ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ

Published : Sep 19, 2025, 05:18 AM IST
vidhan soudha

ಸಾರಾಂಶ

ಸಾಮಾಜಿಕ-ಆರ್ಥಿಕ ಸಮೀಕ್ಷೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಂತ್ರಿಗಳಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ, ಬಿರುಸಿನ ಮಾತುಗಳ ವಿನಿಮಯ ನಡೆದ ಪರಿಣಾಮ ಮತ್ತೊಮ್ಮೆ ಜಾತಿ ಗಣತಿ ಕಗ್ಗಂಟಿಗೆ ಸರ್ಕಾರ ಸಿಲುಕಿದೆ.

 ಬೆಂಗಳೂರು :  ಸಾಮಾಜಿಕ-ಆರ್ಥಿಕ ಸಮೀಕ್ಷೆ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲ ಮಂತ್ರಿಗಳಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ, ಬಿರುಸಿನ ಮಾತುಗಳ ವಿನಿಮಯ ನಡೆದ ಪರಿಣಾಮ ಮತ್ತೊಮ್ಮೆ ಜಾತಿ ಗಣತಿ ಕಗ್ಗಂಟಿಗೆ ಸರ್ಕಾರ ಸಿಲುಕಿದೆ.

ಸಚಿವ ಸಂಪುಟ ಸಭೆ ಸಭೆ ಬಳಿಕ ಗುರುವಾರ ಸಚಿವರ ಮಟ್ಟದ ಸರಣಿ ಸಭೆಗಳನ್ನು ನಡೆಸಿ ಸಮೀಕ್ಷೆ ಸ್ವರೂಪ ಹೇಗಿರಬೇಕು ಹಾಗೂ ಏನೇನು ಬದಲಾಗಬೇಕು ಎಂಬ ಬಗ್ಗೆ ತೀವ್ರ ಪರಾಮರ್ಶೆ ನಡೆಸಲಾಯಿತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ತಡರಾತ್ರಿವರೆಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಸಚಿವರಾದ ಎಚ್.ಕೆ.ಪಾಟೀಲ್‌, ಶಿವರಾಜ್‌ ತಂಗಡಗಿ ಸೇರಿ ಹಲವರು ಸಚಿವರು ಸಭೆ ನಡೆಸಿದರು. ಆದರೂ ಚರ್ಚೆ ಅಪೂರ್ಣ ಆದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮತ್ತೆ ಮುಖ್ಯಮಂತ್ರಿಗಳ ಕಾವೇರಿ ನಿವಾಸದಲ್ಲಿ ಹಿರಿಯ ಸಚಿವರ ಸಭೆ ಕರೆಯಲಾಗಿದೆ.

ಇನ್ನು ಗುರುವಾರ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಸೇರಿ ವಿವಿಧ ಜಾತಿಗಳಿಗೆ ಕ್ರಿಶ್ಚಿಯನ್‌ ಎಂಬ ಪದ ತಳಕು ಹಾಕಿ ವಿವಾದ ಸೃಷ್ಟಿಸಿರುವ ಬಗ್ಗೆ ತೀವ್ರ ಚರ್ಚೆ ನಡೆಸಲಾಯಿತು. ಆ ಹೆಸರುಗಳನ್ನು ಕೈಬಿಟ್ಟು ಪರಿಷ್ಕೃತ ಪಟ್ಟಿಯೊಂದಿಗೆ ಜಾತಿ ಪಟ್ಟಿಯ ನಮೂನೆ ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಮೀಕ್ಷೆ ಭವಿಷ್ಯ ಇಂದು ನಿರ್ಧಾರ?

