ಜೂ.30ರೊಳಗೆ ಶೇ.100 ಪಡಿತರ ಚೀಟಿದಾರರ ಇ-ಕೆವೈಸಿಗೆ ಸೂಚನೆ

Published : Jun 10, 2025, 09:13 AM IST
Ration Card

ಸಾರಾಂಶ

ಆಧಾರ್‌ ಸೀಡಿಂಗ್‌ ಮತ್ತು ಇ-ಕೆವೈಸಿಯನ್ನು ಜೂ.30ರೊಳಗೆ ಶೇ.100ರಷ್ಟು ಪೂರ್ಣಗೊಳಿಸಿ, ಅನರ್ಹ ಪಡಿತರ ಫಲಾನುಭವಿಗಳನ್ನು ಗುರುತಿಸಿ ಅಂಥವರಿಗೆ ಹಂಚಿಕೆಯಾಗಿರುವ ಆಹಾರ ಧಾನ್ಯವನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.

  ಬೆಂಗಳೂರು : ರಾಜ್ಯದ ಎಲ್ಲ ಪಡಿತರ ಚೀಟಿದಾರರ ಆಧಾರ್‌ ಸೀಡಿಂಗ್‌ ಮತ್ತು ಇ-ಕೆವೈಸಿಯನ್ನು ಜೂ.30ರೊಳಗೆ ಶೇ.100ರಷ್ಟು ಪೂರ್ಣಗೊಳಿಸಿ, ಅನರ್ಹ ಪಡಿತರ ಫಲಾನುಭವಿಗಳನ್ನು ಗುರುತಿಸಿ ಅಂಥವರಿಗೆ ಹಂಚಿಕೆಯಾಗಿರುವ ಆಹಾರ ಧಾನ್ಯವನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಆದೇಶಿಸಿದೆ.

ಈ ಸಂಬಂಧ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಮನೋಜ್‌ ಜೈನ್‌ ಅವರು ಇಲಾಖೆಯ ಎಲ್ಲ ಜಿಲ್ಲಾ ಜಂಟಿ/ಉಪನಿರ್ದೇಶಕರುಗಳಿಗೆ ಸೋಮವಾರ ಬರೆದಿರುವ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

ಕೇಂದ್ರ ಸರ್ಕಾರ ಮೇ 30ರಂದು ನೀಡಿರುವ ನಿರ್ದೇರ್ಶನದಲ್ಲಿ ಪಡಿತರ ಚೀಟಿದಾರರ ಶೇ.100ರಷ್ಟು ಆಧಾರ್‌ ಸೀಡಿಂಗ್‌ ಮತ್ತು ಇ-ಕೆವೈಸಿಯನ್ನು ಜೂನ್‌ 30ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿರುವ ಈ ಹಿನ್ನೆಲೆಯಲ್ಲಿ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

ಪಡಿತರ ಫಲಾನುಭವಿಗಳು ಬಯೋಮೆಟ್ರಿಕ್‌ ನೀಡುವಾಗ ನಿಜವಾಗಿ ಬೆರಳಿನಲ್ಲಿರುವ ರೇಖೆಗಳು ಮುದ್ರಣವಾಗದಿದ್ದಲ್ಲಿ, ಅಂತಹ ಪಡಿತರ ಫಲಾನುಭವಿಗಳ ಹೆಸರನ್ನು ಪಟ್ಟಿ ಮಾಡಿ ಅವರನ್ನು ಶೇ.2ರಷ್ಟು ಭೌತಿಕವಾಗಿ ಪರಿಶೀಲಿಸಿ ವಿನಾಯಿತಿ ನೀಡುವಂತೆ ಹಾಗೂ ಅಂತಹ ಫಲಾನುಭವಿಗಳು ತಪ್ಪು ಮಾಹಿತಿ ನೀಡಿ ಇ-ಕೆವೈಸಿ ಮಾಡಿಸಿದ್ದಲ್ಲಿ ಸಂಬಂಧಪಟ್ಟ ಜಿಲ್ಲೆಗಳ ಜಂಟಿ/ಉಪನಿರ್ದೇಶಕರು ಜವಾಬ್ದಾರಿ ಎಂದು ತಿಳಿಸಲಾಗಿದೆ.

ಇದನ್ನು ಹೊರತುಪಡಿಸಿ ಅನರ್ಹ ಪಡಿತರ ಫಲಾನುಭವಿಗಳನ್ನು ನಿಯಮಾನುಸಾರ ಗುರುತಿಸಿ ಏಳು ದಿನಗಳೊಳಗೆ ಇಲಾಖಾ ಆಯುಕ್ತರಿಗೆ ಮಾಹಿತಿ ಒದಗಿಸಬೇಕು. ಹಾಗೂ ಅನರ್ಹರೆಂದು ಗುರುತಿಸಿದ ಫಲಾನುಭವಿಗಳ ಆಹಾರ ಧಾನ್ಯ ಹಂಚಿಕೆ ಸ್ಥಗಿತಗೊಳಿಸಲು ಸೂಚಿಸಿದ್ದಾರೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಜೂ.2ರವರೆಗೆ ಬಾಕಿ ಇರುವ ರಾಜ್ಯದ 7,39,676 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ನಿಗದಿಪಡಿಸಿದ ಕಾಲಾವಧಿಯಲ್ಲಿ ಇದನ್ನು ಕಾರ್ಯಗತಗೊಳಸಲು ವಿಫಲವಾದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