‘ಕನ್ನಡಪ್ರಭ’ ಸಂಪಾದಕ ಜೋಗಿ, ಕಬ್ಬಿನಾಲೆಗೆ ‘ಮಹಾಬಲ’ ಪ್ರಶಸ್ತಿ

Published : Oct 26, 2026, 12:27 PM IST
Award

ಸಾರಾಂಶ

ಸಾಹಿತ್ಯ, ಮಾಧ್ಯಮ, ಕನ್ನಡದ ಛಂದಸ್ಸು ಹಾಗೂ ಯಕ್ಷಗಾನ-ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕನ್ನಡದ ಮೂವರು ಸಾಧಕರಿಗೆ ‘ಶ್ರೀ ಮಹಾಬಲ ಶೋಧ ಸಂಸ್ಥಾನಂ’ ವತಿಯಿಂದ ಯಕ್ಷಗಾನದ ಯುಗದ ಕಲಾವಿದರೆಂದು ಖ್ಯಾತರಾದ ಡಾ। ಮಹಾಬಲ ಹೆಗಡೆಯವರ ಸ್ಮರಣೆಯಲ್ಲಿ ನೀಡಲಾಗುವ 3ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ.

ಕುಮಟಾ : ಸಾಹಿತ್ಯ, ಮಾಧ್ಯಮ, ಕನ್ನಡದ ಛಂದಸ್ಸು ಹಾಗೂ ಯಕ್ಷಗಾನ-ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಕನ್ನಡದ ಮೂವರು ಸಾಧಕರಿಗೆ ‘ಶ್ರೀ ಮಹಾಬಲ ಶೋಧ ಸಂಸ್ಥಾನಂ’ ವತಿಯಿಂದ ಯಕ್ಷಗಾನದ ಯುಗದ ಕಲಾವಿದರೆಂದು ಖ್ಯಾತರಾದ ಡಾ। ಮಹಾಬಲ ಹೆಗಡೆಯವರ ಸ್ಮರಣೆಯಲ್ಲಿ ನೀಡಲಾಗುವ ಮೂರು ವಿಶೇಷ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಹಿರಿಯ ಪತ್ರಕರ್ತ, ಪ್ರಸಿದ್ಧ ಲೇಖಕ ಹಾಗೂ ‘ಕನ್ನಡಪ್ರಭ’ ದೈನಿಕದ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರಿಗೆ ‘ಅಕ್ಷರ ಮಹಾಬಲ’, ವಿದ್ವಾಂಸ, ಸಾಹಿತಿ, ಸಂಶೋಧಕ ಹಾಗೂ ಅಷ್ಟಾವಧಾನಿ ಡಾ। ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ‘ಛಂದ ಮಹಾಬಲ’, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಹಾಗೂ ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ‘ರಂಗ ಮಹಾಬಲ’ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಡಿ.25ರಂದು ಗೋಕರ್ಣದ ಅಶೋಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ‘ಶ್ರೀ ಮಹಾಬಲ ಶೋಧ ಸಂಸ್ಥಾನಂ’ ಮುಖ್ಯಸ್ಥರಾದ ಮೋಹನ ಭಾಸ್ಕರ ಹೆಗಡೆ ಹೆರವಟ್ಟ, ಡಾ. ಪರಮೇಶ್ವರ ಪಂಡಿತ್, ಪ್ರಮೋದ ಪಂಡಿತ್ ತಿಳಿಸಿದ್ದಾರೆ.

ಜೋಗಿ:

ಗಿರೀಶ್ ರಾವ್ ಹತ್ವಾರ್, ‘ಜೋಗಿ’ ಅವರು ಕನ್ನಡ ಪತ್ರಿಕೋದ್ಯಮ ಹಾಗೂ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವವರು. ‘ಹಾಯ್ ಬೆಂಗಳೂರು’ ಪತ್ರಿಕೆಯಲ್ಲಿ ‘ಜಾನಕಿ’ ಎಂಬ ಹೆಸರಿನಲ್ಲಿಯೂ ಬರೆಯುತ್ತಿದ್ದ ಜೋಗಿ, ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರ ಗಮನ ಸೆಳೆದಿದ್ದರು. ಅಂಕಣ, ಕಥೆ, ಕಾದಂಬರಿ, ವ್ಯಕ್ತಿಚಿತ್ರ, ವಿಮರ್ಶೆ ಸೇರಿದಂತೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯುತ್ತಾ ಬಂದಿರುವ ಜೋಗಿ ಅವರು ನೂರಾರು ಕೃತಿಗಳು ಹಾಗೂ ಬರಹಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಪತ್ರಿಕೋದ್ಯಮದಲ್ಲಿಯೂ ತಮ್ಮದೇ ಆದ ನಿರ್ಭೀತ, ನಿಖರ ಹಾಗೂ ಆಪ್ತ ಬರವಣಿಗೆಯ ಶೈಲಿಯನ್ನು ರೂಪಿಸಿಕೊಂಡಿರುವ ಅವರು, ಪ್ರಸ್ತುತ ‘ಕನ್ನಡಪ್ರಭ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಭಾಷೆ, ಸಾಹಿತ್ಯ, ಪತ್ರಿಕೋದ್ಯಮ ಹಾಗೂ ಸಾಮಾಜಿಕ-ಸಾಂಸ್ಕೃತಿಕ ಬದುಕನ್ನು ತಮ್ಮ ಅಕ್ಷರಗಳ ಮೂಲಕ ದಾಖಲಿಸುತ್ತಾ ಶತಾಧಿಕ ಪುಸ್ತಕ ಲೋಕಾರ್ಪಣೆಗೊಳಿಸಿದ ಹಾಗೂ ನೂರಾರು ಸಮರ್ಥ ಬರಹಗಾರರನ್ನು ಬೆಳೆಸುತ್ತಾ ಬಂದಿರುವ ಜೋಗಿ ಅವರ ಸುದೀರ್ಘ ಅಕ್ಷರ ಸೇವೆಯನ್ನು ಗೌರವಿಸಿ ‘ಅಕ್ಷರ ಮಹಾಬಲ’ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್:

