ಬೆಂಗಳೂರು : ಟನಲ್ ವಿರುದ್ಧ ನಾಗರಿಕರ ಸಹಿ ಸಂಗ್ರಹ

Published : Nov 03, 2025, 08:49 AM IST
 tunnel road project Bengaluru

ಸಾರಾಂಶ

ಸುರಂಗ ರಸ್ತೆ ವಿರೋಧಿಸಿ ನಾಗರಿಕ ಸಂಘಟನೆಗಳ ಕಾರ್ಯಕರ್ತರನ್ನು ಒಳಗೊಂಡ ‘ಲಾಲ್ ಬಾಗ್ ಉಳಿಸಿ ಹೋರಾಟ ಸಮಿತಿ’ಯಿಂದ ಭಾನುವಾರ ಲಾಲ್‌ ಬಾಗ್‌ನಲ್ಲಿ ‘ಬೆಂಗಳೂರು ರಕ್ಷಿಸಿ, ಟನಲ್ ರೋಡಿ ನಿಲ್ಲಿಸಿ’ ಎಂಬ ಘೋಷವಾಕ್ಯದೊಂದಿಗೆ ಸಹಿ ಸಂಗ್ರಹ ಅಭಿಯಾನ, ಪ್ರತಿಭಟನೆ ನಡೆಸಲಾಯಿತು.

 ಬೆಂಗಳೂರು :  ಸುರಂಗ ರಸ್ತೆ ವಿರೋಧಿಸಿ ನಾಗರಿಕ ಸಂಘಟನೆಗಳ ಕಾರ್ಯಕರ್ತರನ್ನು ಒಳಗೊಂಡ ‘ಲಾಲ್ ಬಾಗ್ ಉಳಿಸಿ ಹೋರಾಟ ಸಮಿತಿ’ಯಿಂದ ಭಾನುವಾರ ಲಾಲ್‌ ಬಾಗ್‌ನಲ್ಲಿ ‘ಬೆಂಗಳೂರು ರಕ್ಷಿಸಿ, ಟನಲ್ ರೋಡಿ ನಿಲ್ಲಿಸಿ’ ಎಂಬ ಘೋಷವಾಕ್ಯದೊಂದಿಗೆ ಸಹಿ ಸಂಗ್ರಹ ಅಭಿಯಾನ, ಪ್ರತಿಭಟನೆ ನಡೆಸಲಾಯಿತು.

ನಗರದ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಜನರು ಲಾಲ್‌ ಬಾಗ್ ಗೇಟ್ ಬಳಿ ‘ಲಾಲ್‌ ಬಾಗ್ ಉಳಿಸಿ’, ‘ಮರಗಳನ್ನು ಉಳಿಸಿ’, ‘ಬೆಂಗಳೂರು ಉಳಿಸಿ’, ‘ಸುರಂಗ ನಿರ್ಮಾಣ ನಿಲ್ಲಿಸಿ’ ಎಂದು ಘೋಷಣೆಗಳನ್ನು ಕೂಗಿದರು. ಯೋಜನೆಯನ್ನು ವಿರೋಧಿಸುವ ಭಿತ್ತಿಪತ್ರಗಳನ್ನು ಹಿಡಿದು ಲಾಲ್‌ ಬಾಗ್ ಸುತ್ತ ಪ್ರದಕ್ಷಿಣೆ ಹಾಕಿದರು. ಲಾಲ್‌ ಬಾಗ್ ಬಂಡೆ ಮೇಲೆ ಕುಳಿತು ಸುರಂಗ ಮಾರ್ಗದಿಂದ ಆಗಬಹುದಾದ ಅಪಾಯಗಳು ಕುರಿತು ಚರ್ಚಿಸಿದರು.