ಸಮೀಕ್ಷೆಯನ್ನು ಮುಂದೂಡಬೇಕೋ ಅಥವಾ ಕೆಲ ಬದಲಾವಣೆಗಳೊಂದಿಗೆ ಘೋಷಿತ ದಿನದಿಂದಲೇ ಸಮೀಕ್ಷೆ ಆರಂಭಿಸಬೇಕೋ ಎಂಬ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ. ಸಮೀಕ್ಷೆಯ ಜಾತಿ ಪಟ್ಟಿ ನಮೂನೆ, ಆ್ಯಪ್‌ ಹಾಗೂ ಸಮೀಕ್ಷಾ ಕೈಪಿಡಿಯಲ್ಲಿ ಪರಿಷ್ಕರಣೆ ಮಾಡಿದರೆ ನಿಗದಿಯಂತೆ ಸೆ.22 ರಿಂದಲೇ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತದೆಯೇ ಅಥವಾ ಕೆಲ ಕಾಲ ಮುಂದೂಡಲಾಗುತ್ತದೆಯೇ ಎಂಬ ಬಗ್ಗೆ ಶುಕ್ರವಾರದ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.

ಜಾತಿಗಣತಿಗೆ ಸಚಿವರಿಂದಲೇ ಆಕ್ಷೇಪ:

ರಾಜ್ಯ ಸರ್ಕಾರ ಸೆ.22ರಿಂದ ಆರಂಭಿಸಲು ಉದ್ದೇಶಿಸಿರುವ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ನಮೂನೆಯಲ್ಲಿ 331 ಹೆಚ್ಚುವರಿ ಜಾತಿಗಳ ಹೆಸರು ಸೇರ್ಪಡೆ ಮಾಡಲಾಗಿದೆ. ಲಿಂಗಾಯತ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌ ಸೇರಿ ಹಲವು ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮದ ಜತೆ ತಳಕು ಹಾಕಿ ಪಟ್ಟಿ ಮಾಡಲಾಗಿದೆ.

ಜತೆಗೆ ಧರ್ಮದ ಪಟ್ಟಿಯಲ್ಲಿ ಲಿಂಗಾಯತ ಎಂಬುದು ನಮೂದಿಸದ ಕಾರಣ ಲಿಂಗಾಯತರಲ್ಲೂ ತೀವ್ರ ಗೊಂದಲ ಉಂಟಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿತ್ತು. ಈ ಬಗ್ಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲೂ ಕೆಲ ಸಚಿವರಿಂದ ಅದರಲ್ಲೂ ವಿಶೇಷವಾಗಿ ಲಿಂಗಾಯತ ಸಚಿವರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು.

ಸಚಿವರಾದ ಈಶ್ವರ ಖಂಡ್ರೆ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸಮೀಕ್ಷೆಯನ್ನೇ ವಿರೋಧಿಸಿದರೆ, ಎಂ.ಬಿ. ಪಾಟೀಲ್‌ ಅವರು ಗೊಂದಲಗಳನ್ನು ಬಗೆಹರಿಸದ ಹೊರತು ಸಮೀಕ್ಷೆ ನಡೆಸದಂತೆ ಆಗ್ರಹಿಸಿದರು. ಇದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರೂ ದನಿಗೂಡಿಸಿದರು ಎಂದು ತಿಳಿದುಬಂದಿದೆ.

ನಿಗದಿತ ದಿನಾಂಕದಿಂದಲೇ ಸಮೀಕ್ಷೆ?

ಹಿಂದುಳಿದ ವರ್ಗಗಳ ಇಲಾಖೆ ಮೂಲಗಳ ಪ್ರಕಾರ ನಿಗದಿ (ಸೆ.22) ದಿನಾಂಕದಿಂದಲೇ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಯಲಿದೆ. ಜಾತಿ ಪಟ್ಟಿಯಲ್ಲಿನ ಹೆಚ್ಚುವರಿ ಜಾತಿಗಳನ್ನು ಪರಿಷ್ಕರಣೆ ಮಾಡಿ ಸೆ.22 ರಿಂದಲೇ ಸಮೀಕ್ಷೆ ನಡೆಸುವ ಸಾಧ್ಯತೆ ಹೆಚ್ಚಿದೆ. ಸಮೀಕ್ಷೆ ಆರಂಭಕ್ಕೆ ಮೂರು ದಿನಗಳ ಕಾಲಾವಧಿ ಮಾತ್ರ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಮುಂದೂಡುವ ಮನಸ್ಥಿತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇಲ್ಲ ಎನ್ನಲಾಗುತ್ತಿದೆ.

