ಮೇನದ್ದು 125 ವರ್ಷದ ದಾಖಲೆ ಮಳೆ : ಸಿಎಂ ಸಿದ್ದರಾಮಯ್ಯ

Published : Jun 01, 2025, 10:26 AM IST
heavy rain fall in rajasthan

ಸಾರಾಂಶ

ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮೇ ತಿಂಗಳಲ್ಲಿ ಆದ ದಾಖಲೆ ಮಳೆಗೆ 71 ಜನರ ಜೀವ ಹಾನಿ, 702 ಪ್ರಾಣಿಗಳ ಸಾವು, 2068 ಮನೆ ಹಾನಿ ಮತ್ತು 15,378 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ.

  ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮತ್ತು ಮೇ ತಿಂಗಳಲ್ಲಿ ಆದ ದಾಖಲೆ ಮಳೆಗೆ 71 ಜನರ ಜೀವ ಹಾನಿ, 702 ಪ್ರಾಣಿಗಳ ಸಾವು, 2068 ಮನೆ ಹಾನಿ ಮತ್ತು 15,378 ಹೆಕ್ಟೇರ್‌ ಬೆಳೆ ಹಾನಿ ಸಂಭವಿಸಿದೆ. ಈ ಪೈಕಿ ಎಲ್ಲಾ ಜನ, ಜಾನುವಾರುಗಳ ಪ್ರಾಣ ಹಾನಿ, ಮನೆ ಹಾನಿಗೆ ಸೂಕ್ತ ಪರಿಹಾರ ಒದಗಿಸಲಾಗಿದೆ. ಬೆಳೆ ಹಾನಿ ಪರಿಹಾರ ವಿತರಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆಯಾಗಿದ್ದು, ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಇದು ಕಳೆದ 125 ವರ್ಷಗಳಲ್ಲೇ ಪೂರ್ವ ಮುಂಗಾರು ಮತ್ತು ಮೇ ತಿಂಗಳಲ್ಲಿ ಆದ ಗರಿಷ್ಠ ಪ್ರಮಾಣದ ಮಳೆಯಾಗಿದೆ. ವಾಡಿಕೆಗಿಂತ ಶೇ.197 ರಷ್ಟು ಅತ್ಯಧಿಕ ಮಳೆಯಾಗಿದೆ. ಏಪ್ರಿಲ್‌ 1ರಿಂದ ಮೇ 31ರವರೆಗೆ ಸಿಡಿಲಿನಿಂದ 48, ಮರ ಉರುಳಿ 9, ಮನೆ ಕುಸಿತದಿಂದ 5, ನೀರಿನಲ್ಲಿ ಮುಳುಗಿ, ಭೂ ಕುಸಿತದಿಂದ ತಲಾ 4, ವಿದ್ಯುತ್‌ ಪ್ರವಹಿಸಿ 1 ಸಾವು ಸೇರಿ ಒಟ್ಟು 71 ಮಂದಿ ಸಾವಿಗೀಡಾಗಿದ್ದಾರೆ. ಮೃತರ ವಾರಸುದಾರರಿಗೆ ತುರ್ತು ಪರಿಹಾರವಾಗಿ 5 ಲಕ್ಷ ರು. ವಿತರಿಸಲಾಗಿದೆ. ಅದೇ ರೀತಿ 702 ಪ್ರಾಣಿಹಾನಿಗಳು ಸಂಭವಿಸಿದ್ದು, ಈ ಪೈಕಿ 698 ಪ್ರಕರಣಗಳಲ್ಲಿ ಸಂಬಂಧಿಸಿದವರಿಗೆ ಈಗಾಗಲೇ ಪರಿಹಾರ ವಿತರಿಸಲಾಗಿದೆ. 2068 ಮನೆ ಹಾನಿಯಾಗಿದ್ದು, ಇದರಲ್ಲಿ 1926 ಮನೆಗಳಿಗೆ ಪರಿಹಾರ ನೀಡಲಾಗಿದೆ. ಇದರಲ್ಲಿ 75 ಸಂಪೂರ್ಣ ಮನೆ ಹಾನಿ, ಉಳಿದವರು ಭಾಗಶಃ ಹಾನಿಯಾಗಿವೆ ಎಂದು ವಿವರಿಸಲಾಗಿದೆ.