ಛಂದಸ್ಸಿನ ಆಳವಾದ ಅಧ್ಯಯನ, ಸಂಶೋಧನೆ ಹಾಗೂ ಯಕ್ಷಗಾನ ಸಾಹಿತ್ಯದ ಕುರಿತ ವಿದ್ವತ್ಪೂರ್ಣ ಬರಹಗಳ ಮೂಲಕ ಗಮನ ಸೆಳೆದಿರುವ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು ಸಾಹಿತಿ, ಸಂಶೋಧಕ, ಅಷ್ಟಾವಧಾನಿ ಹಾಗೂ ಯಕ್ಷಗಾನ ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ.

ಕನ್ನಡ ಛಂದಸ್ಸು, ಯಕ್ಷಗಾನ ಪದ್ಯ ಪರಂಪರೆ ಹಾಗೂ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ಅವರು ನಡೆಸಿರುವ ಅಧ್ಯಯನ ಮತ್ತು ರಚಿಸಿರುವ ಕೃತಿಗಳು ಕನ್ನಡ ಸಾರಸ್ವತ ಲೋಕದಲ್ಲಿ ಗಮನಾರ್ಹವಾಗಿವೆ. ಯಕ್ಷಗಾನ ರಂಗ ಕಲಾವಿದರಾಗಿ, ತಾಳಮದ್ದಳೆ ಅರ್ಥದಾರಿಯಾಗಿ ಅವರು ಪ್ರಸಿದ್ಧರು. ಯಕ್ಷಗಾನ ಅಷ್ಟಾವಧಾನದ ಮೂಲಕವೂ ಅವರು ವಿಶಿಷ್ಟ ಪ್ರಯೋಗಗಳನ್ನು ನಡೆಸಿದ್ದಾರೆ.

ಕೆರೆಮನೆ ಶಿವಾನಂದ:

ಕೆರೆಮನೆ ಶಿವಾನಂದ ಹೆಗಡೆ ಅವರು ಯಕ್ಷಗಾನ ಕಲಾವಿದ, ಸಂಘಟಕ ಹಾಗೂ ರಂಗಚಿಂತಕರಾಗಿ ಗುರುತಿಸಿಕೊಂಡವರು. ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಮುಖ್ಯಸ್ಥರಾಗಿ ಯಕ್ಷಗಾನ ಪರಂಪರೆಯನ್ನು ಮುನ್ನಡೆಸುತ್ತಿರುವ ಅವರು, ಕಲಾವಿದರ ತರಬೇತಿ, ಪ್ರದರ್ಶನ, ಸಂಘಟನೆ ಹಾಗೂ ಯಕ್ಷಗಾನ ಕಲೆಯ ಪ್ರಸರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡುತ್ತಿರುವ ಸರ್ವತೋಮುಖ ಕೊಡುಗೆಗಾಗಿ ಹಾಗೂ ಯಕ್ಷಗಾನದ ಕೆರೆಮನೆ ಪರಂಪರೆ, ಕಲಾ ಶಿಸ್ತು ಮತ್ತು ರಂಗಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ‘ರಂಗ ಮಹಾಬಲ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕುಮಟಾದ ಸದಭಿರುಚಿಯ ಸಾಂಸ್ಕೃತಿಕ ಸಂಘಟನೆ ಸೌರಭದ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಾಯುಭಾರ ಕುಸಿತದಿಂದ ಭಾರೀ ಮಳೆ : ಡ್ಯಾಂಗಳ ಮಟ್ಟ ಏರಿಕೆ - ಕೆಆರೆಸ್‌ನಲ್ಲಿ ನೀರಿನ ಹೆಚ್ಚಳ
ಕಬ್ಬು ಬೆಳೆಗಾರರ ಜತೆ ಬೆಳಗಾವಿಯಲ್ಲಿ ಇಂದು ಡಿಕೆಶಿ ಮಹತ್ವದ ಸಭೆ