ಆದರೆ, ಸಮೀಕ್ಷೆ ಆರಂಭಕ್ಕೆ ಬಾಕಿ ಉಳಿದಿರುವ ಮೂರು ದಿನದಲ್ಲಿ ಸಮೀಕ್ಷೆ ನಮೂನೆ ಪರಿಷ್ಕರಣೆ ಮಾಡಿ ಪರಿಷ್ಕೃತ ಕೈಪಿಡಿಯನ್ನು ಸಮೀಕ್ಷೆ ನಡೆಸುವ ಸಿಬ್ಬಂದಿಗೆ ನೀಡಲು ಸಾಧ್ಯವಿಲ್ಲ ಎಂದಾದರೆ ಮಾತ್ರ ತುಸು ಕಾಲ ಮುಂದೂಡಬಹುದು ಎನ್ನಲಾಗುತ್ತಿದೆ.

ಕ್ರಿಶ್ಚಿಯನ್‌ ಹೆಸರಿನ ಜಾತಿಗಳದ್ದೇ ವಿವಾದ

ಜಾತಿಗಳ ಪಟ್ಟಿಯಲ್ಲಿ ಲಿಂಗಾಯತ ಕ್ರಿಶ್ಚಿಯನ್‌, ಒಕ್ಕಲಿಗ ಕ್ರಿಶ್ಚಿಯನ್‌, ಕುರುಬ ಕ್ರಿಶ್ಚಿಯನ್‌, ವಿಶ್ವಕರ್ಮ ಕ್ರಿಶ್ಚಿಯನ್‌, ಈಡಿಗ ಕ್ರಿಶ್ಚಿಯನ್‌, ವ್ಯಾಸ ಬ್ರಾಹ್ಮಣ ಕ್ರಿಶ್ಚಿಯನ್‌, ವಾಲ್ಮೀಕಿ ಕ್ರಿಶ್ಚಿಯನ್‌ ಸೇರಿ 46 ಜಾತಿಗಳನ್ನು ಕ್ರಿಶ್ಚಿಯನ್‌ ಜತೆ ತಳಕು ಹಾಕಿ ಪಟ್ಟಿ ಮಾಡಲಾಗಿದೆ. ಇದಕ್ಕೆ ಕೆಲವರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಕೆಲವನ್ನು ಕೈಬಿಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಹಲವು ಜಾತಿಗಳ ಜತೆ ಇರುವ ಕ್ರಿಶ್ಚಿಯನ್‌  ಹೆಸರುಗಳಿಗೆ ಕೊಕ್‌?

ಗುರುವಾರ ತಡರಾತ್ರಿವರೆಗೆ ನಡೆದ ಸಭೆಯಲ್ಲಿ ಲಿಂಗಾಯತ, ಒಕ್ಕಲಿಗ, ಕುರುಬ ಸೇರಿ ವಿವಿಧ ಜಾತಿಗಳಿಗೆ ಕ್ರಿಶ್ಚಿಯನ್‌ ಎಂಬ ಪದ ತಳಕು ಹಾಕಿ ವಿವಾದ ಸೃಷ್ಟಿಸಿರುವ ಬಗ್ಗೆ ತೀವ್ರ ಚರ್ಚೆ ನಡೆಸಲಾಯಿತು. ಆ ಹೆಸರುಗಳನ್ನು ಕೈಬಿಟ್ಟು ಪರಿಷ್ಕೃತ ಪಟ್ಟಿಯೊಂದಿಗೆ ಜಾತಿ ಪಟ್ಟಿಯ ನಮೂನೆ ಸಿದ್ಧಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು ಎಂದು ಮೂಲಗಳು ತಿಳಿಸಿವೆ.

PREV
Read more Articles on

Recommended Stories

ಬೆಂಗಳೂರಲ್ಲಿ ಭರ್ಜರಿ ಮಳೆಗೆ ವಾಹನ ಸವಾರರ ಪರದಾಟ
ಬೆಂಗಳೂರು : ನಗರದ ಕೆಲವು ಸ್ಥಳಗಳಲ್ಲಿ ಸೆ.20 ರಂದು ವಿದ್ಯುತ್ ಕಡಿತ