;Resize=(412,232))
ಬೆಂಗಳೂರು : ಜಿಲ್ಲಾ ಪಂಚಾಯ್ತಿ ಹಾಗೂ ತಾಲೂಕು ಪಂಚಾಯ್ತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮತಪೆಟ್ಟಿಗೆ ಮೂಲಕ ನಡೆಸಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಮತಪೆಟ್ಟಿಗೆ ಖರೀದಿಗೆ ಚುನಾವಣಾ ಆಯೋಗಕ್ಕೆ 128 ಕೋಟಿ ರು. ಹಣವನ್ನೂ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಮತಪೆಟ್ಟಿಗೆ ಮೂಲಕ ಚುನಾವಣೆ ನಡೆಸುವುದಾಗಿ ತಿಳಿಸಿದ್ದೇವೆ. ಈ ಸಂಬಂಧ ಮರು ಚಿಂತನೆ ಇಲ್ಲ. ಚುನಾವಣಾ ಆಯೋಗದ ಬಳಿಕ ಈಗಾಗಲೇ ಮತಪೆಟ್ಟಿಗೆಗಳು ಇದ್ದು ಹೆಚ್ಚುವರಿಯಾಗಿ ಅಗತ್ಯವಿರುವ ಮತಪೆಟ್ಟಿಗೆ ಖರೀದಿಗೆ ಈಗಾಗಲೇ ಹಣ ನೀಡಿದ್ದೇವೆ. ಹಣಕಾಸು ಸಮಸ್ಯೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಪರಿಷ್ಕೃತ ಮತದಾರರ ಪಟ್ಟಿ ಅನುಸಾರ ಚುನಾವಣೆ ನಡೆಸಲಾಗುತ್ತದೆಯೇ ಎಂಬ ಪ್ರಶ್ನೆಗೆ, ಎಸ್‌ಐಆರ್ ಬಳಿಕದ ಪರಿಷ್ಕೃತ ಮತದಾರರ ಪಟ್ಟಿ ಲಭ್ಯವಿರುವ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಯಾವ ಪಟ್ಟಿ ಆಧರಿಸಿ ಚುನಾವಣೆ ನಡೆಸಬೇಕು ಎಂಬುದನ್ನು ಆಯೋಗ ತೀರ್ಮಾನಿಸಲಿದೆ ಎಂದು ಸ್ಪಷ್ಟಪಡಿಸಿದರು.