: 2,400 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯಿಂದ 6.19 ಲಕ್ಷ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ವೇಳೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದು. ಈಗಾಗಲೇ ಸುಮಾರು 200 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೆಲವೇ ತಿಂಗಳಲ್ಲಿ 93 ಸ್ಥಳಗಳಲ್ಲಿ 545 ಮೆ.ವ್ಯಾ. ಸಾಮರ್ಥ್ಯದ ಸೋಲಾರ್ ಘಟಕಗಳು ಚಾಲನೆಗೊಳ್ಳಲಿವೆ. ಡಿಸೆಂಬರ್-2025ರ ವೇಳೆಗೆ 2,400 ಮೆ.ವ್ಯಾ. ಸಾಮರ್ಥ್ಯದ ಸೌರ ಘಟಕಗಳ ಸ್ಥಾಪನೆ ಗುರಿ ಸಾಧಿಸುತ್ತೇವೆ. ಖಾಸಗಿಯವರು ಸೌರ ಘಟಕ ಸ್ಥಾಪಿಸಿ ವಿದ್ಯುತ್‌ ಉತ್ಪಾದಿಸುತ್ತಾರೆ. ಅದನ್ನು ಕೆಇಆರ್‌ಸಿ ನಿಗದಿ ಮಾಡಿರುವಂತೆ ₹3.17 ಪ್ರತಿ ಯನಿಟ್‌ನಂತೆ ಖರೀದಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸರ್ಕಾರದ ಜಮೀನು ಉಚಿತವಾಗಿ ನೀಡಲು ಸೂಚನೆ:

ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆಗೆ 4 ಎಕರೆ ಭೂಮಿ ಅಗತ್ಯ. ಸರ್ಕಾರಿ ಭೂಮಿ ಲಭ್ಯವಿದ್ದರೆ ಉಚಿತವಾಗಿ ನೀಡಲು ಮುಖ್ಯಮಂತ್ರಿ ಆದೇಶಿಸಿದ್ದಾರೆ. ಆದರೆ, ಆ ಭೂಮಿಗೆ ಪ್ರತಿ ಎಕರೆಗೆ ₹25 ಸಾವಿರವನ್ನು ಖಾಸಗಿ ವಿದ್ಯುತ್ ಉತ್ಪಾದಕರು ಪಾವತಿಸಬೇಕು. ಆ ಮೊತ್ತವನ್ನು ಜಿಲ್ಲಾಧಿಕಾರಿಗಳ ಬಳಿ ಇಟ್ಟು ಉಪ ಕೇಂದ್ರ ಇರುವ ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಖಾಸಗಿ ಭೂಮಿಯಾಗಿದ್ದರೆ, ವಿದ್ಯುತ್ ಉತ್ಪಾದನೆ ಗುತ್ತಿಗೆ ಪಡೆದ ಡೆವಲಪರ್‌ಗಳು ಗುತ್ತಿಗೆಗೆ ತೆಗೆದುಕೊಂಡು, ಭೂಮಾಲೀಕರಿಗೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡುತ್ತಾರೆ ಎಂದು ಕೆ.ಜೆ.ಜಾರ್ಜ್‌ ತಿಳಿಸಿದರು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ। ಎನ್‌.ಶಿವಶಂಕರ್, ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ರುದ್ರಪ್ಪಯ್ಯ ಹಾಜರಿದ್ದರು.

PREV
Read more Articles on

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು