ಮನುಷ್ಯರಿಗೆ ಬೆರಳಚ್ಚಿನ ರೀತಿ ಪ್ರಾಣಿಗಳ ಮಾಹಿತಿಗೆ ಮೂಗಿನ ಅಚ್ಚು!

Published : May 13, 2024, 11:36 AM IST
World most unique cow will become a millionaire nelore breed from india

ಸಾರಾಂಶ

ಬೆರಳಚ್ಚಿನ ಮೂಲಕ ಮನುಷ್ಯರ ಸಂಪೂರ್ಣ ಮಾಹಿತಿ ಪಡೆಯುವ ತಂತ್ರಜ್ಞಾನ ಗೊತ್ತೇ ಇದೆ. ಇನ್ಮುಂದೆ ಈ ತಂತ್ರಜ್ಞಾನ ಜಾನುವಾರುಗಳಿಗೂ ಬರಲಿದೆ. 

ಸಂದೀಪ್‌ ವಾಗ್ಲೆ

  ಮಂಗಳೂರು :  ಬೆರಳಚ್ಚಿನ ಮೂಲಕ ಮನುಷ್ಯರ ಸಂಪೂರ್ಣ ಮಾಹಿತಿ ಪಡೆಯುವ ತಂತ್ರಜ್ಞಾನ ಗೊತ್ತೇ ಇದೆ. ಇನ್ಮುಂದೆ ಈ ತಂತ್ರಜ್ಞಾನ ಜಾನುವಾರುಗಳಿಗೂ ಬರಲಿದೆ. ಹಸು, ಎಮ್ಮೆಗಳ ಮೂಗಿನ ಅಚ್ಚನ್ನು ಸ್ಕ್ಯಾನ್‌ ಮಾಡಿದರೆ ಸಾಕು, ಆ ಜಾನುವಾರಿನ ಸಂಪೂರ್ಣ ವಿವರ ಬೆರಳ ತುದಿಯಲ್ಲಿ ಲಭ್ಯ! ಇಂಥ ವಿಶಿಷ್ಟ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಪ್ರಸ್ತುತ ಹಸು, ಎಮ್ಮೆಗಳ ಗುರುತಿಗಾಗಿ ಹಾಗೂ ಮಾಹಿತಿ ಸಂಗ್ರಹಕ್ಕೆ ಕಿವಿಯೋಲೆ ಹಾಕುವ ಪದ್ಧತಿ ಅನೇಕ ವರ್ಷಗಳಿಂದ ಜಾರಿಯಲ್ಲಿದೆ. ಇದಕ್ಕೆ ಅನೇಕ ಮಿತಿಗಳು ಹಾಗೂ ಸಮಸ್ಯೆಗಳು ಇರುವುದರಿಂದ ಕಿವಿಯೋಲೆಯ ಬದಲಿಗೆ ಮಸಲ್‌ ಇಂಪ್ರೆಶನ್‌ ತಂತ್ರಜ್ಞಾನದ ಮೂಲಕ ಜಾನುವಾರುಗಳ ಮಾಹಿತಿ ಸಂಗ್ರಹಕ್ಕೆ ಉದ್ದೇಶಿಸಲಾಗಿದೆ. ಹಂತಹಂತವಾಗಿ ಈ ತಂತ್ರಜ್ಞಾನ ಜಾರಿಗೆ ಬರಲಿದೆ. ಈ ಕುರಿತು ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ.

 ಕಳವು, ನಾಪತ್ತೆಯಾದರೆ ಪತ್ತೆ ಸಾಧ್ಯ:  ಯಾವುದೇ ಜಾನುವಾರು ಕಳುವಾದರೆ ಅಥವಾ ನಾಪತ್ತೆಯಾಗಿ ಬೇರೆಲ್ಲೋ ದೊರೆತರೆ ಅದರ ಮಾಲೀಕರನ್ನು ಪತ್ತೆ ಹಚ್ಚಲು ಮಸಲ್‌ ಇಂಪ್ರೆಶನ್‌ ತಂತ್ರಜ್ಞಾನ ಸಹಾಯ ಮಾಡಲಿದೆ ಎನ್ನುವುದು ಕೂಡ ಈ ತಂತ್ರಜ್ಞಾನದ ವಿಶೇಷ. ಜಾನುವಾರುಗಳಿಗೆ ಸಂಬಂಧಿಸಿದ ಕಾನೂನು ಬಾಹಿರ ಚಟುವಟಿಕೆಗಳ ತಡೆಗೂ ಪೂರಕವಾಗಲಿದೆ ಎನ್ನುತ್ತಾರೆ ಪಶುಪಾಲನಾ ಇಲಾಖೆ ಅಧಿಕಾರಿಗಳು.

 ಜಿಲ್ಲೆಗಳಿಗೆ ಗುರಿ ಸುತ್ತೋಲೆ 

ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಮೂಲಕ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಪ್ರತಿ ಜಿಲ್ಲೆಗೂ ಯೋಜನೆಯ ಆರಂಭಿಕ ಗುರಿ ನಿಗದಿ ಮಾಡಲಾಗಿದೆ. ದ.ಕ. ಜಿಲ್ಲೆಗೆ 10 ಸಾವಿರದಷ್ಟು ಜಾನುವಾರುಗಳ ಮೂಗಿನಚ್ಚು ಪಡೆದು ಮಾಹಿತಿ ಸಂಗ್ರಹಿಸಲು, ಅದಕ್ಕಾಗಿ ಇಲಾಖೆಯಲ್ಲಿ ಲಭ್ಯವಿರುವ ಸಿಬ್ಬಂದಿಯ ಮಾಹಿತಿ ಕೋರಿ ಸುತ್ತೋಲೆ ಹೊರಡಿಸಲಾಗಿದೆ. ಪ್ರಸ್ತುತ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಮತ್ತು ಈ ನಡುವೆ ಲೋಕಸಭೆ ಚುನಾವಣೆ ಬಂದಿದ್ದರಿಂದ ವಿಳಂಬವಾಗಿದೆ. ಶೀಘ್ರದಲ್ಲೇ ಇದು ಜಾರಿಯಾಗುವ ನಿರೀಕ್ಷೆಯಿದೆ.