ಸುರಂಗ ರಸ್ತೆಯಿಂದ ಕೆಲವೇ ಜನರಿಗೆ ಅನುಕೂಲ

ದುಬಾರಿ ಟೋಲ್ ಶುಲ್ಕ ಇರುವ ಸುರಂಗ ರಸ್ತೆಯಿಂದ ಕೆಲವೇ ಜನರಿಗೆ ಅನುಕೂಲವಾಗುತ್ತದೆ. ಅದರಿಂದ ಒಟ್ಟಾರೆ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಯಾವ ಸಂಸ್ಥೆ ಕೂಡ ಸುರಂಗ ರಸ್ತೆಯಿಂದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿಲ್ಲ. ಸುರಂಗಕ್ಕೆ ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಆಗುತ್ತದೆ. ಬೆಂಗಳೂರಿನ ಪಾಲಿಗೆ ಇದೊಂದು ಕೆಟ್ಟ ಯೋಜನೆಯಾಗಿದೆ ಎಂದು ಪ್ರತಿಭಟನಕಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸುರಂಗ ಯೋಜನೆ ಬದಲು ಸರ್ಕಾರ ಪ್ರಗತಿಯಲ್ಲಿರುವ ಮೆಟ್ರೋ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಬಿಎಂಟಿಸಿ ಬಸ್‌ ಸಂಚಾರ ಹೆಚ್ಚಳ ಮಾಡಬೇಕು. ಗುಂಡಿ ಮುಚ್ಚಿ ರಸ್ತೆಗಳನ್ನು ಉತ್ತಮಗೊಳಿಸಬೇಕು. ಗುಣಮಟ್ಟದ ರಸ್ತೆಗಳಿಂದ ಟ್ರಾಫಿಕ್ ದಟ್ಟಣೆ ಉಂಟಾಗುವುದು ಕಡಿಮೆಯಾಗುತ್ತದೆ. ಖಾಸಗಿ ವಾಹನಗಳ ಬಳಕೆ ಬದಲು ಸಮೂಹ ಸಾರಿಗೆ ಬಳಸುವಂತೆ ಸರ್ಕಾರ ಉತ್ತೇಜನ ನೀಡಬೇಕು. ಅನೇಕ ಫ್ಲೈಓವರ್‌ ಯೋಜನೆಗಳ ಕಾಮಗಾರಿಗಳು ಕುಂಟುತ್ತಾ ಸಾಗಿವೆ. ಅವುಗಳಿಗೆ ವೇಗ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಪರಿಸರ ಹಾನಿ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ನಟಿ ಸುಧಾ ಬೆಳವಾಡಿ, ಸುರಂಗಕ್ಕಾಗಿ ಅನೇಕ ಮರ ಕತ್ತರಿಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಮರಗಳನ್ನು ಕಡಿದು, ಪರಿಸರ ಹಾನಿಯಾಗಿದೆ. ಈಗ ಬೆಂಗಳೂರಿನ ಶ್ವಾಸಕೋಶವಾಗಿರುವ ಲಾಲ್‌ ಬಾಗ್‌ನಲ್ಲಿನ ಮರಗಳನ್ನು ಕಡಿದು ಮತ್ತಷ್ಟು ಹಾನಿ ಮಾಡಲಾಗುಗುತ್ತಿದೆ. ಜನರ ಅಭಿಪ್ರಾಯ ಪಡೆದೇ ಯೋಜನೆ ಮಾಡಬೇಕು. ಆದರೆ, ಇಲ್ಲಿ ಯಾರನ್ನು ಕೇಳದೆ ಯೋಜನೆ ಜಾರಿ ಮಾಡುತ್ತಿರುವುದು ಎಷ್ಟು ಸರಿ? ನಮಗೆ ಸುರಂಗ ಮಾರ್ಗ ಬೇಡ. ಜನರ ಪ್ರತಿಭಟನೆಗೆ ಸ್ಪಂದಿಸಿ ಸರ್ಕಾರ ಯೋಜನೆಯನ್ನು ನಿಲ್ಲಿಸಬೇಕು ಎಂದು ಹೇಳಿದರು.

ನಟಿ ಸಂಯುಕ್ತ ಹೊರನಾಡ್ ಮಾತನಾಡಿ, ರಸ್ತೆ ಗುಂಡಿ, ಒಳಚರಂಡಿ, ಕಸ ವಿಲೇವಾರಿ ಸೇರಿದಂತೆ ನಗರದಲ್ಲಿ ಅನೇಕ ಸಮಸ್ಯೆಗಳಿವೆ. ಇದರಿಂದ ತೊಂದರೆ ಅನುಭವಿಸುವ ಸಾಮಾನ್ಯ ಜನರ ಬಗ್ಗೆ ಯಾರೂ ಯೋಚಿಸುತ್ತಿಲ್ಲ. ಬರೀ ಕಾರು ಇರುವವರ ಬಗ್ಗೆ ಯೋಚಿಸುತ್ತಿದ್ದಾರೆ. ಇದರಿಂದ ವಾಯು ಮತ್ತು ಶಬ್ಧ ಮಾಲಿನ್ಯ ಉಂಟಾಗುತ್ತದೆ. ನಗರದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಬೆಂಗಳೂರು ಉಳಿಸಲು ನಗರದ ಜನತೆ ಹೋರಾಟ ಮಾಡಬೇಕು ಎಂದು ನಟಿ ಕರೆ ನೀಡಿದರು. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ತೊಗರಿ ಬೆಳೆಯಲ್ಲಿ ಹವಾಮಾನ ಸ್ಥಿತಿಸ್ಥಾಪಕ ಪದ್ಧತಿಗಳ ಪ್ರಾತ್ಯಕ್ಷಿಕೆ
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬಿತ್ತಲು ವಿಜ್ಞಾನ ವಸ್ತುಪ್ರದರ್ಶನ ಪೂರಕ