;Resize=(412,232))
ಗಿರೀಶ್ ಮಾದೇನಹಳ್ಳಿ
ಬೆಂಗಳೂರು : ರಾಜ್ಯದಲ್ಲಿ ಸರ್ಕಾರಿ ಭ್ರಷ್ಟ ವ್ಯವಸ್ಥೆ ಮೇಲಿನ ಕಣ್ಗಾವಲು ಬಿಗಿಗೊಳಿಸಿರುವ ಲೋಕಾಯುಕ್ತ ಪೊಲೀಸ್ ಘಟಕ, ಇದೀಗ ಪ್ರತಿ ಇಲಾಖೆಯಲ್ಲಿ ನುಂಗಣ್ಣರ ಪತ್ತೆಗೆ ಎಸ್ಪಿಗಳ ಉಸ್ತುವಾರಿಯಲ್ಲಿ ಡಿವೈಎಸ್ಪಿ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿದೆ.
ಆಯಾ ಇಲಾಖೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಗಳು ಹಾಗೂ ಅಧಿಕಾರಿಗಳ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಮಾಹಿತಿ ಕಲೆ ಹಾಕಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗಳಿಗೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮನೀಶ್ ಕರ್ಬೀಕರ್ ಹಾಗೂ ಐಜಿಪಿ ಸುಬ್ರಹ್ಮಣ್ಯೇಶ್ವರಾವ್ ಈಗಾಗಲೇ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ನಗರದ ವರಿಷ್ಠಾಧಿಕಾರಿಗಳಾದ ವಂಶಿಕೃಷ್ಣ ಹಾಗೂ ಶಿವಪ್ರಕಾಶ್ ದೇವರಾಜು ಅವರ ಮೇಲುಸ್ತುವಾರಿಯಲ್ಲಿ ಈ ವಿಶೇಷ ವಿಚಕ್ಷಣಾ ತಂಡಗಳನ್ನು ಎಡಿಜಿಪಿ ಹಾಗೂ ಐಜಿಪಿ ರಚಿಸಿದ್ದಾರೆ. ಈ ಇಬ್ಬರು ಎಸ್ಪಿಗಳ ಮೇಲುಸ್ತುವಾರಿಯಲ್ಲಿ ಡಿವೈಎಸ್ಪಿಗಳಿಗೆ ಇಲಾಖೆಗಳು ಹಂಚಿಕೆಯಾಗಿವೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಸರ್ಕಾರ ಮಟ್ಟದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಲಂಚಬಾಕರಿಗೆ ಲಗಾಮು ಬೀಳುತ್ತಿಲ್ಲ. ಅಲ್ಲದೆ, ಕೆಲ ಸರ್ಕಾರಿ ಬಾಬುಗಳ ಐಷಾರಾಮಿ ಜೀವನಕ್ಕೆ ಅಂಕೆ ಇಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಲೇ ಇವೆ. ಅಲ್ಲದೆ, ಕೆಲ ಇಲಾಖೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಧ್ಯಮಗಳಲ್ಲೂ ವರದಿ ಆಗುತ್ತಿರುವ ಹಿನ್ನೆಲೆಯಲ್ಲಿ ಭ್ರಷ್ಟರ ಬೇಟೆಗೆ ವಿಶೇಷ ತಂಡಗಳನ್ನು ಲೋಕಾಯುಕ್ತ ಪೊಲೀಸರು ರಚಿಸಿದ್ದಾರೆ.
ಈ ಮೊದಲು ಇದಕ್ಕಾಗಿ ಪ್ರತ್ಯೇಕವಾಗಿ ತಂಡಗಳಿರಲಿಲ್ಲ. ಬಾತ್ಮೀದಾರರ ಮೂಲಕ ಲಭಿಸುವ ಮಾಹಿತಿ ಹಾಗೂ ಕೆಲ ಬಾರಿ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳನ್ನು ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆಗಿಳಿಯುತ್ತಿದ್ದರು. ಆದರೀಗ ಪ್ರತಿ ಇಲಾಖೆಗೆ ಡಿವೈಎಸ್ಪಿ ನೇತೃತ್ವದ ವಿಶೇಷ ತಂಡಗಳ ನೇಮಕವಾಗಿವೆ ಎಂದು ಮೂಲಗಳು ಹೇಳಿವೆ.
ಅದರಂತೆ ಲೋಕೋಪಯೋಗಿ, ಇಂಧನ, ಜಲ ಸಂಪನ್ಮೂಲ ಇಲಾಖೆ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಎ), ಅಬಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೇರಿದಂತೆ ಪ್ರತಿಯೊಂದು ಇಲಾಖೆಗೆ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ತಿಳಿದು ಬಂದಿದೆ.
- ಪ್ರತಿ ಇಲಾಖೆಯ ವಿದ್ಯಮಾನಗಳ ಕುರಿತು ಆಯಾ ತಂಡಗಳು ಮಾಹಿತಿ ಸಂಗ್ರಹಿಸಬೇಕು
- ಅಭಿವೃದ್ಧಿ ಯೋಜನೆಗಳು, ಕಾಮಗಾರಿಗಳು ಸೇರಿದಂತೆ ಸಮಗ್ರ ವಿವರ ಪಡೆಯಬೇಕು
- ಇವುಗಳಲ್ಲಿ ಅಕ್ರಮದ ಆರೋಪ ಕೇಳಿ ಬಂದರೆ ಪೂರಕ ದಾಖಲೆಗಳನ್ನು ಸಂಗ್ರಹಿಸಬೇಕು
- ಅವುಗಳನ್ನಾಧರಿಸಿ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ ತನಿಖೆ ನಡೆಸಬಹುದು
- ಅಧಿಕಾರಿಗಳ ಆದಾಯ ಮೂಲಗಳನ್ನೂ ಈ ಅಧಿಕಾರಿಗಳು ಶೋಧ ನಡೆಸಬಹುದು