‘‘ಪ್ರಸ್ತುತ ಜಾನುವಾರುಗಳ ಮಾಹಿತಿ ಸಂಗ್ರಹಕ್ಕೆ ಕಿವಿಯೋಲೆ ಹಾಕುವ ಪದ್ಧತಿ ಇದೆ. ಇದರಲ್ಲಿ 12 ಅಂಕೆಗಳು ಇದ್ದು, ಪ್ರತಿ ಜಾನುವಾರಿಗೂ ಭಿನ್ನ ಅಂಕೆಗಳನ್ನು ನೀಡಲಾಗುತ್ತಿದೆ. ಆದರೆ ಈ ಕಿವಿಯೋಲೆ ಕಳೆದುಹೋಗುವುದು, ಜಾನುವಾರುಗಳಿಗೆ ಅಲರ್ಜಿ ಉಂಟಾಗುವುವುದು ಇತ್ಯಾದಿ ಸಮಸ್ಯೆಗಳಿವೆ. ಮೂಗಿನಚ್ಚು ಪಡೆಯುವ ತಂತ್ರಜ್ಞಾನದಲ್ಲಿ ಇಂಥ ಸಮಸ್ಯೆಗಳಿಲ್ಲ. ಜಾನುವಾರುಗಳ ನಿಖರ ಮಾಹಿತಿ ಪಡೆಯಲು ಪೂರಕವಾಗಲಿದೆ’’ ಎಂದು ದ.ಕ. ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಅರುಣ್‌ ಕುಮಾರ್‌ ಶೆಟ್ಟಿ ಹೇಳುತ್ತಾರೆ.

ಏನಿದು ಮಸಲ್‌ ಇಂಪ್ರೆಶನ್‌?:

ಮನುಷ್ಯರ ಬೆರಳಚ್ಚಿನಂತೆ ಜಾನುವಾರುಗಳ ಮೂಗಿನ ಅಚ್ಚು ಪ್ರತಿ ಜಾನುವಾರಿಗೂ ಭಿನ್ನ. ಮೂಗಿನ ಅಚ್ಚನ್ನು ಸಂಗ್ರಹಿಸಿ, ಆ ಜಾನುವಾರು ಎಷ್ಟು ಪ್ರಾಯದ್ದು, ಅದರ ಯಜಮಾನ ಯಾರು, ಎಷ್ಟು ಕರು ಹಾಕಿದೆ ಇತ್ಯಾದಿ ಎಲ್ಲ ಮಾಹಿತಿಗಳನ್ನು ಅಪ್‌ಲೋಡ್‌ ಮಾಡಲಾಗುತ್ತದೆ. ಕಾಲಕಾಲಕ್ಕೆ ಈ ಮಾಹಿತಿಯನ್ನು ಪರಿಷ್ಕರಿಸಲಾಗುತ್ತದೆ. ಮಾಹಿತಿ ಸಂಗ್ರಹ ಮಾಡಿದ ಬಳಿಕ ಯಾವಾಗ ಬೇಕಾದರೂ ಹಸು, ಎಮ್ಮೆಯ ಮೂಗಿನ ಅಚ್ಚನ್ನು ಸ್ಕ್ಯಾನ್‌ ಮಾಡಿದರೆ ಸಾಕು, ಎಲ್ಲ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯಲಿದೆ. ಜಾನುವಾರುಗಳ ಸಂಖ್ಯೆ ಲೆಕ್ಕ ಹಾಕಲೂ ಸುಲಭ.

ಜಾನುವಾರುಗಳ ಮೂಗಿನ ಅಚ್ಚು ಸಂಗ್ರಹಿಸುವ ಹೊಸ ತಂತ್ರಜ್ಞಾನದ ಯೋಜನೆ ಜಾರಿಗೊಳಿಸಲು ಸರ್ಕಾರದಿಂದ ಜಿಲ್ಲೆಗಳಿಗೆ ಕೆಲ ವಾರಗಳ ಹಿಂದೆ ಸುತ್ತೋಲೆ ಬಂದಿದೆ. ಇದು ಕಾರ್ಯಗತವಾದರೆ ಜಾನುವಾರುಗಳ ಸಂಪೂರ್ಣ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.

- ಡಾ.ಅರುಣ್‌ ಕುಮಾರ್‌ ಶೆಟ್ಟಿ, ದ.ಕ. ಜಿಲ್ಲಾ ಪಶುಪಾಲನಾ ಇಲಾಖೆ ಉಪನಿರ್ದೇಶಕ

PREV

Recommended Stories

ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ
ಬ್ಯಾಲೆಟ್‌ ಬಳಕೆಗೆ ಸುಗ್ರೀವಾಜ್ಞೆ ಅಗತ್ಯವಿಲ್ಲ : ಸಂಪುಟದಲ್ಲಿ ಚರ್ಚೆ