ಮಹದೇಶ್ವರ ಬೆಟ್ಟ ಮದ್ಯಪಾನ ಮುಕ್ತ : ಮುಖ್ಯಮಂತ್ರಿ ಸಿದ್ದರಾಮಯ್ಯ

Published : Apr 25, 2025, 09:56 AM IST
Karnataka CM Siddaramaiah (Photo: ANI)

ಸಾರಾಂಶ

ಮಲೆಮಹದೇಶ್ವರ ಬೆಟ್ಟವನ್ನು ಮದ್ಯಪಾನ ಮುಕ್ತ ಪ್ರದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಚಾಮರಾಜನಗರ : ಮಲೆಮಹದೇಶ್ವರ ಬೆಟ್ಟವನ್ನು ಮದ್ಯಪಾನ ಮುಕ್ತ ಪ್ರದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಮಹದೇಶ್ವರ ಬೆಟ್ಟದಲ್ಲಿ ನಡೆದ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲ್ಲಿಯವರೆಗೂ ಬೆಟ್ಟದಲ್ಲಿ, ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮದ್ಯಮಾರಾಟ ಮುಕ್ತ ಇತ್ತು. ಇನ್ನು ಮುಂದೆ ಹೊರಗಿನಿಂದ ತರುವುದಕ್ಕೂ ತಡೆ ಹಾಕಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಲೆಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಆಗುವುದನ್ನು ಸಂಪೂರ್ಣ ತಡೆಯಬೇಕು. ಚಾಳಿ ಬಿದ್ದ ಆರೋಪಿಯೊಬ್ಬ ಗಡಿಪಾರು ಆದರೂ ಅಕ್ರಮ ಮಾರಾಟ ಮಾಡುತ್ತಿರುವುದನ್ನು ಅಧಿಕಾರಿಗಳಿಂದ ತಿಳಿದ ಸಿಎಂ ಅವರನ್ನು ತಕ್ಷಣ ಕಠಿಣ ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.

ದಾಸೋಹ ಭವನಕ್ಕೆ ಪರಿಷ್ಕೃತ ಯೋಜನೆ:

ಮಲೆಮಹದೇಶ್ವರ ಬೆಟ್ಟದಲ್ಲಿ 2500 ರಿಂದ 4000 ಭಕ್ತರು ಒಟ್ಟಿಗೆ ಕುಳಿತು ನಿತ್ಯ ಪ್ರಸಾದ ಸ್ವೀಕರಿಸುವ ದಾಸೋಹ ಭ‍‍ವನ ನಿರ್ಮಿಸಲು ಪರಿಷ್ಕರಿಸಿದ ಯೋಜನೆ ಸಿದ್ಧಪಡಿಸಲು ಸೂಚನೆ ನೀಡಿದರು. ಹಿಂದಿನ ಪ್ರಾಧಿಕಾರದ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳು ಒಂದೂವರೆ ವರ್ಷದಿಂದ ಜಾರಿ ಆಗದೇ ಇರುವುದಕ್ಕೆ ಮುಖ್ಯಮಂತ್ರಿ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರನ್ನು ತೀವ್ರವಾಗಿ ಪ್ರಶ್ನಿಸಿದರು. ಪ್ರಾಧಿಕಾರದ ಕೆಲಸ ಕಾರ್ಯಗಳು, ಕಾಮಗಾರಿಗಳು ಸೂಕ್ತವಾಗಿ, ವೇಗವಾಗಿ ನಡೆಯಲು ಒಬ್ಬ ಎಇಇಯನ್ನು ಪ್ರಾಧಿಕಾರಕ್ಕೇ ನೇಮಿಸಲು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಸತ್ಯನಾರಾಯಣ್ ಅವರಿಗೆ ಸೂಚಿಸಿದರು.

ಹಿಂದಿನ‌ ಸಭೆಯ ನಿರ್ಣಯದಂತೆ ಪ್ರವಾಸಿಗರ ಶೆಲ್ಟರ್ ಮತ್ತು ಶೌಚಾಲಯಗಳ ಕಾಮಗಾರಿ ಪೂರ್ಣಗೊಳ್ಳದ ಬಗ್ಗೆ ಮುಖ್ಯಮಂತ್ರಿ ತರಾಟೆಗೆ ತೆಗೆದುಕೊಂಡರು. ಭಕ್ತಾಧಿಗಳಿಗೆ ಉತ್ತಮ ಕುಡಿಯುವ ನೀರು, ಶುಚಿತ್ವದಿಂದ ಕೂಡಿದ ಶೌಚಾಲಯ ನಿರ್ಮಿಸಿ, ಬೆಟ್ಟದ ಸೌಂದರ್ಯ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಪ್ರಾಧಿಕಾರ ಮತ್ತು ಮಹದೇಶ್ವರ ಬೆಟ್ಟಕ್ಕೆ ಸೇರಿದ ಜಾಗದಲ್ಲಿ ನೆಲೆಸಿರುವ 13 ಕುಟುಂಬಗಳಿಗೆ ಪರ್ಯಾಯ ಸ್ಥಳ ಒದಗಿಸಿ ಸ್ಥಳಾಂತರಿಸುವ ಮತ್ತು ಉಳಿದಿರುವವರನ್ನು ಹಾಗೇ ಉಳಿಸಿ, ಹೊಸದಾಗಿ ವಾಣಿಜ್ಯ ಉದ್ದೇಶದ ನಿರ್ಮಾಣಗಳಿಗೆ ಅವಕಾಶ ಆಗದಂತೆ ಖಚಿತವಾಗಿ ತಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು. ಪ್ರಾಧಿಕಾರದಲ್ಲಿ ಕೆಲಸ ಮಾಡುವ 66 ಕಾರ್ಮಿಕ ಕುಟುಂಬಗಳಿಗೆ ತಲಾ ₹20 ಲಕ್ಷ ವೆಚ್ಚದಲ್ಲಿ, ಒಟ್ಟು ₹12-13 ಕೋಟಿ ವೆಚ್ಚದಲ್ಲಿ ಆದಷ್ಟು ಬೇಗ ನೂತನ ಮನೆ ಕಟ್ಟಿ ಕೊಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಲಾಡುಗೆ ನಂದಿನಿ ತುಪ್ಪ

ಮಲೆಮಹದೇಶ್ವರ ಬೆಟ್ಟದ ಪ್ರಸಾದ ಲಾಡುಗೆ, ತಿರುಪತಿ ದೇವಸ್ಥಾನದ ಮಾದರಿಯಲ್ಲಿ ನಂದಿನಿ ತುಪ್ಪ ಬಳಸಿ, ಪ್ರಸಾದದ ಗುಣಮಟ್ಟವನ್ನು ಇನ್ನಷ್ಟು ಉನ್ನತೀಕರಿಸುವುದು. ಮಂದಿನ ದಿನಗಳಲ್ಲಿ 100 ಗ್ರಾಂ ತೂಕದ ಲಾಡು ಪ್ರಸಾದವನ್ನುಕೇವಲ 35 ರುಪಾಯಿಗೆ ವಿತರಿಸುವ ಬಗ್ಗೆ ಸಭೆ ನಿರ್ಣಯಿಸಿತು. ಸಭೆಯಲ್ಲಿ ಪಶು ಸಂಗೋಪನೆ, ರೇಷ್ಮೆ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಡಾ। ಎಚ್.ಸಿ.ಮಹದೇವಪ್ಪ, ಸಾಲೂರು ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಜರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪೊಲೀಸರಿಗೆ ಹಣಕ್ಕೆ ಬೇಡಿಕೆ ಇಟ್ಟ ಆರೋಪ : ಪತ್ರಕರ್ತ ವಶ
ಪೊಲೀಸ್ ವಾಹನದಲ್ಲಿ ಕುಡುಕರು ಮನೆಗೆ : ವ್ಯವಸ್ಥೆಗೆ ಆಕ್ಷೇಪ