ಬೆಂಗಳೂರು : ನಟ ದರ್ಶನ್ ಅವರ ಮನವಿ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಬಿ.ವರದರಾಜು ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಾರಾಗೃಹಕ್ಕೆ ಭೇಟಿ ನೀಡಿದ್ದ ಅವರು ವಿಶೇಷ ಭದ್ರತಾ ವಿಭಾಗದಲ್ಲಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರ ಸೆಲ್‌ಗೆ ತೆರಳಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಕಾರಾಗೃಹ ನಿಯಾಮಾವಳಿ ಅನುಸಾರ ಕಲ್ಪಿಸಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದಿದ್ದಾರೆ. ಅಲ್ಲದೆ, ದರ್ಶನ್ ಅವರಿಂದ ಕೂಡ ವಿಚಾರಣೆ ನಡೆಸಿ ಹೇಳಿಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಕಾನೂನು ಸೇವೆಗಳ ಪ್ರಾಧಿಕಾರ ವರದಿ ಸಲ್ಲಿಸುವ ಸಾಧ್ಯತೆಗಳಿದ್ದು, ಇದನ್ನು ಪರಿಶೀಲಿಸಿ ಕಾರಾಗೃಹ ಅಧಿಕಾರಿಗಳ ವಿರುದ್ಧ ದರ್ಶನ್ ಅವರಿಗೆ ಸಲ್ಲಿಸಿರುವ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ನೀಡಬಹುದು ಎನ್ನಲಾಗಿದೆ.
ನ್ಯಾಯಾಲಯದ ಆದೇಶ ಹೊರತಾಗಿಯೂ ತಮಗೆ ಕನಿಷ್ಠ ಸೌಲಭ್ಯ ನೀಡದೆ ಕಾರಾಗೃಹ ಅಧಿಕಾರಿಗಳು ಕಡೆಗಣಿಸಿದ್ದು, ಈ ಬಗ್ಗೆ ನ್ಯಾಯಾಧೀಶರು ಖದ್ದು ಪರಿಶೀಲಿಸುವಂತೆ ದರ್ಶನ್ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ಎಸಿಎಂಎ ನ್ಯಾಯಾಲಯ, ಈ ಬಗ್ಗೆ ದರ್ಶನ್ ಅವರ ಸೆಲ್ ಪರಿಶೀಲಿಸಿ ವರದಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿಗೆ ಭೇಟಿ ನೀಡಿ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಪರಿಶೀಲಿಸಿದ್ದಾರೆ.