ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಕಡಿವಾಣ ಹಾಕುವ ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ-2025’ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ.
ವಿಧಾನಸಭೆ : ಅನಧಿಕೃತ ಅಥವಾ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಬಲವಂತದ ಸಾಲ ವಸೂಲಿ ಹಾಗೂ ಕಿರುಕುಳಕ್ಕೆ ಕಡಿವಾಣ ಹಾಕುವ ‘ಕರ್ನಾಟಕ ಕಿರು ಸಾಲ (ಮೈಕ್ರೋ) ಮತ್ತು ಸಣ್ಣ ಸಾಲ ವಸೂಲಾತಿ ಬಲವಂತದ ಕ್ರಮಗಳ ಪ್ರತಿಬಂಧಕ ವಿಧೇಯಕ-2025’ ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ.
ಈ ವಿಧೇಯಕದಡಿ ಅನಧಿಕೃತ ಹಾಗೂ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಅಥವಾ ಲೇವಾದೇವಿದಾರರು ಸಾಲಗಾರನಿಂದ ಬಲವಂತದ ವಸೂಲಿಗೆ ಪ್ರಯತ್ನಿಸುವುದು ನಿಷಿದ್ಧ. ಒಂದೊಮ್ಮೆ ಸಾಲ ಪಡೆದಿರುವ ಸಮಾಜದ ದುರ್ಬಲ ವರ್ಗದವರ ಬಳಿ ಬಲವಂತ ಮಾಡಿದರೆ ಸಾಲಗಾರ ಪಡೆದಿರುವ ಸಾಲ ಹಾಗೂ ಬಡ್ಡಿ ಮನ್ನಾ ಆಗಿದೆ ಎಂದು ಭಾವಿಸಬೇಕು ಎಂಬ ಮಹತ್ವ ಅಂಶ ಸೇರಿಸಲಾಗಿದೆ.
ಅಲ್ಲದೆ, ಇಂಥ ಸಂಸ್ಥೆ ಅಥವಾ ಲೇವಾದೇವಿದಾರ ಸಾಲ, ಬಡ್ಡಿ ವಸೂಲಿಗೆ ಹೂಡುವ ಯಾವುದೇ ದಾವೆ ಅಥವಾ ವ್ಯವಹಾರವನ್ನು ನ್ಯಾಯಾಲಯಗಳು ಪುರಸ್ಕರಿಸಬಾರದು. ಜತೆಗೆ ಸಾಲಗಾರ ಅಥವಾ ಆತನೊಂದಿಗೆ ಯಾರ ವಿರುದ್ಧವಾದರೂ ಜಂಟಿಯಾಗಿ ದಾವೆ ಹೂಡಿದ್ದರೆ ತಕ್ಷಣದಿಂದ ರದ್ದಾಗಬೇಕು. ಇನ್ನು ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಕಿರು ಸಾಲಕ್ಕೆ ಅಡಮಾನ ಇಟ್ಟುಕೊಂಡಿದ್ದರೆ ಅಂತಹ ಆಸ್ತಿ, ವಸ್ತುಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ದೂರು ಸ್ವೀಕರಿಸುವುದು ಕಡ್ಡಾಯ: ಸಾಲಗಾರ ಸಾಲ ನೀಡಿರುವವರು ವಸೂಲಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ದೂರು ನೀಡಿದರೆ ಪೊಲೀಸರು ಸ್ವೀಕರಿಸಬೇಕು. ದೂರು ಸ್ವೀಕರಿಸಲು ಯಾವುದೇ ವಿಳಂಬ ಮಾಡಬಾರದು. ಕಿರುಕುಳ ಸಾಬೀತಾದರೆ ಸಂಬಧಪಟ್ಟವರಿಗೆ ಜೈಲು ಶಿಕ್ಷೆ ಆಗಬೇಕು ಎಂದು ಹೇಳಲಾಗಿದೆ.
ನೋಂದಣಿ ಕಡ್ಡಾಯ: ರಾಜ್ಯದಲ್ಲಿ ವ್ಯವಹಾರ ನಡೆಸುವ ಯಾವುದೇ ಫೈನಾನ್ಸ್ ಕಂಪೆನಿ ಕಡ್ಡಾಯವಾಗಿ ನೋಂದಣಿ ಪ್ರಾಧಿಕಾರದ ಬಳಿ ನೋಂದಣಿ ಮಾಡಿಸಿಕೊಂಡು ಪರವಾನಗಿ ಪಡೆದಿರಬೇಕು. ನಿಯಮ ಬಾಹಿರವಾಗಿ ನಡೆದುಕೊಂಡರೆ ಪರವಾನಗಿಯನ್ನು ಸರ್ಕಾರ ರದ್ದುಪಡಿಸಬಹುದು.