ಒಟ್ಟಾರೆ 15,378.32 ಹೆಕ್ಟೇರ್‌ ಬೆಳೆ ಹಾನಿಯುಂಟಾಗಿದೆ. ಇದರಲ್ಲಿ ಕೃಷಿ ಬೆಳೆ 11,915.66 ಹೆಕ್ಟೇರ್‌ ಮತ್ತು ತೋಟಗಾರಿಕೆ 3,462.66 ಹೆಕ್ಟೇರ್‌. ಬೆಳೆಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ನಮೂದಿಸಲು ಅವಕಾಶ ಕಲ್ಪಿಸಲಾಗಿದ್ದು, ಪರಿಹಾರ ಪಾವತಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮಕ್ಕೆ ಸೂಚನೆ:

ಮಳೆಗಾಲ ಆರಂಭದಲ್ಲೇ ಈ ಬಾರಿ ಪ್ರವಾಹ, ಗುಡ್ಡ ಕುಸಿತದಂಥ ಪ್ರಕರಣಗಳು ವರದಿಯಾಗುತ್ತಿದ್ದು, ಬರುವ ದಿನಗಳಲ್ಲಿ ಸಾವು-ನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮವಹಿಸಿ. ಮನೆ, ಬೆಳೆ, ಜೀವ ಹಾನಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ತುರ್ತು ಪರಿಹಾರ ಒದಗಿಸುವಂತೆ ಮುಖ್ಯಮಂತ್ರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಳೆ ಹಾನಿಗೆ ಪರಿಹಾರ ನೀಡಲು ಅನುದಾನದ ಕೊರತೆ ಇಲ್ಲ. ಜಿಲ್ಲೆಗಳಲ್ಲಿ ಎಸ್‌ಡಿಆರ್‌ಎಫ್‌ ಅಡಿ ಒಟ್ಟಾರೆ ಒಂದು ಸಾವಿರ ಕೋಟಿ ರು.ಗಳಿಗಿಂತ ಹೆಚ್ಚು ಅನುದಾನ ಲಭ್ಯವಿದೆ. ಅತಿವೃಷ್ಠಿಯಿಂದ ಮನೆಗಳಿಗೆ ಹಾನಿ, ಬೆಳೆ ಹಾನಿ ಸಂಭವಿಸಿದರೆ ತಕ್ಷಣ ಮಾರ್ಗಸೂಚಿ ಅನುಸಾರ ಪರಿಹಾರ ಒದಗಿಸಬೇಕು. ಮನೆ, ಬೆಳೆ ಹಾನಿ, ಜೀವ ಹಾನಿ ಪ್ರಕರಣಗಳಲ್ಲಿ ಖುದ್ದು ಸ್ಥಳಕ್ಕೆ ಬೇಟಿ ನೀಡಿ ಪರಿಹಾರ ವಿತರಿಸುವ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಳೆದ ವರ್ಷ ದಾಖಲೆ ಮಟ್ಟದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಆಗಿತ್ತು, ಈ ವರ್ಷ ಕೂಡ ಕೃಷಿ ಚಟುವಟಿಕೆಗಳು ಚೆನ್ನಾಗಿ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಆಗದಂತೆ ಅಗತ್ಯ ದಾಸ್ತಾನು ಮಾಡಿ ವಿತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

PREV
Read more Articles on

Recommended Stories

ನನ್ನ ಬಗ್ಗೆ ಮಾತನಾಡುವವರಿಗೆ ಸಿಗಂದೂರು ಚೌಡೇಶ್ವರಿ ತಕ್ಕ ಬುದ್ಧಿ ಕಲಿಸಲಿದ್ದಾಳೆ : ಮಧು ಬಂಗಾರಪ್ಪ
ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